Advertisement
4ನೇ ಹಂತದಲ್ಲಿ 4 ರೀತಿಯ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಿದೆ. ಮುಂದಿನ ತಿಂಗಳು ಈ ಬಾರಿಯ ಅಭಿಯಾನ ಆರಂಭಗೊಂಡು ವರ್ಷಪೂರ್ತಿ ನಡೆಯಲಿದೆ.
ಈ ಬಾರಿಯ ಅಭಿಯಾನದಲ್ಲಿ ಸ್ವಚ್ಛ ಮಂಗಳೂರು (ಪ್ರತಿದಿನ), ಸ್ವಚ್ಛ ಅಭಿಯಾನ (ಪ್ರತಿವಾರ), ಸ್ವಚ್ಛ ದಕ್ಷಿಣ ಕನ್ನಡ/ಸ್ವಚ್ಛ ಗ್ರಾಮ ಹಾಗೂ ಸ್ವಚ್ಛ ಮನಸ್ಸು ಎಂಬ ಕಲ್ಪನೆಯಲ್ಲಿ 4 ಕಾರ್ಯಕ್ರಮ ಸಾಗಲಿದೆ. ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡುವ ನಿಟ್ಟಿನಲ್ಲಿ ಸ್ವಚ್ಛ ಮಂಗಳೂರು ಕಾರ್ಯಕ್ರಮ ಪ್ರತಿದಿನ ಸಂಜೆ ನಡೆಯಲಿದೆ. ಪ್ರತಿದಿನ 100 ಮನೆಗಳಂತೆ ವರ್ಷದ 300 ದಿನ ಸುಮಾರು 60 ತಂಡಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಅಂತಿಮವಾಗಿ 30 ಸಾವಿರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ.
Related Articles
Advertisement
ಸ್ವಚ್ಛ ಮನಸ್ಸು ‘ಮಕ್ಕಳ ಸೈನ್ಯ’ಸ್ವಚ್ಛತೆಯ ಕುರಿತು ಭಾವಿ ಭಾರತದ ಪ್ರಜೆಗಳಾದ ಮಕ್ಕಳಲ್ಲಿ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂಬ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ರಾಮಕೃಷ್ಣ ಮಿಷನ್ ನಿರ್ಧರಿಸಿದೆ. ಇದಕ್ಕೊಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ರೂಪಿಸಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಮಂಗಳೂರು ಉತ್ತರ ಹಾಗೂ ದಕ್ಷಿಣ ಬ್ಲಾಕ್‌ಗಳ 100 ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಶಾಲೆಯ 8 ಮತ್ತು 9ನೇ ತರಗತಿಯ 100 ಮಕ್ಕಳನ್ನು ಆರಿಸಿ ಸ್ವಚ್ಛ ಮನಸ್ಸು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಠದ ಸಂಪನ್ಮೂಲ ವ್ಯಕ್ತಿಗಳು ಪ್ರತಿ ಶಾಲೆಗೂ ಭೇಟಿ ನೀಡಿ ಕಾರ್ಯಕ್ರಮ ಆಯೋಜಿಸಲಿದ್ದು, ಶಾಲೆಯಿಂದಲೂ ಶಿಕ್ಷಕರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಒಂದು ಶಾಲೆಯಲ್ಲಿ ತಿಂಗಳಿಗೊಂದು ಕಾರ್ಯಕ್ರಮದಂತೆ ನವೆಂಬರ್‌ನಿಂದ ಮಾರ್ಚ್‌ವರೆಗೆ 5 ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಮೊದಲನೇ ತಿಂಗಳು ಸ್ವಚ್ಛ ಚಿಂತನ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಇದರಲ್ಲಿ ಉಪನ್ಯಾಸ ಇರುತ್ತದೆ. ಬಳಿಕ ಕ್ರಮವಾಗಿ 2 ತಿಂಗಳು ಸ್ವಚ್ಛ ಸ್ಪರ್ಧೆ, ಸ್ವಚ್ಛತಾ ಮಂಥನ ಕಾರ್ಯಕ್ರಮ ನಡೆಸಲಾಗುತ್ತದೆ. 4ನೇ ತಿಂಗಳಿನಲ್ಲಿ ಸ್ವಚ್ಛತಾ ದಿವಸ್ ನಡೆಯಲಿದ್ದು, ಒಂದೇ ದಿನ 100 ಶಾಲೆಗಳ 10 ಸಾವಿರ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ. ಐದನೇ ತಿಂಗಳು ಸ್ವಚ್ಛತಾ ಮಂಥನ ನಡೆಯಲಿದೆ. ಬಳಿಕ ಪ್ರತಿ ಶಾಲೆಯಿಂದ 15 ಮಕ್ಕಳಂತೆ 1,500 ಮಕ್ಕಳನ್ನು
ಆಶ್ರಮದಲ್ಲಿ ಸೇರಿಸಿ ಅವರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ. ಜತೆಗೆ ಸ್ವಚ್ಛ ಮನಸ್ಸು ಕುರಿತು 10 ಸಾವಿರ ಮಕ್ಕಳು ಕೂಡ ವರದಿಯನ್ನು ನೀಡಲಿದ್ದಾರೆ. ಪ್ರತಿ ಶಾಲೆಯಿಂದ 5
ವಿದ್ಯಾರ್ಥಿಗಳಂತೆ 500 ಮಂದಿಯನ್ನು ಸ್ವಚ್ಛ ಮಂಗಳೂರು ರಾಯಭಾರಿಗಳನ್ನಾಗಿ ಆರಿಸಲಾಗುತ್ತದೆ. ಇದರ ಜತೆಗೆ ಕಾಲೇಜುಗಳಲ್ಲಿ ಕಲಾ ಮೇಳಗಳನ್ನು ಆಯೋಜಿಸಿ ಸಂಶೋಧನಾ ಪ್ರಬಂಧಗಳನ್ನು ತರಿಸಿಕೊಂಡು, ಸಂಶೋಧನಾ ಪುಸ್ತಕವನ್ನೂ ಸಿದ್ಧಪಡಿಸುವ ಗುರಿಯನ್ನು ರಾಮಕೃಷ್ಣ ಮಠ ಹೊಂದಿದೆ. ಅ. 24ರಂದು ಅಧಿಕಾರಿಗಳು ಹಾಗೂ ಶಿಕ್ಷಕರ ಸಭೆ ನಡೆಯಲಿದ್ದು, ಅ. 29ರಂದು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಇರುತ್ತದೆ ಎಂದು ಸ್ವಚ್ಛ ಮನಸ್ಸು ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬಿ.ಯು. ತಿಳಿಸಿದ್ದಾರೆ. ಸ್ವಚ್ಛ ದಕ್ಷಿಣ ಕನ್ನಡ
ರಾಮಕೃಷ್ಣ ಮಿಷನ್‌ನ 4ನೇ ಅಭಿಯಾನದಲ್ಲಿ ಸ್ವಚ್ಛ ಮಂಗಳೂರಿನ ಜತೆಗೆ ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನವನ್ನೂ ನಡೆಸಲಾಗುತ್ತದೆ. ಜಿಲ್ಲೆಯ 100 ಗ್ರಾಮಗಳನ್ನು ಆಯ್ದುಕೊಂಡು ಪ್ರತಿ ಗ್ರಾಮದಲ್ಲಿ 10 ಕಾರ್ಯಕ್ರಮಗಳಂತೆ ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಇದು ದ.ಕ.ಜಿ.ಪಂ.ನ ಸಹಯೋಗದೊಂದಿಗೆ ಗ್ರಾ.ಪಂ.ಪಿಡಿಒ ಹಾಗೂ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ. ಅ. 25ರಂದು ಪೂರ್ವಭಾವಿ ಸಭೆ ನಡೆಸಿ ಗ್ರಾಮಗಳನ್ನು ಆರಿಸಲಾಗುತ್ತದೆ. ಮಕ್ಕಳಲ್ಲಿ ಜಾಗೃತಿ ಕಾರ್ಯ
ಸ್ವಚ್ಛತೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿದಾಗ ಮಾತ್ರ ಅದು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಇನ್ನೊಬ್ಬರನ್ನು ತಲುಪುತ್ತದೆ. ಜತೆಗೆ ಅವರು ತಮ್ಮ ಮನೆಯಲ್ಲೂ ಸ್ವಚ್ಛತೆಯ ಕುರಿತು ಜಾಗೃತರಾಗಿರುತ್ತಾರೆ. ಈ ನಿಟ್ಟಿನಲ್ಲಿ ಸ್ವಚ್ಛ ಮನಸ್ಸು ಕಾರ್ಯಕ್ರಮವನ್ನು ಈ ಬಾರಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.
– ಸ್ವಾಮಿ ಏಕಗಮ್ಯಾನಂದ
ಸಂಚಾಲಕರು,
ಸ್ವಚ್ಛ ಮಂಗಳೂರು ಅಭಿಯಾನ ಕಿರಣ್ ಸರಪಾಡಿ