Advertisement

“ನಾಡಪ್ರಭು ಕೆಂಪೇಗೌಡ’ಚಿತ್ರಕ್ಕೆ ಎಚ್‌ಡಿಕೆ ಸಿದ್ಧತೆ

10:44 AM Jul 21, 2017 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕುರಿತು ಎಚ್‌.ಡಿ. ಕುಮಾರಸ್ವಾಮಿ ಚಿತ್ರ ಮಾಡುವುದಕ್ಕೆ ಸಜ್ಜಾಗಿದ್ದಾರೆ. ತಮ್ಮ ಮಗ ನಿಖೀಲ್‌ ಅಭಿನಯದಲ್ಲಿ “ನಾಡಪ್ರಭು ಕೆಂಪೇಗೌಡ’ ಎಂಬ ಚಿತ್ರ ನಿರ್ಮಿಸುವುದಕ್ಕೆ ಅವರು ಸಿದ್ಧತೆ ನಡೆಸುತ್ತಿದ್ದು, ಚಿತ್ರ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ.

Advertisement

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕುರಿತು ಚಿತ್ರ ಮಾಡಬೇಕೆಂಬುದು ಕುಮಾರಸ್ವಾಮಿ ಅವರ ಹಲವು ವರ್ಷಗಳ ಕನಸಂತೆ. ಅದಕ್ಕೆ ಈಗ ಮುಹೂರ್ತ ಕೂಡಿ ಬಂದಿದ್ದು, ಆಗಸ್ಟ್‌ 13ರಂದು ಚಿತ್ರಕ್ಕೆ ಪೂಜೆ ನೆರವೇರಲಿದೆ. ಬಳಿಕ ಇತಿಹಾಸಕಾರರು ಮತ್ತು ವಿದ್ವಾಂಸರನ್ನೊಳಗೊಂಡ ತಂಡವು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚನೆಯಲ್ಲಿ ತೊಡಗಲಿದೆ. ಸುಮಾರು 8 ತಿಂಗಳ ಪ್ರೀ-ಪ್ರೊಡಕ್ಷನ್‌ ಕೆಲಸದ ನಂತರ, ಏಪ್ರಿಲ್‌ನಲ್ಲಿ ಚಿತ್ರದ ಮುಹೂರ್ತ ನಡೆದು, ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕರು ಆಯ್ಕೆಯಾಗಬೇಕಿದೆ.

“ನಾಡಪ್ರೌಭು ಕೆಂಪೇಗೌಡ’ ಚಿತ್ರದಲ್ಲಿ ಕೆಂಪೇಗೌಡರ ಜೀವನದ ಜತೆಗೆ ಸಾಧನೆ ಮತ್ತು ಮಹತ್ವದ ಕುರಿತು ಬೆಳಕು ಚೆಲ್ಲಲಿದ್ದು, ಹಲವು ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿರುವ ಜಿ.ಕೆ. ಭಾರವಿ ಚಿತ್ರಕಥೆ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಇನ್ನು ತೆಲುಗಿನ “ಬಾಹುಬಲಿ’ ಚಿತ್ರದ ಗ್ರಾಫಿಕ್ಸ್‌ ಕೆಲಸ ಮಾಡಿದ್ದ ತಂಡದವರೇ, ಈ ಚಿತ್ರಕ್ಕೂ ಗ್ರಾಫಿಕ್ಸ್‌ ಕೆಲಸ ಮಾಡಲಿದ್ದು,  ಘವ್‌ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಬಜೆಟ್‌ ವಿಚಾರದಲ್ಲೂ ಈ ಚಿತ್ರವು, ಕನ್ನಡದ ಅತ್ಯಂತ ದೊಡ್ಡ ಬಜೆಟ್‌ ಚಿತ್ರವಾಗಲಿದೆ ಎಂದು ತಿಳಿದು ಬಂದಿದೆ.

ಕೆಂಪೇಗೌಡರಿಗೂ ಮುನ್ನ ಅಭಿಮನ್ಯು ಪಾತ್ರ
“ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೂ ಮುನ್ನ ನಿಖೀಲ್‌ ಕುಮಾರ್‌, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದಲ್ಲಿ ನಟಿಸಲಿದ್ದಾರೆ. ದರ್ಶನ್‌, ದುರ್ಯೋಧನನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಿಖೀಲ್‌, ಅಭಿಮನ್ಯುವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಈ ಚಿತ್ರವು ತಿಂಗಳ ಕೊನೆಗೆ ಪ್ರಾರಂಭವಾಗಲಿದ್ದು, ವರ್ಷದ ಕೊನೆಗೆ ಚಿತ್ರೀಕರಣ ಮುಕ್ತಾಯವಾಗುವ ಸಾಧ್ಯತೆ ಇದೆ. ಈ ಮಧ್ಯೆ ಮಹೇಶ್‌ ರಾವ್‌ ಬರೆದಿರುವ ಕಥೆಯನ್ನು ನಿಖೀಲ್‌ ಹಾಗೂ ಕುಮಾರಸ್ವಾಮಿ ಅವರು ಒಪ್ಪಿದ್ದು, ಆ ಚಿತ್ರ ಸಹ ವರ್ಷಾಂತ್ಯದಲ್ಲಿ
ಪ್ರಾರಂಭವಾದರೆ ಆಶ್ಚರ್ಯವಿಲ್ಲ. ಈ ಎರಡೂ ಚಿತ್ರಗಳ ನಂತರ ನಿಖೀಲ್‌, “ನಾಡಪ್ರಭು ಕೆಂಪೇಗೌಡ’ಚಿತ್ರದಲ್ಲಿ ನಟಿಸಲಿದ್ದಾರೆ. “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ಮತ್ತು ನಿಖೀಲ್‌ ಅಲ್ಲದೆ, ರವಿಚಂದ್ರನ್‌, ಹರಿಪ್ರಿಯಾ, ಸಾಯಿಕುಮಾರ್‌, ರೆಜಿನಾ, ಶ್ರೀನಾಥ್‌ ಮುಂತಾದ ದೊಡ್ಡ ಕಲಾವಿದರ ದಂಡೇ ಇದೆ. ಈ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next