ದೇವನಹಳ್ಳಿ: ಬರಗಾಲದ ನಡುವೆಯೂ ತಾಲೂಕಿನ ಜನರು ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆ ನಡೆಸಿದ್ದಾರೆ. ಮಳೆ ಕೊರತೆಯಿದ್ದರೂ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಉತ್ಸಾಹದಲ್ಲಿದ್ದಾರೆ.
ಪೂರ್ವಜರ ಕಾಲದಿಂದಲೂ ವರಮಹಾಲಕ್ಷ್ಮಿ ವ್ರತ ಆಚರಿಸಿಕೊಂಡು ಬಂದಿದ್ದೇವೆ. ವಸ್ತುಗಳ ಬೆಲೆ ಏರಿಕೆಯಾಗಿವೆ ಎಂಬ ಕಾರಣಕ್ಕೆ ವ್ರತ ಆಚರಣೆ ಮಾಡದಿರಲು ಸಾಧ್ಯವಿಲ್ಲ. ನಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಆಚರಿಸುತ್ತಿದ್ದೇವೆ ಎಂದು ಸಾರ್ವಜನಿಕರು ಅಭಿಪ್ರಾಯಗಳಾಗಿವೆ.
ಹೂ, ಹಣ್ಣುಗಳ ದರ ಏರಿಕೆ: ಮಹಾಲಕ್ಷ್ಮೀ ಪೂಜೆಗೆ ಅವಶ್ಯವಿರುವ ಹೂ, ಹಣ್ಣುಗಳು ಸೇರಿ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿವೆ. ಆದರೂ ಗ್ರಾಹಕರು ಕೊಳ್ಳಲು ಮುಗಿಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿರುವ ಮಹಾಲಕ್ಷ್ಮೀ ಆಕರ್ಷಕ ಮೂರ್ತಿಗಳು ಜನರನ್ನು ಸೆಳೆಯುತ್ತಿದ್ದು, 180 ರಿಂದ 2000 ರೂ. ವರೆಗೆ ಮರುಕಟ್ಟೆಯಲ್ಲಿ ದೊರೆಯುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಮರುಕಟ್ಟೆಯಲ್ಲಿ ಹೂ, ಹಣ್ಣುಗಳ ದರ ಏರಿಕೆ ಕಂಡು ಬಂದಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂ, ಹಣ್ಣು ಬೆಲೆ ಹೆಚ್ಚಾಗಿದ್ದರೂ ಗ್ರಾಹಕರು ಖರೀದಿಯಲ್ಲಿ ಉತ್ಸಾಹ ಕಡಿಮೆಯಾಗಿಲ್ಲ.
ಹೂವು ಭಾರೀ ದುಬಾರಿ: ಕನಾಂಕಬರ ಕೆ.ಜಿ.ಗೆ 2000 ರೂ., ಮಲ್ಲಿಗೆ 1000 ರೂ, ಚೆಂಡು 80 ರೂ., ಸೇವಂತಿಗೆ 200 ರೂ., ಕಾಕಡ 800 ರೂ., ಅಲಂಕಾರಿಕ ಹೂ ಕಟ್ಟು 1ಕ್ಕೆ 100 ರೂ., ಆಸ್ಟ್ರೀಯ ಹೂ 80 ರೂ., ರುದ್ರಾಕ್ಷಿ 100 ರೂ., ಬಟನ್ಸ್ 300 ರೂ., ಮಲ್ಲೇ 800 ರೂ., ಮಾರಿಗೋಲ್ಡ್ 280 ರೂ., ಬಿಳಿ ಸೇವಂತಿಗೆ 400 ರೂ., ಜಾಜಿ 800 ರೂ., ಸಂಪಿಗೆ 300 ರೂ.ಗಳಷ್ಟು ತುಟ್ಟಿಯಾಗಿವೆ.
ಹಣ್ಣುಗಳೂ ತುಟ್ಟಿ: ಸೇಬು ಕೆ.ಜಿ.ಗೆ 140ರಿಂದ200 ರೂ., ಏಲಕ್ಕಿ ಬಾಳೆಹಣ್ಣು 100 ರೂ., ಮೂಸಂಬಿ 60 ರೂ., ಅನಾನಸು ಒಂದು ಜೊತೆಗೆ 60 ರೂ., ಕಿತ್ತಳೆ 100 ರೂ., ಪಚ್ಚಬಾಳೆ 40 ರೂ., ದ್ರಾಕ್ಷಿ 200 ರೂ., ಸಪೋಟ 100 ರೂ., ಮರಸೇಬು 80 ರೂ., ಮಾವಿನ ಹಣ್ಣು 120 ರೂ., ದಾಳಿಂಬೆ 100 ರೂ., ಬಾಳೆಕಂದು 2ಕ್ಕೆ 80ರಿಂದ 100ರೂ., ಕಮಲ 50-80 ರೂ., ಮಾರಾಟವಾಗುತ್ತಿತ್ತು. ಹೂ ಹಣ್ಣಿನ ಜೊತೆ ದಿನಸಿ ಪದಾರ್ಥಗಳ ಬೇಡಿಕೆ ಬೆಲೆ ಏರಿಕೆಯಾಗಿವೆ.
ಮಹಿಳೆಯರು ದೇವಿಗೆ ಹಲವು ರೀತಿಯ ಅಲಂಕಾರ ಮಾಡಿ, ಹೂಗಳು, ಬಣ್ಣ ಬಣ್ಣದ ರಂಗೋಲಿ ಇಡುತ್ತಾರೆ. ದೇವಿಗೆ ಸೀರೆ ಉಡಿಸಿ, ಕೆಂಪು ಬಣ್ಣದ ಗಾಜಿನ ಬಳೆಗಳು ಹಾಗೂ ನಾನಾ ಆಭರಣಗಳನ್ನು ತೊಡಿಸಿ ಪೂಜಿಸಲಾಗುತ್ತದೆ. ವಿವಿಧ ಮುಖ ಬೆಲೆ ನೋಟು ಹಾಗೂ ನಾಣ್ಯಗಳನ್ನು ಇಟ್ಟು ಆರಾಧಿಸುತ್ತಾರೆ.