Advertisement

ಬಯಲಾಟ ಕಲೆಗೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೆ ಸಿದ್ಧತೆ

03:45 AM Feb 19, 2017 | |

ಧಾರವಾಡ: ಉತ್ತರ ಕರ್ನಾಟಕದ 18 ಜಿಲ್ಲೆಗಳಲ್ಲಿ ಪ್ರಚಲಿತವಿರುವ ಸಾಂಪ್ರದಾಯಿಕ ಜಾನಪದ ಗಂಡು ಕಲೆ ಬಯಲಾಟಕ್ಕೆ ಕೊನೆಗೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲು ಸರ್ಕಾರ ತೆರೆಮರೆಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಈ ಸಂಬಂಧ ಉತ್ತರ ಕರ್ನಾಟಕದ ಬಯಲಾಟ ಕಲಾವಿದರು ಮತ್ತು ತಜ್ಞರು ಅನೇಕ ಬಾರಿ ಮುಖ್ಯಮಂತ್ರಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಬಯಲಾಟಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವಂತೆ ಕೋರಿಕೊಂಡಿದ್ದರು. ಇದೀಗ ಮನವಿ ಪುರಸ್ಕರಿಸಿರುವ ಸಚಿವೆ ಉಮಾಶ್ರೀ, ಈ ಬಗ್ಗೆ ಅಧಿಕೃತವಾಗಿ ಬಜೆಟ್‌ನಲ್ಲಿ ಹಣ ಕಾಯ್ದಿರಿಸುವ ಭರವಸೆ ನೀಡಿದ್ದು, ಈ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿದ್ದಾರೆ.

ಎರಡು ದಶಕಗಳ ಹಿಂದೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಲ್ಲೇ ವಿಲೀನಗೊಂಡಿದ್ದ ಉತ್ತರ ಕರ್ನಾಟಕದ ಎಲ್ಲ ಜಾನಪದ ಕಲೆಗಳಿಗೆ ಅಕಾಡೆಮಿಗಳಿಂದ ಸಾಕಷ್ಟು ಪ್ರಾಧಾನ್ಯತೆ ಮತ್ತು ಅವಕಾಶಗಳು ಲಭಿಸದೇ ಹೋಗಿದ್ದರಿಂದ ಇದನ್ನು ವಿಭಜಿಸಬೇಕು ಎನ್ನುವ ಕೂಗು ಎದ್ದಿತ್ತು. 2008ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯನ್ನು ವಿಭಾಗಿಸಲಾಯಿತು. 2009ರ ನ.2ರಂದು ಅಂದಿನ ಬಿಜೆಪಿ ಸರ್ಕಾರ ಜಾನಪದ ಅಕಾಡೆಮಿಯಿಂದ ಯಕ್ಷಗಾನ ಮತ್ತು ಬಯಲಾಟವನ್ನು ಪ್ರತ್ಯೇಕಿಸಿ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸ್ಥಾಪಿಸಿತ್ತು.

ಇದೀಗ ಯಕ್ಷಗಾನ ಮತ್ತು ಬಯಲಾಟ ಎರಡೂ ರಾಜ್ಯದ ಪ್ರಸಿದ್ಧ ಕಲೆಗಳಾಗಿದ್ದು, ಎರಡೂ ಕಲೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರತ್ಯೇಕ ಬಯಲಾಟ ಅಕಾಡೆಮಿ ಸ್ಥಾಪಿಸಬೇಕೆನ್ನುವ ಕೂಗು ಉತ್ತರ ಕರ್ನಾಟಕ ಭಾಗದ ಹಿರಿಯ ಜಾನಪದ ವಿದ್ವಾಂಸರು ಮತ್ತು ಚಿಂತಕರಿಂದ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತ್ಯೇಕ ಬಯಲಾಟ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ.

ಸದ್ಯಕ್ಕೇನು ತೊಂದರೆ:
ಸದ್ಯಕ್ಕೆ ಯಕ್ಷಗಾನ ಅಕಾಡೆಮಿಯೊಂದಿಗೆ ಬಯಲಾಟವೂ ಸೇರಿಕೊಂಡಿದ್ದರಿಂದ ಸರ್ಕಾರ ಕೊಡುವ ಅನುದಾನ,  ಪ್ರಶಸ್ತಿಗಳು, ಪುರಸ್ಕಾರಗಳು, ತರಬೇತಿ ಎಲ್ಲದರಲ್ಲೂ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಗಳು ಸಮನಾಗಿ ಹಂಚಿಕೊಳ್ಳಬೇಕಿದೆ. ಸದ್ಯಕ್ಕೆ ಈ ಅಕಾಡೆಮಿಗೆ ವರ್ಷಕ್ಕೆ 1 ಕೋಟಿ ರೂ. ಅನುದಾನ ಲಭ್ಯವಿದ್ದು, ಇಷ್ಟರಲ್ಲೇ ಇಡೀ ಅಕಾಡೆಮಿಯ ವರ್ಷದ ಎಲ್ಲ ಕಾರ್ಯಕ್ರಮಗಳು ಜರುಗಬೇಕು. ಪ್ರತ್ಯೇಕವಾದರೆ ಹೆಚ್ಚಿನ ಅನುದಾನ ಲಭಿಸಲಿದ್ದು, ಕಲೆ, ಕಲಾವಿದರಿಗೆ ಪ್ರೋತ್ಸಾಹ ಲಭಿಸಲಿದೆ.

Advertisement

ಯಕ್ಷಗಾನ ಅಕಾಡೆಮಿಯಿಂದ ಬಯಲಾಟ ಅಕಾಡೆಮಿಯನ್ನು ಪ್ರತ್ಯೇಕಿಸುವುದರಿಂದ ಹೆಚ್ಚಿನ ಅನುಕೂಲಗಳಿವೆ ಎನ್ನುತ್ತಾರೆ ಜಾನಪದ ವಿದ್ವಾಂಸರು.

ಬಯಲಾಟವು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚಲಿತವಿದ್ದು, ಅಕಾಡೆಮಿಯಿಂದ ಇನ್ನಷ್ಟು ಹೆಚ್ಚು ಪರಿಶ್ರಮ ಹಾಕಿ ಈ ಭಾಗದಲ್ಲಿ ಈ ಕಲೆಯ ಉಳಿವಿಗೆ ಪ್ರಯತ್ನಿಸಬಹುದು. ಇನ್ನು ಬಯಲಾಟಕ್ಕೆ ಸರ್ಕಾರ ಪ್ರತ್ಯೇಕವಾಗಿ ಅನುದಾನ ನೀಡುವುದರಿಂದ ಈ ಭಾಗದ ಬಯಲಾಟ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧಾನಾಟ, ದಪ್ಪಿನ ಆಟಗಳು ಬಯಲಾಟದ ವ್ಯಾಪ್ತಿಗೆ ಸೇರಲಿದ್ದು, ಎಲ್ಲ ಕಲೆ, ಕಲಾವಿದರು ಮತ್ತು ಕಲಾ ವಿದ್ವಾಂಸರು ಒಟ್ಟಿಗೆ ಈ ಕಲೆಗಳನ್ನು ಉಳಿಸುವುದಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ಭಾಗದ ಕಲಾವಿದರಿಗೆ ಪ್ರಾಧಾನ್ಯತೆ ಸಿಕ್ಕಂತಾಗುತ್ತದೆ.

ಅನುದಾನ ನಿರೀಕ್ಷೆ
ಮಾರ್ಚ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನತ್ತ ಉತ್ತರ ಕರ್ನಾಟಕದ ಬಯಲಾಟ ಕಲಾವಿದರ ಚಿತ್ತವಿದ್ದು, ಬಜೆಟ್‌ನಲ್ಲಿ ಈ ಅಕಾಡೆಮಿಗೆ ಪ್ರತ್ಯೇಕ ಅನುದಾನ ಕಾಯ್ದಿರಿಸಿದರೆ, ಇದೇ ವರ್ಷದಿಂದಲೇ ಬಯಲಾಟ ಅಕಾಡೆಮಿ ತನ್ನ ಕಾರ್ಯ ಆರಂಭಿಸಲಿದೆ.

ಉತ್ತರ ಕರ್ನಾಟಕದ ಗಂಡು ಕಲೆ ಬಯಲಾಟ, ದೊಡ್ಡಾಟಗಳು ತೀವ್ರ ಸಂಕಷ್ಟದಲ್ಲಿದ್ದು, ಅವುಗಳನ್ನು ಉಳಿಸಿಕೊಳ್ಳುವುದು ಅಗತ್ಯವಿದೆ. ಹೀಗಾಗಿ ಪ್ರತ್ಯೇಕ ಬಯಲಾಟ ಅಕಾಡೆಮಿ ಸ್ಥಾಪನೆ ಅಗತ್ಯವಿದೆ. ಸರ್ಕಾರ ಆದಷ್ಟು ಬೇಗ ಈ ಕೆಲಸ ಮಾಡಬೇಕು.
– ಬಸವಲಿಂಗಯ್ಯ ಹಿರೇಮಠ, ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ

ಬಯಲಾಟಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿರುವುದು ನಿಜ. ಈ ಕುರಿತು ಉತ್ತರ ಕರ್ನಾಟಕ ಭಾಗದ ಜಾನಪದ ವಿದ್ವಾಂಸರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆ ಭಾಗದ ಜನರಿಗೆ ನಿರಾಸೆಯಾಗದಂತೆ ಸರ್ಕಾರ ಶೀಘ್ರವೇ ಸಿಹಿ ಸುದ್ದಿ ನೀಡಲಿದೆ.
– ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next