Advertisement

ಶ್ರೀಕಂಠೇಶ್ವರನ ರಥೋತ್ಸವಕ್ಕೆ ಸಿದ್ಧತೆ

01:10 PM Apr 06, 2017 | Team Udayavani |

ನಂಜನಗೂಡು: ಉಪ ಚುನಾವಣೆಯ ಭರದಲ್ಲಿರುವ ನಂಜನಗೂಡಿನಲ್ಲೀಗ ಜಾತ್ರೋತ್ಸವ ಪ್ರಾರಂಭವಾಗಿದೆ. ಪಟ್ಟಣದ ಪ್ರಸಿದ್ಧ ಶ್ರೀ ಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆಯ ಅಂಗವಾಗಿ ಏ. 7 ಶುಕ್ರವಾರ ಮುಂಜಾನೆ ಪಂಚಮಹಾರಥೋತ್ಸವ ಅತ್ಯಂತ ವಿಜೃಂಭಣೆ ಯಿಂದ ನೆರವೇರಲು ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.

Advertisement

ಅಂದು ಬೆಳಗ್ಗೆ 5.20 ರಿಂದ 6.20ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ರಥೋತ್ಸವ ನಡೆಯಲಿದ್ದು, ದೇಗುಲದ ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಗಣಪತಿ ರಥಕ್ಕೆ ಮಹಾಮಂಗಳಾರತಿ ಮಾಡಿದ ನಂತರ ರಥಗಳು ಚಲಿಸಲಿವೆ.

ಮೊದಲಿಗೆ ಗಣಪತಿ ರಥ ನಂತರ ಶ್ರೀಕಂಠೇ ಶ್ವರ, ಪಾರ್ವತಿ ಅಮ್ಮನವರ ರಥ, ಸುಬ್ರಹ್ಮಣ್ಯ ರಥ, ಕೊನೆಯದಾಗಿ ಚಂಡಿಕೇಶ್ವರ ರಥಗಳು ಹೊರಡಲಿದ್ದು, ಈಗಾಗಲೇ 5 ರಥಗಳನ್ನು ದುರಸ್ತಿಗೊಳಿಸಿ, ಹೊಸ ಬಣ್ಣ ಬಳಿದು, ಬಂಟಿಂಗ್ಸ್‌ ಹಾಗೂ ತಳಿರು ತೋರಣಗಳಿಂದ ರಥ ಹಾಗೂ ದೇವಾಲಯದ ಆವರಣವನ್ನು ಸಿದ್ಧಗೊಳಿಸಲಾಗಿದೆ.

ಜಿಲ್ಲಾಧಿಕಾರಿ ರಂದೀಪ್‌ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆದು ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೂಲಭೂತ ಸೌಕರ್ಯ ಒದಗಿಸಬೇಕು, ಯಶಸ್ವಿಯಾಗಿ ಜಾತ್ರೆ ನಡೆಯಲು ಆಯಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿ ಕೊಳ್ಳಬೇಕೆಂದು ಈಗಾಗಲೇ ಸೂಚಿಸಿದ್ದಾರೆ.

ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ ಮಾರ್ಗದರ್ಶನದಲ್ಲಿ ಎಎಸ್‌ಪಿ ಮಹಮದ್‌, ಸುಚಿತ್‌, ಸಿಪಿಐ ಶಿವಮೂರ್ತಿ ನೇತೃತ್ವದಲ್ಲಿ ಎಲ್ಲಾ ರೀತಿಯ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯಿಂದ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.

Advertisement

ಕಳೆದ ಬಾರಿಯ ರಥೋತ್ಸವದ ಸಮಯದಲ್ಲಿ ರಥ ಬೀದಿಯ ದುರಸ್ತಿ ಜವಾಬ್ದಾರಿ ವಹಿಸಿಕೊಂಡಿದ್ದ  ರಾಜ್ಯ ಭೂ ಸೇನಾ ನಿಗಮ ಮಾಡಿದ ಕಳಪೆ ಕಾಮಗಾರಿ ಹೊಸದಾಗಿ ಅಗೆದ ರಾಜ್ಯ ಲೋಕೋಪಯೋಗಿ ಇಲಾಖೆ ಅಂದು ಹೊಂಡಬಿದ್ದ ರಸ್ತೆಯನ್ನು 10 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ದುರಸ್ತಿ ಮಾಡಿದ್ದು ಇದೂ ಸಹ ತಾತ್ಕಾಲಿಕವಾಗಿದೆ. ರಥೋತ್ಸವ ನಂತರ  10 ಕೋಟಿ ವೆಚ್ಚದಲ್ಲಿ ರಥಬೀದಿಯ ನವೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

ದೇಗುಲದ ಕಾರ್ಯನಿರ್ವಾಹಕ  ಅಧಿಕಾರಿ ಜಯಪ್ರಕಾಶ  ಸೇರಿದಂತೆ ಇತರ ಅಧಿಕಾರಿಗಳು ಜಾತ್ರೆಗೆ ಬರುವ ಭಕ್ತಾದಿಗಳಿಗೆ ದೇಗುಲದಲ್ಲಿ ಸುಗಮ ರೀತಿಯಲ್ಲಿ ದರ್ಶನ, ಪ್ರಸಾದ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯ ನೀಡಲು ಕ್ರಮ ಕೈಗೊಂಡಿದ್ದಾರೆ. ದೇಗುಲದ ಪ್ರಮುಖ ಸ್ಥಳಗಳಲ್ಲಿ ಹಾಗೂ ಕಪಿಲಾ ನದಿ ದಡದಲ್ಲಿ ಸಿಸಿ ಟಿ.ವಿ ಅಳವಡಿಸ ಲಾಗಿದೆ. ಅನೇಕ ಸಂಘ ಸಂಸ್ಥೆಗಳು ಬರುವ ಭಕ್ತಾದಿಗಳಿಗೆ ಬೃಹತ್‌ ಅನ್ನ ಸಂತರ್ಪಣೆ, ಪಾನಕ ವಿತರಿಸಲು ಸಿದ್ಧತೆ ಮಾಡಿಕೊಂಡಿವೆ.

ಪುರಸಭೆಯವರು ಮುಂಜಾಗ್ರತೆ ಕ್ರಮವಾಗಿ ಹೋಟೆಲ್‌ಗ‌ಳಲ್ಲಿ ಸ್ವತ್ಛತೆ ಕಾಪಾಡಿ ಬಿಸಿನೀರು ನೀಡಲು ಸೂಚಿಸಿರುವುದಲ್ಲದೆ, ರಸ್ತೆ ಬದಿಗಳಲ್ಲಿ ತೆರದಿಟ್ಟ ಹಣ್ಣುಗಳನ್ನು ಮಾರುವುದನ್ನು ನಿಷೇಧಿಸಿದ್ದಾರೆ. ಭಕ್ತಾದಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಯಿಂದ ವಿಶೇಷ ಬಸ್‌ ಮತ್ತು ರೈಲ್ವೆ ಇಲಾಖೆಯಿಂದ ವಿಶೇಷ ಹೆಚ್ಚುವರಿ ಬೋಗಿಯನ್ನು ಹಾಕಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next