Advertisement

ನಾಗರಪಂಚಮಿ ಸಂಭ್ರಮಕ್ಕೆ ಭರದ ಸಿದ್ಧತೆ

08:55 AM Jul 27, 2017 | Harsha Rao |

ಮಹಾನಗರ: ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನ ಬೆಲೆ ಗಗನಕ್ಕೇರಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಚೆಂಡಿಗೆ 70 ರೂ.ಗಳಿದ್ದ ಮಲ್ಲಿಗೆಗೆ ಬುಧವಾರ 250 ರೂ.ಗಳಾಗಿದೆ. 

Advertisement

ಕೆಲ ದಿನಗಳ ಹಿಂದೆ ನಗರದ ಮಾರ್ಕೆಟ್‌ಗಳಲ್ಲಿ ಚೆಂಡಿಗೆ 60, 70 ರೂ.ಗಳಂತೆ ಮಲ್ಲಿಗೆ ಮಾರಾಟವಾಗುತ್ತಿತ್ತು. ಆದರೆ ಮಂಗಳವಾರ ಏಕಾಏಕಿ 90 ರೂ. ಗಳಷ್ಟು ಬೆಲೆ ಏರಿಕೆಯಾಗಿದ್ದು, 180 ರೂ.ಗಳಿಗೆ ಮಾರಾಟವಾಗುತ್ತಿತ್ತು. 

ಬುಧವಾರ ಮತ್ತೆ 70 ರೂ.ಗಳಷ್ಟು ಏರಿಕೆ ಕಂಡಿದ್ದು, ಒಂದು ಚೆಂಡಿನ ಬೆಲೆ 250 ರೂ.ಗಳಾಗಿವೆ. ಆ ಮೂಲಕ ಕಳೆದ ಎರಡೇ ದಿನದಲ್ಲಿ ಮಲ್ಲಿಗೆ ಬೆಲೆಯಲ್ಲಿ ಸುಮಾರು 180 ರೂ.ಗಳಷ್ಟು ಏರಿಕೆ ಕಂಡಿದೆ.

ಉಳಿದಂತೆ ಹಿಂಗಾರಕ್ಕೆ 250 ರೂ. ಇದ್ದರೆ, ಗುಲಾಬಿಗೆ ಮೊದಲಿನಂತೆಯೇ 5 ರೂ. ಬೆಲೆ ಇದೆ. ಪಂಚಮಿ ಹಬ್ಬಕ್ಕಾಗಿ ಸೀಯಾಳ ಖರೀದಿ ಭರಾಟೆಯೂ ಜೋರಾಗಿದ್ದು, ನಗರದ ಕೆಲವೆಡೆ 25 ರೂ.ಗಳಿಂದ 30 ರೂ.ಗಳಿದ್ದ ಸೀಯಾಳ ಬೆಲೆ 40 ರೂ. ಗಳಷ್ಟು ಹೆಚ್ಚಾಗಿದೆ. ಗೆಂದಾಳೆ ಸೀಯಾಳಕ್ಕೂ ಕೆಲವೆಡೆ 40 ರೂ.ಗಳಿಂದ 45 ರೂ.ಗಳನ್ನು ತೆಗೆದುಕೊಳ್ಳಲಾಗುತ್ತಿದೆ. 

ಆದರೆ ಹಣ್ಣುಗಳ ಬೆಲೆಯಲ್ಲಿ ಅಷ್ಟೇನೂ ಹೆಚ್ಚಳ ಆಗಿಲ್ಲ. ಬಾಳೆಹಣ್ಣು ಬೆಲೆ 40 ರೂ. ಗಳಿಂದ 50 ರೂ. ಗಳಿಗೆ ಏರಿಕೆಯಾದರೆ, ಉಳಿದೆಲ್ಲ ಹಣ್ಣುಗಳ ಬೆಲೆ ಸ್ಥಿರವಾಗಿದೆ. ಕಿತ್ತಳೆಗೆ 50 ರೂ.ಗಳಿಂದ 60 ರೂ., ಸೇಬು ಹಣ್ಣಿಗೆ 140 ರೂ. ಮತ್ತು 200 ರೂ.ಗಳಿದ್ದು, ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಸೆಂಟ್ರಲ್‌ ಮಾರ್ಕೆಟ್‌ನ ಅಧ್ಯಕ್ಷರು ತಿಳಿಸಿದ್ದಾರೆ.  

Advertisement

ಜಿಲ್ಲೆಯಾದ್ಯಂತ ಗುರುವಾರ ನಾಗರ ಪಂಚಮಿ ಸಂಭ್ರಮ. ಪ್ರಸಿದ್ಧ ನಾಗಾರಾಧನಾ ತಾಣಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರ ಜಿಲ್ಲೆಯಲ್ಲೇ ಇರುವುದರಿಂದ ನಾಗರ ಪಂಚಮಿ ಈ ಭಾಗದ ಜನಗಳಿಗೆ ವಿಶೇಷ ಹಬ್ಬ. ಅದಕ್ಕಾಗಿಯೇ ಜಿಲ್ಲೆಯ ಜನತೆ ಈಗಾಗಲೇ ಭರ್ಜರಿ ಸಿದ್ಧತೆ  ಆರಂಭಿಸಿದ್ದು, ಹೂವು, ಹಣ್ಣು, ಸೀಯಾಳ ಖರೀದಿ ಭರಾಟೆ ಬಿರುಸಿನಿಂದ ನಡೆಯುತ್ತಿದೆ. 

ನಾಗನಿಗೆ ಪ್ರಿಯವಾದ ಕೇದಗೆ ಮತ್ತು ಸಂಪಿಗೆ ಹೂವಿಗೆ ನಗರದಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. 

ತರಕಾರಿ ಬೆಲೆ ಹೆಚ್ಚಳ
ಹಬ್ಬದ ಪ್ರಯುಕ್ತ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆ ಕಂಡ ಟೊಮೇಟೊ ಈಗ 70 ರೂ.ಗಳಿಗೆ ಮಾರಾಟವಾಗುತ್ತಿದೆ. ಈರುಳ್ಳಿ 15 ರೂ., ಬೀನ್ಸ್‌  56 ರೂ., ಸೌತೆ 34 ರೂ., ಅಲಸಂಡೆ 50 ರೂ., ತೊಂಡೆಕಾಯಿ 50 ಮತ್ತು 120 ರೂ. ಗಳಿಗೆ ಮಾರಾಟವಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿ ತರಕಾರಿ ಅವಶ್ಯವಿದ್ದು, ಹಾಸನ, ಚಿಕ್ಕಮಗಳೂರು, ಕೋಲಾರ ಮುಂತಾದೆಡೆಗಳಿಂದ ತರಿಸಲಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ ಪೂಜಾ ಸಿದ್ಧತೆ
ನಾಗರಪಂಚಮಿ ಹಿನ್ನೆಲೆಯಲ್ಲಿ ನಗರದ ವಿವಿಧ  ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ಪುರಸ್ಕಾರಗಳಿಗೆ ಸಿದ್ಧತೆ ನಡೆಯುತ್ತಿದೆ. ಪ್ರಸಿದ್ಧ ನಾಗಾರಾಧನಾ ತಾಣವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗದೇವರ ಆರಾಧನೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಮಹಾಲಿಂಗೇಶ್ವರ, ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥನ ಸನ್ನಿಧಿ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ನಾಗರ ಪಂಚಮಿ ನಡೆಯಲಿದೆ. ವಿವಿಧ ಧಾರ್ಮಿಕ ಸ್ಥಳಗಳಲ್ಲಿ ತಂಬಿಲ ಸೇವೆ, ನಾಗರಕಟ್ಟೆಯಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next