ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆ ಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೊಸ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಗೆ ಅಣಿಯಾಗಲಿದ್ದಾರೆ. ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಹಣಕಾಸು ಖಾತೆಯನ್ನು ತಮ್ಮಲ್ಲೆ ಉಳಿಸಿಕೊಳ್ಳಲಿದ್ದು, ಬಿ.ಎಸ್.ಯಡಿಯೂರಪ್ಪ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ. ಮಂತ್ರಿಮಂಡಲ ರಚನೆಯಾದ ತಿಂಗಳೊಳಗೆ ಬಜೆಟ್ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆಗೂ ಮೊದಲು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಘೋಷಿಸಿರುವ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು, ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು, ಬಜೆಟ್ ರಚನೆಗೆ ಸಿದ್ಧತೆ ಆರಂಭವಾಗಿದೆ. ವಿವಿಧ ಇಲಾಖೆಗಳಿಂದ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಇದಕ್ಕಾಗಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ನೇಕಾರರ ಮತ್ತು ಮೀನುಗಾರರ ಸಾಲವನ್ನು ಈಗಾಗಲೇ ಮನ್ನಾ ಮಾಡಿರುವುದರಿಂದ ರೈತರ ಕಲ್ಯಾಣಕ್ಕೆ ಅಗತ್ಯವಿರುವ ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ಅಲ್ಲದೆ, ಕೇಂದ್ರ ಸರ್ಕಾರದ ಜನಸ್ನೇಹಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಹಾಗೂ ಜನ ಸಾಮಾನ್ಯರಿಗೆ ಅದನ್ನು ಸೂಕ್ತ ಸಮಯದಲ್ಲಿ ತಲುಪಿಸಲು ಬೇಕಾದ ಕಾರ್ಯತಂತ್ರವನ್ನು ರೂಪಿಸುವ ಸಾಧ್ಯತೆಯಿದೆ.
ನೇಗಿಲಯೋಗಿ ಯೋಜನೆ ಜಾರಿ ಸಾಧ್ಯತೆ: 20 ಲಕ್ಷ ಸಣ್ಣ, ಅತಿ ಸಣ್ಣ ಒಣಭೂಮಿ ಬೇಸಾಯಗಾರರಿಗೆ 10 ಸಾವಿರ ರೂ.ಆರ್ಥಿಕ ನೆರವು ನೀಡುವ ನೇಗಿಲಯೋಗಿ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆಯಿದೆ. ಜತೆಗೆ 5,000 ಕೋಟಿ ರೂ.ಮೊತ್ತದ ರೈತ ಬಂಧು ಆವರ್ತ ನಿಧಿ. ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಕೆರೆಗಳ ಪುನಶ್ಚೇತನಕ್ಕಾಗಿ 1.5 ಲಕ್ಷ ಕೋಟಿ ರೂ.ವೆಚ್ಚದಲ್ಲಿ “ಸುಜಲಾಂ ಸುಫಲಾಂ ಕರ್ನಾ ಟಕ’ ಘೋಷಣೆ ಅನುಷ್ಠಾನ ಮಾಡುವುದರ ಜತೆಗೆ ಮುಖ್ಯಮಂತ್ರಿ ಕೃಷಿ ಫೆಲೋಶಿಫ್ ಅಡಿಯಲ್ಲಿ ರೈತರಿಗೆ ಇಸ್ರೇಲ್ ಪ್ರವಾಸ ಯೋಗವೂ ಬರುವ ಸಾಧ್ಯತೆ ಇದೆ.
ಕರ್ನಾಟಕ ಗೋಹತ್ಯಾ ನಿಷೇಧ-2012ರ ಕಾಯ್ದೆ ಮರು ಜಾರಿ ಮಾಡಿ, ಗೋ ಸೇವಾ ಆಯೋಗ ಪುನಾರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಸ್ತ್ರೀ ಉನ್ನತಿ ನಿಧಿ ಸ್ಥಾಪನೆ, ಸ್ತ್ರೀ ಶಕ್ತಿ ಸಂಘಗಳಿಗೆ ಶೇ.1ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಕರ್ನಾಟಕ ಮಹಿಳಾ ಎಂಟರ್‌ಪ್ರೈಸಸ್ ಕ್ಲಸ್ಟರ್ ಕಾರ್ಯಕ್ರಮ ಕೂಡ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ. ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ನ್ಯಾಪ್ಕಿನ್, ಉಳಿದ ಮಹಿಳೆ
ಯರಿಗೆ 1 ರೂ.ದರದಲ್ಲಿ ಸ್ಯಾನಿಟಿರಿ ನ್ಯಾಪ್ಕಿನ್, ಭಾಗ್ಯ ಲಕ್ಷ್ಮೀ ಬಾಂಡ್ ಮೊತ್ತ 2 ಲಕ್ಷ ರೂ.ಗೆ ಹೆಚ್ಚಳ ಮೊದಲಾದ ಜನಪ್ರಿಯ ಯೋಜನೆ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಎಸಿಬಿ ರದ್ದು, ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಜಾರಿ ಸಾಧ್ಯತೆ: ಲೋಕಾಯುಕ್ತ ಬಲವರ್ಧನೆ, ಎಸಿಬಿ ರದ್ದು, ಮುಖ್ಯಮಂತ್ರಿ ಕಚೇರಿ ಅಡಿಯಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ, ನದಿ ನೀರು ಮತ್ತು ಮೇಲ್ಮೆ„ ನೀರು ಬಳಸಿ ಶುದ್ಧ ಕುಡಿಯುವ ನೀರು ಯೋಜನೆ ರೂಪಿಸಲು ಪ್ರತ್ಯೇಕ ಸಚಿವಾಲಯ, ಮುಖ್ಯಮಂತ್ರಿ ಗ್ರಾಮ ರಸ್ತೆ ಮತ್ತು ಸಾರಿಗೆ ಮಿಷನ್, ಮುಖ್ಯಮಂತ್ರಿ ನಗರೋತ್ಥಾನ ಯೋಜನೆ, ದೇವಸ್ಥಾನಗಳ ಆದಾಯ ಸಂಪೂರ್ಣವಾಗಿ ದೇವ ಸ್ಥಾನಗಳ ಖರ್ಚಿಗೆ ಮೀಸಲು ಕಾರ್ಯಕ್ರಮ, ಜತೆಗೆ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಘೋಷಣೆ ಮಾಡಿರುವ ಬಹುತೇಕ ಎಲ್ಲ ಅಂಶಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಅನುದಾನ ನಿರೀಕ್ಷೆ: ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ಸುಲಭದಲ್ಲಿ ನೀಡುವ ನಿರೀಕ್ಷೆ ಇರುವುದರಿಂದ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಹತ್ತಾರು ಪ್ರಮುಖ ಅಂಶಗಳನ್ನು ಬಜೆಟ್ ಮೂಲಕ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
* ರಾಜು ಖಾರ್ವಿ ಕೊಡೇರಿ