Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಿದ್ಧತೆ

11:21 PM Jun 06, 2020 | Sriram |

ಮಹಾನಗರ: ಲಾಕ್‌ಡೌನ್‌ ನಿಂದ ಸುದೀರ್ಘ‌ ಅವಧಿಗೆ ಭಕ್ತರ ದರ್ಶನಕ್ಕೆ ತೆರೆಯದ ದೇವಸ್ಥಾನಗಳು ಜೂ. 8ರಿಂದ ಮತ್ತೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಿದ್ದು, ಅದರಂತೆ ಮಂಗಳೂರಿನಲ್ಲಿಯೂ ಬಹುತೇಕ ದೇವ ಸ್ಥಾನಗಳಲ್ಲಿ ಭಕ್ತರ ಸ್ವಾಗತಕ್ಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ.

Advertisement

ಸುಮಾರು ಎರಡೂವರೆ ತಿಂಗಳ ಲಾಕ್‌ಡೌನ್‌ ಬಳಿಕ ಜೂ. 1ರಿಂದ ದೇವಸ್ಥಾನ ಗಳ ಭೇಟಿಗೆ ಅವಕಾಶ ನೀಡುವುದಾಗಿ ಸರಕಾರ ಹೇಳಿ ಅದಕ್ಕೆ ಪೂರಕವಾಗುವ ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು. ಆದರೆ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದ ಕಾರಣ ಆ ನಿರ್ಧಾರವನ್ನು ಮುಂದೂಡಲಾಗಿತ್ತು. ಇದೀಗ ಜೂ. 8ರಿಂದ ಮತ್ತೆ ದೇವಸ್ಥಾನ ಗಳ ಭೇಟಿಗೆ ಅವಕಾಶ ಕಲ್ಪಿಸಿ ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಸಿದ್ಧತಾ ಕಾರ್ಯಗಳು ಆರಂಭವಾಗಿವೆ.

ಮಂಗಳಾದೇವಿಯಲ್ಲಿ ಸಿದ್ಧತೆ
ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶನಿವಾರ ಸ್ವತ್ಛತಾ ಕಾರ್ಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕುವ ಕೆಲಸಗಳು ನಡೆದವು.

ಕುದ್ರೋಳಿಯಲ್ಲಿ ತಯಾರಿ
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಭಕ್ತರಿಗೆ ಸಾಮಾಜಿಕ ಅಂತರ ಪಾಲನೆಯೊಂದಿಗೆ ದೇವರ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಜೂ. 8ರಂದು ಬೆಳಗ್ಗೆ 8.30ರಿಂದ ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ಮುಕ್ತಿಗಾಗಿ ಧನ್ವಂತರಿ ಯಾಗ ನಡೆಯಲಿದೆ. 11.30ಕ್ಕೆ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆ ಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.

Advertisement

ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ
ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂರ್ವ ಸಿದ್ಧತೆಗಳು ಆರಂಭವಾಗಿದ್ದು, ಸರಕಾರಿ ನಿಯಮ ದಂತೆಯೇ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದೇವಸ್ಥಾನದಲ್ಲಿ ದೇವರ ದರ್ಶನವು 8ರಂದು ಬೆಳಗ್ಗೆ 8ರಿಂದ 11.30, ಸಂಜೆ 5ರಿಂದ 6.30ರವರೆಗೆ ಲಭ್ಯವಿದೆ.

ಪೊಳಲಿಯಲ್ಲಿ ಅಗತ್ಯ ಸಿದ್ಧತೆ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಗತ್ಯ ಸಿದ್ಧತೆಗಳಾ ಗುತ್ತಿದ್ದು, ಸರಕಾರಿ ನಿಯಮದಂತೆಯೇ ಅವಕಾಶ ನೀಡಲಾಗುತ್ತದೆ.

ಕದ್ರಿ ಶ್ರೀ ಮಂಜುನಾಥ
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕುಡುಪು ಶ್ರೀ ಅನಂತಪದ್ಮನಾಭ ದೇವ ಸ್ಥಾನ, ಕೊಡಿಯಾಲಬೈಲ್‌ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಹಿತ ನಗರದ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿಯೂ ಸಿದ್ಧತೆಗಳು ನಡೆಯುತ್ತಿವೆ. ಕದ್ರಿ ದೇಗುಲದಲ್ಲಿ ಶನಿವಾರ ಸ್ವತ್ಛತಾ ಕಾರ್ಯ ನಡೆಸಲಾಗಿದೆ.

ಕಟೀಲು ದೇಗುಲ ತೆರೆಯುವುದಿಲ್ಲ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲವನ್ನು ಜೂ. 8ರಂದು ತೆರೆಯದಿರಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.

ದೇವಸ್ಥಾನ ತೆರೆದಲ್ಲಿ ಹೆಚ್ಚಿನ ಭಕ್ತರು ಬರಲಿದ್ದು, ಆಗ ಹತೋಟಿಗೆ ತರುವುದು ಕಷ್ಟ. ದೇಗುಲ ಹೊರಬದಿ ಭಕ್ತರನ್ನು ನಿಲ್ಲಿಸುವ ವ್ಯವಸ್ಥೆಯೂ ಇಲ್ಲ. ಈಗಾಗಲೇ ಕಟೀಲು ಗ್ರಾ.ಪಂ. ವ್ಯಾಪ್ತಿ, ಕಟೀಲಿಗೆ ತಾಗಿರುವ ಎಕ್ಕಾರು ಪಂ. ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ದಾಖಲಾಗಿದೆ. ಕಟೀಲಿಗೆ ಹೊರರಾಜ್ಯಗಳ ಭಕ್ತರೂ ಬರುವು ದರಿಂದ ಈ ಕುರಿತು ಯಾವ ನಿರ್ಧಾರ ಕೈಗೊಳ್ಳಬೇಕೆಂದು ಸರಕಾರದಿಂದ ಸೂಚನೆ ಬಂದಿಲ್ಲ. ಹಾಗಾಗಿ ನಿಯಮಿತ ಜನರನ್ನಷ್ಟೇ ದರ್ಶನಕ್ಕೆ ಕರೆಸಿಕೊಳ್ಳಲು ತಿರುಪತಿ ದೇಗುಲದಲ್ಲಿರುವಂತೆ ಆನ್‌ಲೈನ್‌ ದರ್ಶನ ಟಿಕೆಟ್‌ಗಳ ಸೇವೆಯನ್ನು ಕಟೀಲಿನಲ್ಲಿ ಉಚಿತವಾಗಿ ಭಕ್ತರು ಪಡೆದುಕೊಳ್ಳುವ ವ್ಯವಸ್ಥೆಗಾಗಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಸದ್ಯವೇ ಕೈಸೇರಲಿದೆ. ಅನಂತರ ಭಕ್ತರಿಗೆ ಮಾಹಿತಿ ನೀಡಿ ಹಂತ ಹಂತವಾಗಿ ದೇಗುಲ ವನ್ನು ತೆರೆಯುವ ಬಗ್ಗೆ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.ಆದಷ್ಟು ಬೇಗ ಎಲ್ಲ ವ್ಯವಸ್ಥೆಗಳನ್ನು ಸಜ್ಜುಗೊಳಿಸಿ ದೇವಸ್ಥಾನ ತೆರೆಯಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next