Advertisement

ಜನಪ್ರಚಾರ 2.0ಗೆ ಸಿದ್ಧತೆ; ಸೋತ 144 ಕ್ಷೇತ್ರಗಳಲ್ಲಿ ಗ್ರಾಮ ವಾಸ್ತವ್ಯ

01:07 AM Oct 13, 2022 | Team Udayavani |

ಹೊಸದಿಲ್ಲಿ: ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕೈತಪ್ಪಿದ್ದ 144 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಈಗಾಗಲೇ ಚುನಾವಣ ತಂತ್ರ ಆರಂಭಿಸಿದೆ. 2024ರ ಚುನಾವಣೆಗಾಗಿ ಒಂದು ಹಂತದ ಸಿದ್ಧತೆಯ ಕಾರ್ಯಗಳು ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿಯೇ ಎರಡನೇ ಹಂತದ ಸಿದ್ಧತೆ ಮತ್ತು ಪ್ರಚಾರ ಆರಂಭಿಸಲಿದೆ.

Advertisement

ಈ ಉದ್ದೇಶಕ್ಕಾಗಿಯೇ ವಿಶೇಷ ನೀಲ ನಕ್ಷೆ ರೂಪಿಸಿಕೊಂಡಿರುವ ಬಿಜೆಪಿ ವರಿಷ್ಠರು ಕೇಂದ್ರ ಸಚಿವರು ಹಾಗೂ ಚುನಾವಣ ಉಸ್ತುವಾರಿಗಳಿಗೆ ಕೆಲಸ ಕೊಟ್ಟಿದೆ. ಪ್ರತೀ ವಾರಕ್ಕೊಮ್ಮೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಾಸ್ತವ್ಯ, ಕೇಂದ್ರ ಸರಕಾರದಿಂದ ಜಾರಿಯಾಗಿರುವ ಯೋಜನೆಗಳ ಫ‌ಲಾನುಭವಿಗಳ ಪಟ್ಟಿ ತಯಾರಿಸುವುದು, ಬೂತ್‌ ಮಟ್ಟದಲ್ಲಿ ಸಾರ್ವಜನಿಕರ ಜತೆಗೆ ಸಮಾಲೋಚನೆ ಸೇರಿದಂತೆ ಹಲವು ಟಾಸ್ಕ್ಗಳನ್ನು ನೀಡಿದೆ.

ಜನ ಕೇಂದ್ರೀಕೃತ ಪ್ರಚಾರ: 2019ರ ಚುನಾವಣೆ ಯಲ್ಲಿ ಪಕ್ಷ ಸೋಲು ಅನುಭವಿಸಿದ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕು. ಮತದಾರರನ್ನು ಕೇಂದ್ರೀಕರಿಸಿ ಅವರ ಸಮಸ್ಯೆಗಳ ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಚಾರ-ಚರ್ಚೆ ನಡೆಸಬೇಕು. ಈ ನಿಟ್ಟಿನಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ರ್‍ಯಾಲಿ ನಡೆಸುವ ಬಗ್ಗೆ ಯಾವ ರೀತಿ ಕಾರ್ಯತಂತ್ರ ನಡೆಸಬೇಕು ಎಂಬ ಬಗ್ಗೆ ಸಲಹೆ ನೀಡಲು ಸಮಿತಿ ಇದ್ದು, ಅವರು ಅಲ್ಲಿ ಗೆಲ್ಲುವ ತಂತ್ರ ರೂಪಿಸಬೇಕು.

ಕ್ಲಸ್ಟರ್‌ ಉಸ್ತುವಾರಿ ಜವಾಬ್ದಾರಿ: ಪ್ರತೀ ಕ್ಲಸ್ಟರ್‌ಗಳ ಉಸ್ತುವಾರಿಗಳು ತಿಂಗಳಿಗೆ ಒಂದು ಪ್ರವಾಸ ನಡೆಸಬೇಕು ಮತ್ತು ಲೋಕಸಭಾ ಪ್ರಭಾರಿಗಳೊಂದಿಗೆ ಒಂದು ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಲೋಕಸಭಾ ಮತ್ತು ವಿಧಾನಸಭಾ ಮುಖ್ಯ ಸಮಿತಿಗಳೊಂದಿಗೆ ಸಭೆ ನಡೆಸಬೇಕು.

ಲೋಕಸಭಾ ಪ್ರಭಾರಿ ಜವಾಬ್ದಾರಿ: ಪ್ರತೀ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಬೇಕು. ಜಾತಿಯ ಅಂಕಿ-ಅಂಶ, ಚುನಾವಣ ದಿನಾಂಕ, ಅಲ್ಲಿನ ಟ್ರೆಂಡ್‌ಗಳ ದಾಖಲೆ ನಿರ್ಮಿಸಬೇಕು. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಅವರ ರ್‍ಯಾಲಿಗೆ ಸೂಕ್ತ ದಿನ ನಿರ್ಧರಿಸಬೇಕು. ಕ್ಷೇತ್ರಗಳ ಸಮಿತಿ ಗಳೊಂದಿಗೆ ತಿಂಗಳಿಗೆ ಎರಡು ಬಾರಿ ವರ್ಚುವಲ್‌ ಸಭೆ ನಡೆಸಬೇಕು.

Advertisement

ವಿಧಾನಸಭಾ ಪ್ರಭಾರಿ ಜವಾಬ್ದಾರಿ: ಪ್ರತೀ ವಾರಕ್ಕೊಮ್ಮೆ ಗ್ರಾಮ ವಾಸ್ತವ್ಯ. ರಾಜ್ಯ ಬಿಜೆಪಿ ಸರಕಾರಗಳ ಹಾಗೂ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಪುಸ್ತಕ ರಚನೆ ಮಾಡಬೇಕು.

ಗುಂಪುಗಳ ರಚನೆ: ಚುನಾವಣ ತಯಾರಿಗೆಂದೇ ಬಿಜೆಪಿ ಹಲವು ಗುಂಪುಗಳನ್ನು ರಚಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಸಾಧನೆ ಬಿತ್ತುವುದಕ್ಕಾಗಿ, ಬೂತ್‌ ಮಟ್ಟದಲ್ಲೂ ವಾಟ್ಸ್‌ಆ್ಯಪ್‌ ಗುಂಪು ರಚಿಸಿಕೊಂಡು ಪ್ರಚಾರ ಮಾಡುವುದಕ್ಕಾಗಿ “ಸೋಶಿ ಯಲ್‌ ಮೀಡಿಯಾ ತಂಡ’, ಬಿಜೆಪಿ ಕಾರ್ಯಕರ್ತರ ಮೇಲೆ ವಿಪಕ್ಷಗಳ ಹಲ್ಲೆಗಳ ಬಗ್ಗೆ ಚರ್ಚೆ ಹಾಗೂ ಅದರ ವಿರುದ್ಧ ಪಿಐಎಲ್‌ ಸಲ್ಲಿಸಲೆಂದು “ಕಾನೂನು ತಂಡ’, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ಯೋಜನೆಗಳ ಫ‌ಲಾನುಭವಿಗಳ ಪಟ್ಟಿ ತಯಾರಿಸಲೆಂದು “ಫ‌ಲಾನುಭವಿ ತಂಡ’ ಸೇರಿ ಹಲವು ತಂಡಗಳನ್ನು ರಚಿಸಿಕೊಂಡು ಕೆಲಸ ಮಾಡಲಾಗುತ್ತಿದೆ.

ಬೂತ್‌ ಮಟ್ಟದಲ್ಲಿ ಚರ್ಚೆ
ನಿಗದಿತ ಲೋಕಸಭಾ ಕ್ಷೇತ್ರದ ಯಾವ ಬೂತ್‌ನಲ್ಲಿ ಪಕ್ಷಕ್ಕೆ ಕಡಿಮೆ ಮತ ಬಂದಿದೆ ಎಂಬುದನ್ನು ಗುರುತಿಸಿ ಅಲ್ಲಿನ ಸ್ಥಳೀಯ ಸಮಸ್ಯೆಗಳು ಮತ್ತು ಆಡಳಿತಾತ್ಮಕ ವಾಗಿ ಯಾವ ರೀತಿ ಅಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಚರ್ಚೆ ನಡೆಸಲು ಸೂಚಿಸಲಾಗಿದೆ. ಇದರ ಜತೆಗೆ ಸ್ಥಳೀಯ ಮಟ್ಟದಲ್ಲಿ ಪ್ರಭಾವಿಗಳಾಗಿ ಇರುವವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಸುವ ಯೋಜನೆಯೂ ಸೇರಿದೆ.

ವರಿಷ್ಠರು ನೀಡಿರುವ ಹೊಣೆಗಾರಿಕೆಯಿಂದ ಯಾರೂ ನುಣುಚಿಕೊಳ್ಳುವಂತಿಲ್ಲ. ಪ್ರತಿಯೊಬ್ಬರೂ ತಮ್ಮ ಸ್ಥಾನದಲ್ಲಿ ಮಾಡುವ ಸಾಂಸ್ಥಿಕ ಬಲವರ್ಧನೆ ಆಧಾರದಲ್ಲಿ ಅವರ ಸಾಮರ್ಥ್ಯವನ್ನು ಅಳೆಯಲಾಗುತ್ತದೆ.
-ಬಿಜೆಪಿ ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next