ಬೈಲಹೊಂಗಲ: ಮುಂಗಾರು ಮಳೆ ಬೇಗ ಸುರಿದರೆ ತನ್ನ ಬದುಕು ಹಸನಾದಿತು ಎಂದು ತಾಲೂಕಿನ ಅನ್ನದಾತರು ಕಾಯುತ್ತಿದ್ದಾರೆ. ಜತೆಗೆಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂದು, ನಾಳೆ ಮಳೆಯಾದರೆ ಭೂಮಿಗೆ ಬೀಜ ಹಾಕಿ ಉತ್ತಮ ಬೆಳೆ ತೆಗೆಯಬೇಕೆಂದು ಕಳೆದ ತಿಂಗಳಿನಿಂದ ಹೊಲಗಳನ್ನು ಉಳುಮೆ ಮಾಡಿ ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ.
ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿತ್ತು. ಈ ಬಾರಿ ಕೂಡಾ ರೈತರು ರೋಹಿಣಿ ಮಳೆ ಪ್ರಾರಂಭವಾದರೆ ಹೊಲ ಹದವಾಗಿರಬೇಕೆನ್ನುವ ನಿಟ್ಟಿನಲ್ಲಿ ಟ್ರಾಕ್ಟರ್, ಎತ್ತಿನಿಂದ ಹದಗೊಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟಾರೆ ಸೋಯಾಬಿನ್ ಮುಖ್ಯ ಬೆಳೆಯಾಗಿದ್ದು, ಇದರೊಂದಿಗೆ ತೊಗರಿ, ಹೆಸರು, ಉದ್ದು ಕೂಡಾ ಬೆಳೆಯಲಾಗುತ್ತದೆ. ಇನ್ನು ಬೈಲಹೊಂಗಲ ಮತ್ತು ಕಿತ್ತೂರ ತಾಲೂಕಿನಲ್ಲಿ ಹೆಚ್ಚು ಸೋಯಾಬಿನ್ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೀಜ ಸಂಗ್ರಹಣೆ ವ್ಯವಸ್ಥೆ: ಕೃಷಿ ಇಲಾಖೆ ಹೇಳುತ್ತಿದ್ದರೂ ಸಕಾಲದಲ್ಲಿ ಮಳೆಯಾದರೆ ಬೀಜಮತ್ತು ಗೊಬ್ಬರದ ಅಭಾವ ಉಂಟಾಗುತ್ತದೆ. ಹೀಗಾಗದಂತೆ ಮುಂಚಿತವಾಗಿಯೇ ಶೀಘ್ರ ಸುವ್ಯವಸ್ಥೆ ಮಾಡಬೇಕಾಗಿರುವುದು ತಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್.ಎಫ್. ದೊಡಗೌಡರ ಹೇಳುತ್ತಾರೆ.
ಬೀಜ ಸಂಗ್ರಹ: ಕೃಷಿ ಇಲಾಖೆಯು ರೈತರಿಗೆ ಅಗತ್ಯ ಬೀಜ ಪೂರೈಸುವುದಕ್ಕಾಗಿ ಸರಕಾರದ ಪರವಾನಗಿ ಹೊಂದಿರುವ ವಿವಿಧ ಕಂಪನಿ ಹಾಗೂ ಬೀಜ ನಿಗಮದೊಂದಿಗೆ ರೈತ ಸಂಪರ್ಕ ಕೇಂದ್ರಗಳಾದ ಬೈಲಹೊಂಗಲ, ನೇಸರಗಿ, ಕಿತ್ತೂರದಿಂದ ಪಿಕೆಪಿಎಸ್‌ದಲ್ಲಿ ಬೀಜ ವಿತರಣೆ ನಡೆದಿದೆ. ಬೈಲಹೊಂಗಲ ಆರ್‌ಎಸ್‌ಕೆ ಸಂಬಂಧಿಸಿದ ಬೈಲಹೊಂಗಲ ಟಿಎಪಿಎಂಸಿ, ಬೆಳವಡಿ, ಶಿಗಿಹಳ್ಳಿ, ಪಟ್ಟಿಹಾಳ, ದೊಡವಾಡ, ಸಾನಿಕೊಪ್ಪ, ಬುಡರಕಟ್ಟಿ, ಹೊಳಿನಾಗಲಾಪುರ, ನೇಸರಗಿ ಆರ್‌ಎಸ್‌ಕೆ ಸಂಬಂಧಿ ಸಿದ ನೇಸರಗಿ ಪಿಕೆಪಿಎಸ್, ಹಣ್ಣಿಕೇರಿ, ಸಂಪಗಾಂವ, ನೇಗಿನಹಾಳ, ಬಾವಿಹಾಳ, ನಾಗನೂರ,ದೇಶನೂರ, ತಿಗಡಿ, ಚಿಕ್ಕಬಾಗೇವಾಡಿ, ಮರಕಟ್ಟಿ, ಕಿತ್ತೂರ ಆರ್‌ಎಸ್‌ಕೆ ಸಂಬಂಧಿಸಿದ ಕಿತ್ತೂರ, ಎಂ.ಕೆ. ಹುಬ್ಬಳ್ಳಿ,ನಿಚ್ಚಣಕಿ, ಹಿರೆನಂದಿಹಳ್ಳಿ, ಕಾದ್ರೋಳ್ಳಿ, ಹುಣಸಿಕಟ್ಟಿ, ಅವರಾದಿ, ತುರಮರಿ, ಅಂಬಡಗಟ್ಟಿ, ಕಲಬಾಂವಿ, ಕೋದಾನಪುರ ಹೀಗೆ 31 ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೀಜ ವಿತರಣೆ ನಡೆದಿದೆ. ಹೆಚ್ಚುವರಿ ಕೇಂದ್ರಗಳಲ್ಲೂ ತಾಲೂಕಿನ ರೈತರಿಗೆ ಬೇಕಾಗುವಷ್ಟು ಬಿತ್ತನೆ ಬೀಜ ಸಂಗ್ರಹಿಸುವ ಕಾರ್ಯದಲ್ಲಿ ಕೃಷಿ ಇಲಾಖೆ ತೊಡಗಿದೆ.
ರೈತರ ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಗೊಬ್ಬರ ಮತ್ತು ಬೀಜಗಳನ್ನು ತಾಲೂಕಿನಲ್ಲಿ ದಾಸ್ತಾನು ಮಾಡಲಾಗಿದ್ದು,
ಅನ್ನದಾತರು ಆತಂಕ ಪಡಬೇಕಾಗಿಲ್ಲ. ಮುಂಗಾರು ಪ್ರವೇಶಕ್ಕಾಗಿ ಕಾಯುತ್ತಿದ್ದೇವೆ.
ಪ್ರತಿಭಾ ಹೂಗಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ
– ಸಿ.ವೈ. ಮೆಣಶಿನಕಾಯಿ