Advertisement
ಪ್ರಸ್ತುತ ಇರುವ ತರಕಾರಿ ಮತ್ತು ಅಹಾರ ಧಾನ್ಯಗಳಲ್ಲಿ ಗರಿಷ್ಠ ಶೇ. 1-3ರಷ್ಟು ನಾರಿನಾಂಶ ಇರುತ್ತದೆ. ಈಗಾಗಲೇ ಸಾಕಷ್ಟು ಜನಪ್ರಿಯ ಗೊಳ್ಳುತ್ತಿರುವ ಸಿರಿಧಾನ್ಯಗಳಲ್ಲೂ ಶೇ. 0.5 ಮಾತ್ರ ಕಾಣಬಹುದು. ಆದರೆ, ಇದಕ್ಕಿಂತ ಹಲವು ಪಟ್ಟು ಹೆಚ್ಚು ನಾರಿನಾಂಶ ಇರುವಂತಹ ಹಾಗೂ ಅದನ್ನು ಇತರೆ ತರಕಾರಿಯಂತೆ ಬೇಯಿಸಿ ಸೇವಿಸಲು ಯೋಗ್ಯವಾದ ಹಲಸಿನ ತಳಿಯ ಸಂಶೋಧನೆ ನಡೆಸುತ್ತಿದೆ. ಅಂದುಕೊಂಡಂತೆ ಇದು ಸಾಧ್ಯವಾದರೆ, ಹಲಸಿನ ಬೆಳೆಗಾರರಿಗೆ ಬಂಪರ್ ಲಾಭ ಬರಲಿದೆ.
Related Articles
Advertisement
ಡ್ರ್ಯಾಗನ್ ಫ್ರೂಟ್ ಸಸಿಗಳು ಕೂಡ ಮೇಳದಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿದವು. 600 ಕೆಂಪು ಮತ್ತು 1,000 ಬಿಳಿ ಡ್ರ್ಯಾಗನ್ ಫ್ರೂಟ್‌ನ ಸಸಿಗಳನ್ನು ಮಾರಾಟಕ್ಕಿಡಲಾಗಿತ್ತು. ಕೆಲವೇ ಕೆಲವು ಸಸಿಗಳು ಉಳಿದಿವೆ. ಖರೀದಿಸಿದವರು ಬಹುತೇಕ ರೈತರು ಆಗಿದ್ದಾರೆ. ಗುರುವಾರ ಮತ್ತಷ್ಟು ಸಸಿಗಳನ್ನು ಮಾರಾಟಕ್ಕಿಡಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದರು.
ಅರ್ಧ ಎಕರೆಯಲ್ಲಿ ಮಾಸಿಕ 40 ಸಾವಿರ ಗಳಿಕೆ!: ಕೇವಲ ಅರ್ಧ ಎಕರೆ ಜಾಗದಲ್ಲಿ ರೈತನೋರ್ವ ಮಾಸಿಕ 40 ಸಾವಿರ ರೂ. ಲಾಭ ಎಣಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು!. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬಾಳೇಪುರ ಗ್ರಾಮದ ರೈತ ಮಹದೇವಯ್ಯ ಮಾಸಿಕ ಸರಾಸರಿ 40 ಸಾವಿರ ರೂ. ಉಳಿತಾಯ ಮಾಡುತ್ತಿದ್ದಾರೆ. ಇವರ ಬಳಿ, 4ಎಕರೆ ಜಮೀನಿದ್ದು ಆ ಪೈಕಿ ಅರ್ಧ ಎಕರೆಯಲ್ಲಿ ಸುಗಂಧರಾಜ ಹೂ ಬೆಳೆಯುತ್ತಿದ್ದಾರೆ. ಕೇವಲ ಪಿಯುಸಿ ಓದಿದ್ದರೂ ಅವರ ಕೈಹಿಡಿದ ಬೆಳೆಯಿಂದ “ರಾಜ’ನಂತೆ ಜೀವನ ಸಾಗಿಸುತ್ತಿದ್ದಾರೆ.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ವಿಜ್ಞಾನಿಗಳ ಸಲಹೆ ಮೇರೆಗೆ ಸುಗಂಧರಾಜ ಬಿತ್ತನೆ ಮಾಡಿದರು. ಪರಿಣಾಮ ಕಳೆದ 3 ವರ್ಷಗಳಿಂದ ನಿರಂತರವಾಗಿ ಬೆಳೆ ತೆಗೆಯುತ್ತಿದ್ದು ಕೆ.ಜಿ.ಗೆ ಕನಿಷ್ಠ 50 ರೂ. ಮೇಲ್ಪಟ್ಟು ಮಾರಾಟ ಆಗುತ್ತಿದೆ. ಅವರ ಈ ಸಾಧನೆ ಗುರುತಿಸಿ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಗೌರವಿಸಲಾಯಿತು.
“ಮೂರೂವರೆ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆ ಜತೆಗೆ 7 ಸೀಮೆ ಹಸುಗಳನ್ನು ಸಾಕುತ್ತಿದ್ದೇನೆ. ಉಳಿದ ಅರ್ಧ ಎಕರೆಯಲ್ಲಿ ಮಾತ್ರ ಸುಗಂಧರಾಜ ಬೆಳೆಯುತ್ತಿದ್ದೇನೆ. ಸುಗಂಧ ರಾಜದಿಂದಲೇ ಪ್ರತಿ ತಿಂಗಳು ಕನಿಷ್ಠ 40 ಸಾವಿರ ರೂ. ಉಳಿತಾಯ ಆಗುತ್ತಿದೆ. ನನ್ನ ಸಹೋದರ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು, ಅವನಿಗಿಂತ ಕಡಿಮೆ ಅವಧಿ ಎಂದರೆ 8 ತಾಸು ದುಡಿಮೆ ಮಾಡಿ, ಹೆಚ್ಚು ಆದಾಯ ಗಳಿಸುತ್ತಿದ್ದೇನೆ. ನೌಕರಿ ಬಂದರೂ ತಂದೆ-ತಾಯಿ ಹೋಗುವುದು ಬೇಡ ಎಂದರು. ಹೀಗಾಗಿ ಕೃಷಿಯಲ್ಲಿ ತೊಡಗಿದೆ’ ಎಂದು “ಉದಯವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.
ಮಳೆ ನೀರಲ್ಲಿ ಬಾಳೆ!: ಇದೇ ರೀತಿ, ಆನೇಕಲ್‌ನ ಎಂ.ಕೆಂಪರಾಜು, ಮಳೆಯಾಶ್ರಿತ ಭೂಮಿಯಲ್ಲಿ ಬಾಳೆ ಬೆಳೆದು ಗಮನ ಸೆಳೆದಿದ್ದಾರೆ. “ಮೂರೂವರೆ ಎಕರೆಯಲ್ಲಿ ವಾರ್ಷಿಕ 13 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಬೆಳೆಗೆ ನೀರುಣಿಸಲು ಮಳೆನೀರು ಆಶ್ರಯಿಸಿದ್ದೇನೆ. ಇದಕ್ಕಾಗಿ ಜಮೀನಿನಲ್ಲಿ 15 ಲಕ್ಷ ವೆಚ್ಚದಲ್ಲಿ ಒಂದು ಕೋಟಿ ಲೀ. ನೀರು ಸಂಗ್ರಹ ಸಾಮರ್ಥ್ಯದ ಹೊಂಡ ನಿರ್ಮಿಸಿದ್ದೇನೆ’ ಎಂದು ಹೇಳಿದರು. ಮುಕ್ತ ವಾತಾವರಣದಲ್ಲೇ “ಜಿ-9′ ಬಾಳೆ ಬೆಳೆಯುತ್ತಿದ್ದು, ಹೊಂಡದಲ್ಲಿ ಸಾವಯವ ಮೀನುಗಳನ್ನೂ ಬಿಟ್ಟಿದ್ದೇನೆ. ಇದಕ್ಕಿಂತ ಮುನ್ನ ಐಐಎಚ್‌ಆರ್ ಅಭಿವೃದ್ಧಿಪಡಿಸಿದ ಅರ್ಕ ಬಾಳೆ ಸಿಂಪಡಣೆ ಮತ್ತು ಬಾಳೆ ಗೊನೆಗೆ ನೇರ ಪೋಷಕಾಂಶಗಳ ಮಿಶ್ರಣ ನೀಡುವ ತಂತ್ರಜ್ಞಾನ ಅಳವಡಿಸಿದ್ದರಿಂದ ಲಾಭ ಪಡೆಯಲು ಸಾಧ್ಯವಾಗಿದೆ’ ಎಂದು ವಿವರಿಸಿದರು. ಇದೇ ವೇಳೆ ಇನ್ನೂ 6 ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಉತ್ಪಾದನೆ ಜತೆಗೆ ಸಂಸ್ಕರಣೆಗೂ ಆದ್ಯತೆ ಅಗತ್ಯ:”ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಳದ ಜತೆಗೆ ಸಂಸ್ಕರಣೆಗೂ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್) ಮಹಾ ನಿರ್ದೇಶಕ ಡಾ.ಟಿ.ಮಹಾಪಾತ್ರ ಹೇಳಿದರು.ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಹೆಸರುಘಟ್ಟ ಆವರಣದಲ್ಲಿ 4 ದಿನ ಹಮ್ಮಿಕೊಂಡಿರುವ “ರಾಷ್ಟ್ರೀಯ ತೋಟಗಾರಿಕೆ ಮೇಳ-2020’ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಭಾರತ ಈಗಾಗಲೇ ವಿವಿಧ ದೇಶಿ ಆಹಾರ ಬೆಳೆ ಬೆಳೆಯುವ ಮೂಲಕ ಸ್ವಾವಲಂಬಿಯಾಗಿದೆ. ಈ ನಿಟ್ಟಿನಲ್ಲಿ ಸಾಗಿ ಇನ್ನೂ ಅಧಿಕ ಪ್ರಮಾಣದಲ್ಲಿ ಬೆಳೆ ಬೆಳೆಯವುದರ ಜತೆಗೆ ಸಂಸ್ಕರಣೆಗೂ ಒತ್ತು ನೀಡಬೇಕು. ಒಟ್ಟಾರೆ ಇದೆಲ್ಲದರ ಗುರಿ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿರಬೇಕು ಎಂದರು. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೃಷಿ ಸಂಸ್ಥೆಗಳು ಹಾಗೂ ಸರ್ಕಾರ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ರೈತರಿಗೆ ಹೆಚ್ಚು ಲಾಭವಾಗುತ್ತದೆ ಎಂದರು.
ಭಾರತದ ತೋಟಗಾರಿಕೆ ಕ್ಷೇತ್ರದಿಂದ ವಾರ್ಷಿಕ ಸುಮಾರು 350 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಈ ಪ್ರಗತಿಗೆ ಕೇಂದ್ರ ಸರ್ಕಾರದ ಯೋಜನೆ, ಸಂಶೋಧನಾ ಕೃಷಿ-ತೋಟಗಾರಿಕೆ ಸಂಸ್ಥೆಗಳ ತಂತ್ರಜ್ಞಾನ ಆವಿಷ್ಕಾರ, ಅಳವಡಿಕೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಐಐಎಚ್‌ಆರ್‌ನಿಂದ ಆನ್‌ಲೈನ್ ಸೀಡ್ ಪೋರ್ಟಲ್ ಮತ್ತು “ಬಾಗವಾನಿ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು. ಉಪ ಮಹಾ ನಿರ್ದೇಶಕ (ಮೀನು ಗಾರಿಕೆ) ಡಾ.ಜಾಯಕೃಷ್ಣ ಜಿನಾ, ಐಐಎಚ್‌ಆರ್ ನಿರ್ದೇಶಕ ಡಾ.ಎಂ.ಆರ್.ದಿನೇಶ್ ಇತರರಿದ್ದರು.
ಸಸ್ಯ ಮಾಂಸಾಹಾರಿ ವಿಶೇಷ: ಉತ್ತರ ಭಾರತದಲ್ಲಿ ಹಲಸನ್ನು “ಸಸ್ಯ ಮಾಂಸಾಹಾರಿ’ ಎಂದು ವಿಶ್ಲೇಷಿಸಲಾಗುತ್ತದೆ. ಎಳೆಯ ಕಾಯಿಯನ್ನು ಬೇಯಿಸಿದಾಗ, ಅದು ಮಾಂಸದ ರೀತಿಯಲ್ಲಿ ಕಾಣುತ್ತದೆ. ಹಾಗೂ ಅಗಿಯುವಾಗ ಕೂಡ ಹೆಚ್ಚು-ಕಡಿಮೆ ಮಾಂಸಾಹಾರ ಸೇವನೆ ಅನುಭವ ನೀಡುತ್ತದೆ. ಒಂದು ವೇಳೆ ಹೆಚ್ಚು ನಾರಿನಾಂಶ ಇರುವ ಸೇವನೆಗೆ ಯೋಗ್ಯವಾದ ತಳಿಯನ್ನು ಐಐಎಚ್‌ಆರ್ ಅಭಿವೃದ್ಧಿಪಡಿಸಿದರೆ, ಆ ಭಾಗದ ಜನರಿಗೂ ಹೆಚ್ಚು ಅನುಕೂಲ ಆಗುತ್ತದೆ. ಕೊಬ್ಬಿನಂಶವೂ ಇದರಲ್ಲಿ ಇಲ್ಲದಿರುವುದು ಪೂರಕ ಅಂಶವಾಗಿದೆ. ಆಗ, ಮಾಂಸಾಹಾರಕ್ಕೆ ಪರ್ಯಾಯ ಇದಾಗಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಕುರಿತು ಅಧ್ಯಯನ ಆಗಬೇಕಾಗುತ್ತದೆ.
ಒಂದು ಕುಟುಂಬಕ್ಕೆ ಮೂರು ಸಸಿ ಮಾತ್ರ!: ನಾಲ್ಕನೇ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲೂ “ಸಿದ್ದು’ ಹಲಸು ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿತು. ಈ ಹಲಸಿನ ಸಸಿಯ ಖರೀದಿಗಿಗಾಗಿ ಜನ ಅಕ್ಷರಶಃ ಮುಗಿಬಿದ್ದರು. ಹಾಗಾಗಿ, ಒಂದು ಕುಟುಂಬಕ್ಕೆ ಮೂರು ಸಸಿಗಳು ಮಾತ್ರ ಎಂಬ ನಿಯಮ ವಿಧಿಸಿ ಮಾರಾಟ ಮಾಡಲಾಯಿತು!ಮೇಳದ ಹಿನ್ನೆಲೆಯಲ್ಲಿ ಸಾವಿರ ಸಸಿಗಳನ್ನು ಐಐಎಚ್‌ಆರ್ ಮಾರಾಟಕ್ಕೆ ಇಟ್ಟಿತ್ತು. ಕೇವಲ 3 ತಾಸುಗಳಲ್ಲಿ 850 ಸಸಿಗಳು ಬಿಕರಿಯಾಗಿದ್ದವು. ಜನ ಸಾಲುಗಟ್ಟಿ ನಿಂತು ಉಳಿದ 150 ಸಸಿಗಳನ್ನು ಖರೀದಿಸಿದರು.
12.30ಕ್ಕೆ ಎಲ್ಲವೂ ಖಾಲಿಯಾಗಿದ್ದವು. ಒಂದು ಸಸಿಗೆ 150 ರೂ. ವಿಧಿಸಲಾಗಿತ್ತು ಎಂದು ಡಾ.ಕರುಣಾಕರನ್ ತಿಳಿಸಿದರು. ಕಳೆದ ಮೇಳದಲ್ಲೂ “ಸಿದ್ದು’ಗೆ ಅತ್ಯಧಿಕ ಬೇಡಿಕೆ ಕೇಳಿಬಂದಿತ್ತು. ತುಮಕೂರಿನ ಚೇಳೂರು ಗ್ರಾಮದ “ಸಿದ್ದು’ ತಳಿ ವಿಶೇಷ ಗುಣಗಳನ್ನು ಹೊಂದಿದೆ. ಉಳಿದ ಹಲಸಿಗೆ ಹೋಲಿಸಿದರೆ ಸಿದ್ದು’ ಸ್ವಲ್ಪ ಭಿನ್ನ. ಇದು ಹೆಚ್ಚು ಸಿಹಿಯಾಗಿದೆ. ಚಿಕ್ಕ ಗಾತ್ರದ್ದಾಗಿದ್ದು, ಅಬ್ಬಬ್ಬಾ ಎಂದರೆ 20 ತೊಳೆಗಳನ್ನು ಹೊಂದಿದೆ. ಇದರಿಂದ ತೆಗೆದುಕೊಂಡುಹೋಗಲು ತುಂಬಾ ಸುಲಭ. ಜನರಲ್ಲಿ ಕೂಡ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ ಎಂದು ಹೇಳಿದರು.
* ವಿಜಯಕುಮಾರ್ ಚಂದರಗಿ