ಬೆಂಗಳೂರು: ಪ್ರಸಕ್ತ ಸಾಲಿನ 64ನೇ ಕನ್ನಡ ರಾಜ್ಯೋತ್ಸವ ದಲ್ಲಿ ವಿವಿಧ ಶಾಲೆಗಳ 8 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳ ಬಹುದೊಡ್ಡ ಮೇಳ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. 64ನೇ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಸಿದ್ಧತೆಯ ಕುರಿತು ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಸಿದ್ಧತೆಗಳನ್ನು ಪರಾಮರ್ಶಿಸಿದರು.
ನಂತರ ಮಾತನಾಡಿದ ಅವರು, ರಾಜ್ಯೋತ್ಸವದಲ್ಲಿ 8 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ಮಕ್ಕಳ ಮೇಳವನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಪರಿಶೀಲನೆ ಅ.31ರಂದು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ವೇಳೆ ಅಧಿಕಾರಿಗಳ ಸಭೆಯನ್ನು ನಡೆಸಿ ಅಗತ್ಯ ಸೂಚನೆ ನೀಡುವುದಾಗಿ ತಿಳಿಸಿದರು.
ತುರ್ತು ಕಾರ್ಯಕ್ಕೆ ಸೂಚನೆ: ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ ಜಿಲ್ಲೆಗಳ ನೆರೆ ಪೀಡಿತ ಪ್ರದೇಶಗಳ ಶಾಲಾ ಕೊಠ ಡಿಗಳನ್ನು ಪುನರ್ ನಿರ್ಮಾಣ ಅಥವಾ ದುರಸ್ತಿಗೆ ಬಿಡುಗಡೆ ಯಾಗಿರುವ ಅನುದಾನದಲ್ಲಿ ತುರ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ಶಾಲೆಗಳಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಶಾಲಾ ಕೊಠಡಿ ಪ್ರವೇಶಕ್ಕೆ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದರು.
ಸಮಾಲೋಚನಾ ಸಭೆ: ಅ.30ರಂದು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾದೇಶಿಕ ಆಯುಕ್ತರು, ಅಪರ ಆಯುಕ್ತರು, ಜಿಲ್ಲಾ ಉಪ ನಿರ್ದೇಶಕರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಕಲ್ಯಾಣ ಕರ್ನಾಟಕ ಪ್ರದೇಶದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆಯನ್ನು ನಡೆಸಿ ನಿರ್ದೇಶನ ನೀಡುವುದಾಗಿ ಸಚಿವರು ಮಾಹಿತಿ ನೀಡಿದರು. ನ.8ರಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಯತ್ ಸಿಇಒಗಳು, ಉಪ ನಿರ್ದೇಶಕರುಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ತೆಗೆದುಕೊಳ್ಳಬೇಕಾದ ಗುಣಾತ್ಮಕ ಕ್ರಮಗಳ ಕುರಿತಂತೆ ನಿರ್ದೇಶನಗಳನ್ನು ನೀಡುವುದಾಗಿ ತಿಳಿಸಿದರು.
ಫೋನ್‌ಇನ್: ಸಾರ್ವಜನಿಕರು, ಶಿಕ್ಷಕರು ಹಾಗೂ ವಿದ್ಯಾ ರ್ಥಿಗಳೊಂದಿಗೆ ಸಂವಾದ ನಡೆಸುವ ಮಹಾತ್ವಾಕಾಂಕ್ಷೆಯ ಸಂವೇದನ ಫೋನ್ ಇನ್ ಕಾರ್ಯಕ್ರಮಕ್ಕೆ ನ.2ರಂದು ಚಾಲನೆ ನೀಡಲಾಗುವುದು. ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಕುಂದು ಕೊರತೆಗಳನ್ನು ಹಂಚಿಕೊಳ್ಳ ಬಹುದು ಎಂದು ಸಚಿವರು ತಿಳಿಸಿದರು.
ಕಡ್ಡಾಯ ಕನ್ನಡ ಕಲಿಕಾ ಕಾಯ್ದೆಯ 2015ರ ಸಮರ್ಪಕ ಅನುಷ್ಠಾನದ ಪರಿಶೀಲನೆಗಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಲಾಗುತ್ತದೆ.
-ಸುರೇಶ್ ಕುಮಾರ್, ಸಚಿವ