ರಾಯಚೂರು: ಕಳೆದ ವರ್ಷ ಕೋವಿಡ್-19 ಕಾರಣಕ್ಕೆ ಸಂಪೂರ್ಣ ನಿಷೇಧಗೊಂಡಿದ್ದ ಹೋಳಿ ಆಚರಣೆಗೆ ಈಗ ಬಾರಿಯೂ ಜಿಲ್ಲಾಡಳಿತ ಕಡಿವಾಣ ಹಾಕಿದೆ. ಆದರೆ, ಬಿಗಿ ಕ್ರಮಗಳಿಲ್ಲದ ಕಾರಣ ನಿಷೇಧದ ಮಧ್ಯೆಯೂ ಹೋಳಿ ಆಚರಣೆ ನಡೆಯವ ಸಾಧ್ಯತೆಗಳಿವೆ. ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣಕ್ಕೆ ಜಿಲ್ಲಾಡಳಿತ ಸಾರ್ವಜನಿಕವಾಗಿ ಗುಂಪುಗೂಡುವುದು, ಹಬ್ಬಗಳ ಆಚರಣೆ ಮಾಡದಂತೆ ಪ್ರಕಟಣೆ ಹೊರಡಿಸಿದೆ.
ಈಗಾಗಲೇ ಸಾಕಷ್ಟು ಜಾತ್ರೆಗಳನ್ನು ರದ್ದು ಮಾಡಲಾಗಿದೆ. ಹೋಳಿಗೂ ಈ ನಿರ್ಬಂಧ ಅನ್ವಯಿಸಿದ್ದು, ಮುಕ್ತ ಆಚರಣೆಗೆ ಅವಕಾಶವಿಲ್ಲ. ಆದರೆ, ಕಳೆದ ವರ್ಷ ಲಾಕ್ ಡೌನ್ ಕಾರಣಕ್ಕೆ ಯಾರೊಬ್ಬರು ಮನೆಯಿಂದ ಆಚೆ ಕಾಲಿಟ್ಟಲಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಸಡಿಲಗೊಂಡಿದ್ದು ಎಲ್ಲೆಡೆ ಓಡಾಟ, ಜನಸಂಚಾರಕ್ಕೆ ನಿರ್ಬಂಧ ಇಲ್ಲ. ಹೀಗಾಗಿ ನಿಷೇಧದ ನಡುವೆಯೂ ಹೋಳಿ ಆಚರಣೆ ನಡೆಯುವ ಸಾಧ್ಯತೆಗಳಿವೆ.
ನಿರ್ಬಂಧವಿದ್ದರೂ ಹಳ್ಳಿಗಳಲ್ಲಿ ಹಬ್ಬ ಆಚರಣೆ ಯಥಾ ರೀತಿ ಇರುವ ಸಾಧ್ಯತೆಗಳಿವೆ. ಪೊಲೀಸರು ನಗರ ಪ್ರದೇಶಗಳನ್ನು, ಪ್ರಮುಖ ರಸ್ತೆಗಳಲ್ಲಿ ಮಾತ್ರ ಪೆಟ್ರೋಲಿಂಗ್ ವ್ಯವಸ್ಥೆ ಮಾಡಿದ್ದರೆ, ಗ್ರಾಮೀಣ ಭಾಗದಲ್ಲಿ ಯಾವುದೇ ಅಡ್ಡಿ ಆತಂಕಗಳು ಕಂಡು ಬರುತ್ತಿಲ್ಲ.
ಕುಗ್ಗಿದ ವ್ಯಾಪಾರ: ಬಣ್ಣದೋಕುಳಿ ಬಂದರೆ ವ್ಯಾಪಾರ ಭರಾಟೆ ಜೋರಾಗಿರುತ್ತದೆ. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಯದಿರುವುದು ವರ್ತಕರ ಬೇಸರಕ್ಕೆ ಕಾರಣವಾಯಿತು. ಬಣ್ಣ ಖರೀದಿಯಲ್ಲಿ, ಪಿಚಕಾರಿಗಳ ಖರೀದಿಗೆ ಜನ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಆದರೂ ಸಾಧಾರಣ ಮಟ್ಟದ ವ್ಯಾಪಾರ ವಹಿವಾಟು ನಡೆದಿದೆ ಎಂದು ವರ್ತಕರು ಅಭಿಪ್ರಾಯಪಟ್ಟರು.
ಈಗಾಗಲೇ ಹೋಳಿ ಹಬ್ಬದ ಕುರಿತು ವಿವಿಧ ಠಾಣೆಗಳಲ್ಲಿ ಶಾಂತಿಸಭೆ ನಡೆಸಲಾಗಿದೆ. ಸಾರ್ವಜನಿಕವಾಗಿ ಹೋಳಿ ಆಚರಣೆಗೆ ಅವಕಾಶವಿಲ್ಲ. ಹಬ್ಬದಂದು ಎಲ್ಲೆಡೆ ಪೊಲೀಸರು ಪೆಟ್ರೋಲಿಂಗ್ ಮಾಡಲಿದ್ದಾರೆ. ಕುಟುಂಬ ಸದಸ್ಯರು ಸಂಕ್ಷಿಪ್ತವಾಗಿ ಹಬ್ಬ ಮಾಡಿಕೊಳ್ಳಬಹುದು. ಆದರೆ, ಎಲ್ಲ ಕಡೆ ಓಡಾಡುವುದಕ್ಕೆ ಅವಕಾಶವಿಲ್ಲ.
ಪ್ರಕಾಶ ನಿಕ್ಕಂ, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ