ಬೆಳಗಾವಿ: ದೇಶಾದ್ಯಂತ ಕೋವಿಡ್ ವೈರಸ್ ಹಾವಳಿ ತೀವ್ರವಾಗುತ್ತಿರುವ ಬೆನ್ನಲ್ಲೇ ಮೇ 25ರಿಂದ ದೇಶೀಯ ವಿಮಾನ ಸೇವೆ ಆರಂಭವಾಗಲಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ಸಂದರ್ಭದಲ್ಲಿ ವಿಮಾ ನಿಲ್ದಾಣದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ರವಿವಾರ ಪರಿಶೀಲನೆ ನಡೆಸಿದರು.
ಮೇ 25ರಿಂದ ಐದು ವಿಮಾನ ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳು ವಿಮಾನ ಸಂಚಾರ ಸೇವೆ ಆರಂಭಿಸಲಿವೆ. ಬೆಳಗ್ಗೆ 8:40ಕ್ಕೆ ಮೊದಲ ವಿಮಾನ ಬೆಂಗಳೂರಿನಿಂದ ಬೆಳಗಾವಿಗೆ ಬರಲಿದ್ದು, ಸಂಜೆ 6:50ಕ್ಕೆ ಇಲ್ಲಿಂದ ಹೈದರಬಾದ್‌ಗೆ ಕೊನೆಯ ವಿಮಾನ ಸಂಚರಿಸಲಿದೆ. ಸ್ಟಾರ್ ಏರ್ ಸಂಸ್ಥೆಯು ಅಹ್ಮದಾಬಾದ್, ಬೆಂಗಳೂರು, ಸ್ಪೈಸ್ ಜೆಟ್ ದಿಂದ ಹೈದರಾಬಾದ್-ಬೆಳಗಾವಿ, ಅಲಯನ್ಸ್ ಸಂಸ್ಥೆಯು ಪುಣೆ ಹಾಗೂ ಟ್ರಾಜೆಟ್ ಸಂಸ್ಥೆಯು ಮೈಸೂರು ಹಾಗೂ ಹೈದರಾಬಾದ್ ನಗರಗಳಿಗೆ ವಿಮಾನ ಸೇವೆ ಆರಂಭಿಸಲಿವೆ. ಮೇ 26ರಿಂದ ಇಂಡಿಗೋ ಸಂಸ್ಥೆಯು ಹೈದರಾಬಾದ್‌ಗೆ ಸಂಚಾರ ಆರಂಭ ಮಾಡಲಿದೆ.
ಹೊರ ರಾಜ್ಯಗಳಿಂದ ಬರುವ ಹಾಗೂ ಇಲ್ಲಿಂದ ತಮ್ಮ ಊರಿಗೆ ತೆರಳುತ್ತಿರುವ ಪ್ರಯಾಣಿಕರ ಸುರಕ್ಷತೆ ಹಾಗೂ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ಥರ್ಮಲ್ ಚೆಕ್ ಅಫ್ ಕಡ್ಡಾಯವಾಗಿ ಆಗಲಿದೆ ಎಂದು ರಾಜೇಶಕುಮಾರ ಮೌರ್ಯ ಹೇಳಿದರು.
ವಿಮಾನದಲ್ಲಿ ಪ್ರಯಾಣ ಮಾಡುವವರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು. ಇದರಲ್ಲಿ ಹಸಿರು ನಿಶಾನೆ ತೋರಿಸಿದರೆ ಮಾತ್ರ ಅವರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವೇಳೆ ಪ್ರಯಾಣಿಕರು ಸ್ಮಾರ್ಟ್‌ಫೂನ್ ಹೊಂದಿರದೇ ಇದ್ದರೆ ಅವರು ಸ್ವಯಂ ಘೋಷಣಾ ಪತ್ರ ಬರೆದುಕೊಡಬೇಕು ಎಂದು ಮೌರ್ಯ ತಿಳಿಸಿದರು.
ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ವಿಮಾನ ನಿಲ್ದಾಣದಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದೆ. ಪ್ರಯಾಣಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ.