Advertisement

ಬೆಳಗಲಿದೆ ರಂಗು ರಂಗಿನ ಗೂಡುದೀಪ, ಹಣತೆ

11:34 PM Oct 25, 2019 | Sriram |

ಕುಂದಾಪುರ: ದೀಪಾವಳಿಗೆ ಮಾರುಕಟ್ಟೆ ಸಜ್ಜಾಗಿದೆ. ಆದರೆ ಜನ ಖರೀದಿಗೆ ಬರಲು ಮಳೆ ಬಿಡುವು ನೀಡಬೇಕು ಎಂಬ ಸ್ಥಿತಿ ಬಂದಿದೆ. ಕಳೆದ ಎರಡು ದಿನಗಳಿಂದ ಹೊತ್ತಲ್ಲದ ಹೊತ್ತಿಗೆ ಮಳೆ ಸುರಿಯುತ್ತಿದೆ. ಕ್ಷಣದಲ್ಲಿ ಬಿಸಿಲು, ಮರೆಯಾಗುವಂತೆ ಮಳೆ ಎಂಬಂತೆ ವಾತಾವರಣ ಇರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಅಂಗಡಿಯ ಹೊರಗೆ ಗೂಡುದೀಪ ತೂಗುದೀಪವಾಗಿಸಲು ಮಳೆ ಬಣ್ಣ ಮಾಸುವಂತೆ ಮಾಡಿದರೆ ಎಂಬ ಆತಂಕ. ಹಾಗಿದ್ದರೂ ಗ್ರಾಹಕರನ್ನು ಸೆಳೆಯುವ ಸಲುವಾಗಿ ರಂಗುರಂಗಿನ ಗೂಡುದೀಪಗಳನ್ನು ಅಚ್ಚುಕಟ್ಟಿನಿಂದ ನೇತು ಹಾಕಲಾಗಿದ್ದು, ಹಣತೆಗಳನ್ನೂ ಕಾಣುವ ರೀತಿಯಲ್ಲೇ ರಾಶಿ ಹಾಕಲಾಗಿದೆ.

Advertisement

ಜತೆಗೆ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುವ ಮೂಲಕ ಈ ನೆಲದ ಸಂಸ್ಕೃತಿಯನ್ನೂ ಉಳಿಸಬೇಕೆಂಬ ಕಳಕಳಿ ಜೋರಾಗುತ್ತಿದೆ. ಮಾರುಕಟ್ಟೆಯಲ್ಲಿ ನೈಸರ್ಗಿಕವಾಗಿರುವ ಆವೆ ಮಣ್ಣನ್ನು ಬಳಸಿ ತಯಾರಿಸಿದ ವಿವಿಧ ಆಕೃತಿಯ ಮಣ್ಣಿನ ಹಣತೆ ದೊರಕುತ್ತಿದ್ದು ಚಿಕ್ಕ ಗಾತ್ರ, ಮಧ್ಯಮ ಗಾತ್ರ ಹಾಗೂ ಸ್ವಲ್ಪ ದೊಡ್ಡ ಗಾತ್ರದ, ಆಕರ್ಷಕ ವಿನ್ಯಾಸವಿರುವ ಸ್ವಲ್ಪ ದೊಡ್ಡ ಗಾತ್ರದ ಹಣತೆ ಬೇರೆ ಬೇರೆ ದರಗಳಲ್ಲಿ ಲಭ್ಯವಿವೆ. ಆಕರ್ಷಕ ಬಣ್ಣದ ಹಣತೆಯ ಸೆಟ್‌ಗಳು, ಮೇಣದ ಬತ್ತಿಯ ಬದಲು ಹಣತೆ ಮಾದರಿಯಲ್ಲಿ ಮೇಣದ ಹಣತೆಗಳು ಹೀಗೆ ಬೇರೆ ಬೇರೆ ರೀತಿಯ ಹಣತೆಗಳು ಇವೆ. ಕ್ಯಾಂಡಲ್‌ಗ‌ಳಿಗೂ ಉತ್ತಮ ಬೇಡಿಕೆಯಿದ್ದು, ಸುಮಾರು 5ಕ್ಕೂ ಹೆಚ್ಚು ವೆರೈಟಿಯ ಕ್ಯಾಂಡಲ್‌ಗ‌ಳಿವೆ.

ಪಟಾಕಿ ಮಾರಾಟ
ದೀಪಾವಳಿ ವೇಳೆ ಪಟಾಕಿಗಳಿಂದ ಉಂಟಾಗುವ ಪರಿಸರ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಇತ್ತೀಚೆಗೆ ಕಡಿಮೆ ಹೊಗೆಯ ಹಸುರು ಪಟಾಕಿ ಪರಿಚಯಿಸಿದೆ. ಆದರೆ ಕುಂದಾಪುರ ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ಲಭ್ಯ ಕುರಿತು ವ್ಯಾಪಾರಸ್ಥರಿಗೆ ಮಾಹಿತಿ ಇಲ್ಲ. ಕಡಿಮೆ ಹೊಗೆ ಸೂಸುವ, ಕನಿಷ್ಠ ಪರಿಸರ ಮಾಲಿನ್ಯ ಉಂಟು ಮಾಡುವ ಪಟಾಕಿಗಳೇ ಹಸಿರು ಪಟಾಕಿಗಳು. ಪಟಾಕಿ ಮಾರಾಟಕ್ಕೆ ಲೈಸೆನ್ಸ್‌ ಪಡೆದ ಮಾರಾಟಗಾರರಲ್ಲದೇ ನೆಹರೂ ಮೈದಾನದಲ್ಲಿ ಕೂಡಾ ವಿಶೇಷ ಅನುಮತಿ ನೀಡಿ ಸ್ಟಾಲ್‌ ಹಾಕಲಾಗುತ್ತಿದೆ.

ಗೂಡುದೀಪ
ದೀಪಾವಳಿ ಹಬ್ಬದ ದಿನಗಳಲ್ಲಿ ಮನೆ ಮನೆಯಲ್ಲೂ ಗೂಡುದೀಪಗಳನ್ನು ಬೆಳಗುವುದು ಸಾಮಾನ್ಯವಾಗಿದ್ದು, ತಮ್ಮ ಮನೆಯ ಗೂಡುದೀಪ ಆಕರ್ಷಕವಾಗಿ ಕಾಣಬೇಕು ಎಂಬ ದೃಷ್ಟಿಯಿಂದ ಧಾರಣೆ ಹೆಚ್ಚಾದರೂ ಒಂದು ಗೂಡುದೀಪವನ್ನು ಇಷ್ಟಪಟ್ಟರೆ ಅದನ್ನೇ ಖರೀದಿಸುತ್ತಾರೆ. ಹೀಗಾಗಿ ಬಹುತೇಕ ಫ್ಯಾನ್ಸಿ ಸ್ಟೋರ್‌ಗಳು ಗೂಡುದೀಪಗಳಿಗೆ ಮಹತ್ವ ನೀಡಿ ತಮ್ಮ ಮಳಿಗೆಯ ಮುಂದೆ ಪ್ರದರ್ಶನಮಾಡುತ್ತಿವೆ. 65 ರಿಂದ 900 ರೂ.ಗಳ ವರೆಗಿನ ಗೂಡು ದೀಪಗಳು ಮಾರುಕಟ್ಟೆಯಲ್ಲಿದ್ದು, ದೀಪಾವಳಿ ಸಂದರ್ಭವೇ ಮಾರಾಟ ವಾಗಬೇಕೆಂದೇನೂ ಇಲ್ಲ. ವರ್ಷದಲ್ಲಿ ನೂರಾರು ಗೂಡುದೀಪಗಳು ಮಾರಾಟ ವಾಗುತ್ತವೆ ಎನ್ನುತ್ತಾರೆ ವರ್ತಕರು. 10 ವರ್ಷಗಳ ಹಿಂದಕ್ಕೆ ಹೋಲಿಸಿದರೆ ಗೂಡುದೀಪಗಳ ವ್ಯಾಪಾರ ಕಡಿಮೆ. ಹಾಗಿದ್ದರೂ ಪ್ರತಿವರ್ಷವೂ ದೀಪಾವಳಿಗೆ ಉತ್ತಮ ವ್ಯಾಪಾರವಿರುತ್ತದೆ. ಆದರೆ ಈ ಬಾರಿ ದೀಪಾವಳಿ ಹತ್ತಿರ ಬರುತ್ತಿದ್ದಂತೆ ಮಳೆಯೂ ಜೋರಾಗುತ್ತಿದ್ದು, ಹೀಗಾಗಿ ವ್ಯಾಪಾರಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸುತ್ತಾರೆ.

ನೈಸರ್ಗಿಕ ದೀಪಾವಳಿ
ಈ ಬಾರಿ ಅನೇಕರು ಭಾರತೀಯ ಸಂಪ್ರದಾಯ ಎಂದು ಕ್ಯಾಂಡಲ್‌ ಹಚ್ಚುವುದಿಲ್ಲ, ಹಣತೆಯೇ ಹಚ್ಚುತ್ತೇವೆ ಎನ್ನುವ ಶಪಥದಲ್ಲಿದ್ದಾರೆ. ಕೆಲವರು ಕ್ಯಾಂಡಲ್‌ ಉರಿಸಿ ದೀಪಾವಳಿ ಆಚರಿಸುವವರೂ ಇದ್ದಾರೆ. ಇವರೆಲ್ಲರ ಮಧ್ಯೆ ಭಾರತೀಯ ಸಂಪ್ರದಾಯ ಉಳಿಸಬೇಕು, ಹಣತೆಯಲ್ಲೇ ದೀಪ ಬೆಳಗಬೇಕು ಎಂಬ ಜಾಗೃತಿಯೂ ಜೋರಾಗಿ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next