Advertisement

ಅಂಬಾದೇವಿ ಗುಡಿ ಕಾಯಕಲ್ಪಕ್ಕೆ ಸಿದ್ಧತೆ; ಅಂದಾಜು 7 ಕೋಟಿ ರೂ. ವೆಚ್ಚ

05:48 PM Aug 14, 2021 | Team Udayavani |

ಸಿಂಧನೂರು: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಸಿದ್ಧಪರ್ವತ ಶ್ರೀ ಅಂಬಾದೇವಿ ದೇಗುಲವನ್ನು ಪುನರ್‌ ನಿರ್ಮಿಸುವ ಯೋಜನೆ ಕೊನೆಗೂ ಮುಹೂರ್ತ ರೂಪ ಪಡೆದಿದೆ. ಸೋಮಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಂಬಾಮಠದಲ್ಲಿರುವ ಈ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಚಿದಾನಂದ ಅವಧೂತರ ನೆಲಬೀಡು. ಶಕ್ತಿ ದೇವತೆ ಅಂಬಾದೇವಿ ನೆಲೆಸಿದ ಹಿನ್ನೆಲೆಯಲ್ಲಿ ಅಂಬಾಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಅಪಾರ.

Advertisement

ಅಂಬಾದೇವಿ ಜಾತ್ರೆಗೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಯಿಂದ ಭಕ್ತರು ಆಗಮಿಸುತ್ತಾರೆ. ಇಂತಹ ಐತಿಹಾಸಿಕ ಸ್ಥಳದಲ್ಲಿನ ದೇಗುಲ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ ದೇಗುಲಕ್ಕೆ ಪುನರ್‌ ಕಾಯಕಲ್ಪ ನೀಡುವ ಯೋಜನೆ ಸಿದ್ಧಗೊಂಡಿದೆ.

ಅಂದಾಜು 7 ಕೋಟಿ ರೂ.ಗೂ ಹೆಚ್ಚು ನಿಗದಿ:
ಸದ್ಯ ಅಂಬಾದೇವಿ ದೇವಸ್ಥಾನ ದೇಗುಲ ಮಂಡಳಿಯ ಖಾತೆಯಲ್ಲಿ 4.50 ಕೋಟಿ ರೂ. ಲಭ್ಯವಿದೆ. ಇದಲ್ಲದೇ ಬೇಕಾಗುವ ಹೆಚ್ಚಿನ ಮೊತ್ತವನ್ನು ಸಾರ್ವಜನಿಕ ದೇಣಿಗೆ ಮೂಲಕ ಸಂಗ್ರಹಿಸುವ ನಿರ್ಧಾರ ಮಾಡಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸಿದ್ಧಪರ್ವತದಲ್ಲಿ ನೆಲೆಸಿರುವ ಅಂಬಾದೇವಿ ಗುಡಿಯನ್ನು ಪುನರ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ನಿರ್ಮಿತಿ ಕೇಂದ್ರದ ಮೂಲಕ ಅಂದಾಜು ಪಟ್ಟಿ ಹಾಗೂ ನೀಲನಕ್ಷೆ ರೂಪಿಸಿ ಜಿಲ್ಲಾ ಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.

ಅನುಮೋದನೆ ಬಾಕಿ: ಶಾಸಕ ವೆಂಕಟರಾವ್‌ ನಾಡಗೌಡ, ತಹಶೀಲ್ದಾರ್‌ ಮಂಜುನಾಥ ಭೋಗಾವತಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು. ಇದರಲ್ಲಿ ದೇವಸ್ಥಾನಗಳನ್ನು ನಿರ್ಮಿಸುವ ಶಿಲ್ಪಿಗಳನ್ನು ಆಹ್ವಾನಿಸಿ ಅವರಿಂದ ನೀಲನಕ್ಷೆಗಳನ್ನು ಪಡೆಯಲಾಗಿತ್ತು. ಅದರಲ್ಲಿ ಒಂದು ಮಾದರಿಯನ್ನು ಅಂತಿಮಗೊಳಿಸಿದ ನಂತರ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಮುಜರಾಯಿ ಇಲಾಖೆಗೆ ಕಡತವನ್ನು ಸಲ್ಲಿಕೆ ಮಾಡಲಾಗಿದೆ. ಆದರೆ, ನಿರ್ಮಿತಿ ಕೇಂದ್ರಕ್ಕೆ 2 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕೆಲಸವನ್ನು ಒಪ್ಪಿಸಲು ಬರುವುದಿಲ್ಲ ಎಂಬ ತಾಂತ್ರಿಕ ತೊಡಕಿನ ಬಗ್ಗೆ ಮಾತ್ರ ಸದ್ಯ ಚರ್ಚೆಯಾಗಿವೆ. ಪಿಡ್ಲ್ಯುಡಿ ಇಲಾಖೆ ಮೂಲಕ 10 ಕೋಟಿ ರೂ. ವರೆಗಿನ ಕಾಮಗಾರಿ ನಿರ್ವಹಿಸಲು ಸಾಧ್ಯವಿರುವುದರಿಂದ ಅದೇ ಇಲಾಖೆಗೆ ಒಪ್ಪಿಸಬೇಕೆಂದು ಇಲಾಖೆ ಆಯುಕ್ತೆ ರೋಹಿಣಿ ಸಿಂಧೂ ರಿ ಸಲಹೆ ನೀಡಿದ್ದಾರೆಂದು ಹೇಳಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ತೊಂದರೆಗಳು ಉಲ್ಬಣಿಸಿಲ್ಲ. ಶಾಸಕ ವೆಂಕಟರಾವ್‌ ನಾಡಗೌಡ ಕೂಡ ಇಲಾಖೆಯ ಹಿಂದಿನ ಸಚಿವರೊಂದಿಗೆ ಚರ್ಚಿಸಿ,
ಅಂತಿಮ ಸ್ವರೂಪಕ್ಕೆ ತರಲು ಪ್ರಯತ್ನಿಸಿದ್ದರು.

Advertisement

ಮಂತ್ರಿ ಮಂಡಲ ಪುನರ್‌ ರಚನೆಯಾಗಿರುವ ಹಿನ್ನೆಲೆಯಲ್ಲಿ ಮತ್ತೂಮ್ಮೆ ಮನವೊಲಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಸಾಗಿವೆ. ಈ ನಡುವೆ ಸಿಎಂ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಒಪ್ಪಿಗೆ ಪಡೆಯುವುದು ಮಾತ್ರ ಬಾಕಿ ಉಳಿದಿದೆ. ಭಕ್ತರ ಬಹುದಿನಗಳ ಆಸೆ ಈಡೇರುವ ಮುನ್ಸೂಚನೆಗಳು ಕಾಣಿಸಿದ್ದು, ಹೊಸದಾಗಿ ತಲೆ ಎತ್ತಲಿರುವ ಅಂಬಾದೇವಿ ದೇಗುಲ ನಿರ್ಮಾಣಕ್ಕೆ ಪಕ್ಷಾತೀತವಾಗಿ ಹಲವರು ಕೈ ಜೋಡಿಸಬೇಕಿದೆ.

7 ಕೋಟಿ ರೂ.ಗೂ ಹೆಚ್ಚಿನ ಮೊತ್ತದಲ್ಲಿ ಅಂಬಾದೇವಿ ದೇವಸ್ಥಾನವನ್ನು ಪುನರ್‌ ನಿರ್ಮಿಸಲು ಈಗಾಗಲೇ ಚರ್ಚಿಸಿ, ಕಡತವನ್ನು ಸಿದ್ಧಪಡಿಸಿ ಜಿಲ್ಲಾ ಧಿಕಾರಿಗಳಿಗೆ ಸಲ್ಲಿಕೆಯಾಗಿದೆ. ಅಲ್ಲಿಂದ ಸರಕಾರಕ್ಕೆ ಸಲ್ಲಿಕೆಯಾದರೆ, ತ್ವರಿತವೇ ಈ ಕೆಲಸ ಪೂರ್ಣಗೊಳ್ಳಲಿದೆ.
ವೆಂಕಟರಾವ್‌ ನಾಡಗೌಡ
ಶಾಸಕ, ಸಿಂಧನೂರ

ಹೊಸದಾಗಿ ಅಂಬಾದೇವಿ ದೇಗುಲ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. ಶಾಸಕರು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸುತ್ತಿದ್ದು, ಈ ಕೆಲಸ ಬಹುಬೇಗ ಈಡೇರುವ ನಿರೀಕ್ಷೆಯಿದೆ.
ರಾಜಶೇಖರ ಹಿರೇಮಠ, ಅಧ್ಯಕ್ಷರು,
ಅಂಬಾದೇವಿ ದೇವಸ್ಥಾನ ಮಂಡಳಿ

ಈ ಹಿಂದೆ ಹಲವು ಸಭೆಗಳನ್ನು ನಡೆಸಿ ಶಿಲ್ಪಿಗಳೊಂದಿಗೆ ಸಂವಾದ ನಡೆಸಿದ ಬಳಿಕವೇ ಜಿಲ್ಲಾಧಿಕಾರಿಗಳಿಗೆ ಕಡತ ಸಲ್ಲಿಕೆಯಾಗಿದೆ. ಮುಂದಿನ ಆದೇಶವನ್ನು ಕಾಯಲಾಗುತ್ತಿದೆ.
ಮಂಜುನಾಥ ಭೋಗಾವತಿ
ತಹಶೀಲ್ದಾರ್‌, ಸಿಂಧನೂರ

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next