Advertisement

ಜೂ.21ರ ಯೋಗ ದಿನಾಚರಣೆ ಯಶಸ್ವಿಗೆ ಸಿದ್ಧತೆ

12:46 PM Jun 11, 2017 | Team Udayavani |

ಮೈಸೂರು: ದೇಶ-ವಿದೇಶದ ಯೋಗಪಟುಗಳನ್ನು ಆಕರ್ಷಿಸುವ ಮೂಲಕ ಯೋಗಾಹಬ್‌ ಎಂದೇ ಕರೆಯಲ್ಪಡುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂ.21ರಂದು ನಡೆಯಲಿರುವ 3ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಜಾಗಿದೆ.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸ್ವತ್ಛನಗರಿ ಎಂಬ ಖ್ಯಾತಿ ಪಡೆದಿರುವ ಮೈಸೂರು ದೇಶದ ಯೋಗ ರಾಜಧಾನಿಯೆಂದು ಪ್ರಸಿದ್ಧಿಯಾಗಿದೆ.

ವಿಶ್ವಕ್ಕೆ ಯೋಗವನ್ನು ಹರಡುವ ನಿಟ್ಟಿನಲ್ಲಿ ಮೈಸೂರು ವಿಶಿಷ್ಟ ಕೊಡುಗೆ ನೀಡಿದ್ದು, ಈ ಹಿನ್ನೆಲೆ ಜೂ.21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಾರ್ವಜನಿಕರ ಸಹಕಾರದೊಂದಿಗೆ ದೊಡ್ಡ ಮಟ್ಟದಲ್ಲಿ ಆಯೋಜಿಸಲಿ ತೀರ್ಮಾನಿಸಲಾಗಿದೆ. ಈ ಬಾರಿಯ ಯೋಗ ದಿನದಂದು ಅಂದಾಜು 60 ಸಾವಿರ ಯೋಗಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಗರದ ಅರಮನೆ ಆವರಣ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀಜಯಚಾಮರಾಜೇಂದ್ರ ಒಡೆಯರ್‌ ವೃತ್ತದಿಂದ ಕೃಷ್ಣರಾಜೇಂದ್ರ ವೃತ್ತ, ದೇವರಾಜ ಅರಸ್‌ ರಸ್ತೆ, ಮಹಾರಾಣಿ ಕಾಲೇಜು ವೃತ್ತ, ರಾಮಸ್ವಾಮಿ ವೃತ್ತ, ಮಹಾರಾಜ ಕಾಲೇಜು ಮೈದಾನ, ಓವೆಲ್‌ ಮೈದಾನದಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿದೆ.

ಇದಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದ್ದು, ಆ ಮೂಲಕ ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನವನ್ನು ಗಿನ್ನಿಸ್‌ ದಾಖಲೆಗೆ ಸೇರಿಸುವ ರೀತಿಯಲ್ಲಿ ತಯಾರಿ ಮಾಡಲಾಗಿದೆ. ಅಲ್ಲದೆ ಜೂ.11 ಮತ್ತು 18 ರಂದು ಪೂರ್ವಬಾವಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಕಾನೂನು, ಸುವ್ಯವಸ್ಥೆ ಮತ್ತು ಟ್ರಾಫಿಕ್‌ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಕುಡಿಯುವ ನೀರು, ಸ್ವತ್ಛತೆ, ವೈದ್ಯಕೀಯ ಮತ್ತು ಆ್ಯಂಬುಲೆನ್ಸ್‌ ವ್ಯವಸ್ಥೆ, ಸ್ವಾಗತ, ಶಿಷ್ಟಾಚಾರ, ವಾಸ್ತವ್ಯ, ವಾಹನ ವ್ಯವಸ್ಥೆ ಹಾಗೂ ಆಮಂತ್ರಣ ಮುದ್ರಣ, ಸಾಂಸ್ಕೃತಿಕ ಕಾರ್ಯಕ್ರಮದ ಮೇಲುಸ್ತುವಾರಿ, ಸಾರಿಗೆ ವ್ಯವಸ್ಥೆ, ವೇದಿಕೆ ಕಾರ್ಯಕ್ರಮ, ದಾಖಲಾತಿ ಸಮಿತಿ, ಪ್ರಚಾರ ಸಮಿತಿ ಮತ್ತು ಸ್ವಯಂಸೇವಕ ಸಮಿತಿಗಳನ್ನು ರಚಿಸಲಾಗಿದೆ.

ಎಲ್ಲಾ ಸಮಿತಿಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು. ಯೋಗಾ ಕಾರ್ಯಕ್ರಮದ ಮೂಲಕ ಭಾವೈಕ್ಯತೆ, ಸಾಮರಸ್ಯ ಮತ್ತು ವಿಶ್ವಶಾಂತಿ ಮಂತ್ರ ಸಾರಲು ವಿವಿಧ ಧರ್ಮಗುರುಗಳನ್ನು ಆಹ್ವಾನಿಸಲಾಗಿದೆ. ನಗರದಲ್ಲಿ 300ಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳಿದ್ದು, ನಿತ್ಯ 15 ಸಾವಿರ ಯೋಗಾಸಕ್ತರು ತರಬೇತಿ ಪಡೆಯುತ್ತಿದ್ದಾರೆ.

35 ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ. ಅರಮನೆ ಆವರಣದಲ್ಲಿ ಮುಖ್ಯ ವೇದಿಕೆಯಿದ್ದು, ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಯೋಗ ಮಾಡುವವರಿಗೂ ಮುಖ್ಯ ವೇದಿಕೆಯಿಂದಲೇ ಯೋಗಾಭ್ಯಾಸದ ಕುರಿತು ನಿರ್ದೇಶನ ನೀಡಲಾಗುತ್ತದೆ. ಜೂ.21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗದಿನದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.
 

ಸಾರ್ವಜನಿಕರಿಗೆ ಮೂಲ ಸೌಕರ್ಯ: 60 ಸಾವಿರ ಜನರಿಗೂ ತಲುಪುವಂತೆ ಧ್ವನಿ ವ್ಯವಸ್ಥೆ ಮಾಡಲಾಗುತ್ತದೆ. ಯೋಗ ಗುರುಗಳನ್ನು ಅನುಕರಣೆಗಾಗಿ ಬೃಹತ್‌ ಎಲ್‌ಇಡಿ ಪರದೆಗಳನ್ನು ಹಾಕಲಾಗುವುದು. ವಿವಿಧ ಭಾಗಗಳಿಂದ ಆಗಮಿಸುವ ನಾಗರಿಕರು, ಯೋಗಪಟುಗಳಿಗೆ ಶುಲ್ಕರಹಿತ ಸಾರಿಗೆ ವ್ಯವಸ್ಥೆ, ತುರ್ತು ಚಿಕಿತ್ಸೆಗೆ ವೈದ್ಯರ ತಂಡ ಹಾಗೂ ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next