Advertisement

ಸರಳ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ

03:52 PM Oct 30, 2020 | Suhan S |

ದೊಡ್ಡಬಳ್ಳಾಪುರ: ಕೊವಿಡ್‌-19 ಹಿನ್ನೆಲೆಯಲ್ಲಿ ಈ ಬಾರಿಯ  ಕರ್ನಾಟಕ  ರಾಜ್ಯೋತ್ಸವವನ್ನು ಶಾಲಾಮಕ್ಕಳ ಅನುಪಸ್ಥಿತಿಯಲ್ಲಿ, ಸಾರ್ವಜನಿಕರ ಹಾಗೂವಿವಿಧ ಕರ್ನಾಟಕಪರ ಸಂಘಟನೆಗಳ ಭಾಗವಹಿಸುವಿಕೆ ಯೊಂದಿಗೆ ಸರ್ಕಾರದ ಸೂಚನೆಯಂತೆ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್‌ ಹಾಗೂರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಟಿ.ಎಸ್‌.ಶಿವರಾಜ್‌ ತಿಳಿಸಿದರು.

Advertisement

ವಿವಿಧ ಕರ್ನಾಟಕಪರ ಸಂಘಟನೆಗಳ ಮುಖಂಡರು, ಇಲಾಖೆಗಳ ಮುಖ್ಯಸ್ಥರೊಂದಿಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಕರ್ನಾಟಕರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಎಂದಿನಂತೆ ರಾಜ್ಯೋತ್ಸವವನ್ನು ಭಗತ್‌ ಸಿಂಗ್‌ ಕ್ರೀಡಾಂಗಣದಲ್ಲಿ ಆಯೋಜಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಶಾಲಾ ಮಕ್ಕಳಿಲ್ಲದೇ ಸೀಮಿತ ಜನರು ಭಾಗವಹಿಸುವುದರಿಂದ ಕ್ರೀಡಾಂಗಣದಲ್ಲಿ ಬೇಡ ಎನ್ನುವ ಅಭಿಪ್ರಾಯಗಳುವ್ಯಕ್ತವಾದವು. ಈ ಹಿನ್ನೆಲೆಯಲ್ಲಿ ಮೆರವಣಿಗೆ ಇಲ್ಲದೇತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣನೆರವೇರಿಸಿ, ನಂತರ ಪುರಭವನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ ಸೇರಿದಂತೆ ಕರ್ನಾಟಕ ಗೀತೆಗಳ ಗಾಯನ ಹಾಗೂ ಶಿಷ್ಟಾಚಾರದಂತೆ ಕಾರ್ಯಕ್ರಮವನ್ನು ರೂಪಿಸಲು ತೀರ್ಮಾನಿಸಲಾಯಿತು.

ಡಾ.ವೆಂಕಟ ರೆಡ್ಡಿ ಹೆಸರಿನಲ್ಲಿ ಕರ್ನಾಟಕ ಕಟ್ಟಾಳು ಪ್ರಶಸ್ತಿ: ಪ್ರತಿ ವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಕರ್ನಾಟಕ ಕಟ್ಟಾಳು ಪ್ರಶಸ್ತಿ ನೀಡಬೇಕೆಂದು ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಪರ ಸಂಘಟನೆಗಳ ಮುಖಂಡರು ಸಲಹೆ ನೀಡಿದರು.

ಸನ್ಮಾನಿತರನ್ನು ಸೂಚಿಸಿ ಎಂದು ತಹಸೀಲ್ದಾರರು ಪ್ರಸ್ತಾಪಿಸಿದಾಗ, ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಈ ವರ್ಷದಿಂದ ರೈತ ಹಾಗೂಕರ್ನಾಟಕಪರ ಹೋರಾಟಗಾರ ಡಾ.ವೆಂಕಟ ರೆಡ್ಡಿ ಹೆಸರಿನಲ್ಲಿ ಕರ್ನಾಟಕ ಕಟ್ಟಾಳು ಪ್ರಶಸ್ತಿಯನ್ನು ಹಿರಿಯ ಕರ್ನಾಟಕಪರ ಹೋರಾಟಗಾರರಾದ ಟಿ.ಎನ್‌.ಪ್ರಭುದೇವ್‌, ಎಂ.ಸಂಜೀವ್‌ ನಾಯಕ್‌ ಹಾಗೂ ಜಿ.ಸತ್ಯನಾರಾಯಣ ಅವರಿಗೆ ನೀಡುವಂತೆಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಕರ್ನಾಟಕ ಮಾಧ್ಯಮದಲ್ಲಿ ಹಾಗೂ ಕರ್ನಾಟಕ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿ ತಿಳಿಸಿದರು. ಕಾರ್ಯಕ್ರಮ ಸರಳ ಆಚರಣೆ ಎಂದು ಕಾಟಾಚಾರವಾಗವುದು ಬೇಡ. ಸನ್ಮಾನಿತರಿಗೆ ಸಿಗಬೇಕಾದ ಮನ್ನಣೆ ಸಿಗಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಅಭಿಪ್ರಾಯ ಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿ, ದೈಹಿಕ ಶಿಕ್ಷಣ ಅಧಿಕಾರಿ ನಾಗರಾಜ್‌, ನಗರಸಭೆ ಪರಿಸರ ಅಧಿಕಾರಿ ಈರಣ್ಣ ಸೇರಿದಂತೆ ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next