Advertisement

ಮಾದರಿ ಕೃಷಿ ಪ್ರಾತ್ಯಕ್ಷಿಕೆಗೆ ಸಕಲ ಸಿದ್ಧತೆ

12:03 PM Dec 04, 2018 | |

ವಿಜಯಪುರ: ಆತ್ಮಸ್ಥೈರ್ಯ ಕಳೆದುಕೊಂಡಿರುವ ಕೃಷಿ ಹಾಗೂ ರೈತರಲ್ಲಿ ಭವಿಷ್ಯದ ಭರವಸೆ ಮೂಡಿಸಲು ವಿಜಯಪುರ ಜಿಲ್ಲೆಯಲ್ಲಿ ವಿನೂತನ ಪ್ರಯೋಗ ನಡೆದಿದೆ. ಭಾರತೀಯ ಸಾಂಸ್ಕೃತಿಕ ಉತ್ಸವಕ್ಕೆ ಭೇಟಿ ನೀಡುವ ರೈತರಿಗೆ ಸ್ವಾವಲಂಬಿ ಕೃಷಿಯ ವಾಸ್ತವಿಕತೆ ಮನವರಿಕೆ ಮಾಡಿಕೊಡಲು ಕೇವಲ ಒಂದು ಎಕರೆಯಲ್ಲಿ 101 ಬೆಳೆಗಳನ್ನು ಬೆಳೆಯುವ ವಾಸ್ತವದ ಮೂಲಕ ಪ್ರಾತ್ಯಕ್ಷಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ವಿದೇಶಿ ಅನುಕರಣೀಯ ಆಧುನಿಕ ಕೃಷಿಯ ಅವಲಂಬನೆ ಬಳಿಕ ಪರಾವಲಂಬಿಯಾದ ಭಾರತೀಯ ಕೃಷಿ ಹಾಗೂ ರೈತರು ತ್ಮಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಭಾರತೀಯ ಸ್ವಾಭಾವಿಕ, ನೈಸರ್ಗಿಕವಾಗಿದ್ದ ಪಾರಂಪರಿಕ ಕೃಷಿಗೆ ಬದಲಾಗಿ ತಾಂತ್ರೀಕರಣದ ಕೃಷಿ ಬೆನ್ನು ಬಿದ್ದಿರುವ ರೈತರು ಅದರಿಂದ ಅನುಭವಿಸುತ್ತಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಇಡೀ ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯ ಹಾಗೂ ಒಂದಷ್ಟು ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ಸಮಸ್ಯೆ ನೀಗಿಕೊಳ್ಳುತ್ತಿದ್ದ. ಆದರೆ ಹಣದ ಹಪಾಹಪಿಯಿಂದಾಗಿ ವಾಣಿಜ್ಯ ಬೆಳೆಯ ಬೆನ್ನು ಬಿದ್ದಿರುವ ರೈತರು ಇದರಿಂದ ಹೊರ ಬರಲು ಪರದಾಡುತ್ತಿದ್ದಾರೆ. ಹಲವು ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಈ ವಿಷ ವರ್ತುಲದಿಂದ ಹೊರ ಬರಲು ಸುಲಭ ಸಾಧನಗಳನ್ನು ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾರಂಪರಿಕ ಕೃಷಿಯ ಪ್ರಾತ್ಯಕ್ಷಿಕೆ ಮೂಲಕವೇ ಮನವರಿಕೆ ಮಾಡಿಕೊಡಲು ಮುಂದಾಗಿದೆ. 

ಇದಕ್ಕಾಗಿ ಡಿ.24ರಿಂದ ಜಿಲ್ಲೆಯ ಕಗ್ಗೊಡ ಗ್ರಾಮದಲ್ಲಿ 8 ದಿನಗಳ ಕಾಲ ನಡೆಯುವ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ಭಾರತೀಯ ಕೃಷಿಗೆ ಪಾರಂಪರಿಕ ಮೆರಗು ನೀಡಲು ಮುಂದಾಗಿದೆ. ಇದಕ್ಕಾಗಿ ರೈತರು ಸ್ವಾವಲಂಬಿ ಹಾಗೂ ಸ್ವಾಭಿಮಾನ ಹಾಗೂ ಸುಲಭವಾಗಿ ಸುಂದರ ಬದುಕು ರೂಪಿಸಿಕೊಳ್ಳುವುದನ್ನು ಮನವರಿಕೆ ಮಾಡಿಕೊಡುವ ಕೆಲಸ ನಡೆದಿದೆ. ಒಟ್ಟು 6 ಎಕರೆ ಪ್ರದೇಶದಲ್ಲಿ ಭಾರತೀಯ ಪರಂಪರಾಗತ ವಿವಿಧ ಮಾದರಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಾಗಿದೆ. 

ಮಹಾರಾಷ್ಟ್ರದ ಕನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಸಣ್ಣ ರೈತ ಕುಟುಂಬ ಕೇವಲ ಒಂದು ಎಕರೆ ಜಮೀನು ಇದ್ದರೂ ಕೃಷಿ ಮೂಲಕವೇ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ವಿವಿಧ ಆಹಾರ ಧಾನ್ಯಗಳು, ತರಕಾರಿಗಳು, ಹಣ್ಣಿನ ಬೆಳೆಗಳು ಸೇರಿ 101 ಬೆಳೆಗಳನ್ನು ಬೆಳೆಯಲಾಗಿದೆ. ಸಣ್ಣ ತೋಟದ ಮನೆ, ದೇಶಿ ಗೋವುಗಳ ಕೊಟ್ಟಿಗೆ, ಶೌಚಾಲಯ, ಗೋಬರ್‌ ಗ್ಯಾಸ್‌, ಎರೆಹುಳು ತಯಾರಿ ಘಟಕ ಹೀಗೆ ಕೃಷಿ ಸ್ವಾವಲಂಬನೆಗೆ ಬೇಕಾದ ಎಲ್ಲ ಸಂಪನ್ಮೂಲ, ಸೌಲಭ್ಯವನ್ನೂ ಕೇವಲ ಒಂದು ಎಕರೆ ಪ್ರದೇಶದಲ್ಲಿ ಮಾಡಲಾಗಿದೆ.

ಮತ್ತೂಂದೆಡೆ ಒಂದು ಎಕರೆಯಲ್ಲಿ ತೃಣ ಧಾನ್ಯಗಳಾದ 9 ನವಣೆ ತಳಿಗಳ ಬೆಳೆಗಳು. 8 ತಳಿ ಜೋಳ, 9 ತಳಿ ಗೋದಿ, ರೇಷ್ಮೆ, ವಿವಿಧ ತಳಿಯ ಮೆಣಸಿನಕಾಯಿ, ಬದನೆ, ಪಪ್ಪಾಯ, ಗಜ್ಜರಿ ಸೇರಿ ಹಲವು ತರಕಾರಿ ಬೆಳೆಯಲಾಗಿದೆ. ಮತ್ತೂಂದೆಡೆ
ಕಡಿಮೆ ಮಳೆಯಾಗುವ ಹಾಗೂ ಬರಡು ಜಮೀನು ಇರುವ ವಿಜಯಪುರ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಡ್ರ್ಯಾಗನ್‌ ಪ್ರೋಟ್‌ ಬೆಳೆಯುವ ಪ್ರಾತ್ಯಕ್ಷಿಕೆಯೂ ಇದೆ.

Advertisement

ಇದಲ್ಲದೇ ಅಂತರ್ಜಲ ಕುಸಿತದಿಂದಾಗಿ ಕೃಷಿಗೆ ಬಿದ್ದಿರುವ ಹೊಡೆತದಿಂದ ರಕ್ಷಿಸಿಕೊಳ್ಳಲು ಜಲಾನಯನ ಇಲಾಖೆಯಿಂದ ಬದುಗಳ ರಕ್ಷಣೆ, ಜಮೀನುಗಳಲ್ಲಿ ಜಲ ಇಂಗುವಿಕೆ, ಬತ್ತಿದ ಬಾವಿ-ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುವ ಪ್ರಾತ್ಯಕ್ಷಿಕೆಗಳನ್ನು ಕಗ್ಗೊಡದಲ್ಲಿ ನಡೆಯುವ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶಿಸುವುದರ ಜೊತೆಗೆ ರೈತರನ್ನು ಸ್ವಾವಲಂಬಿ ಜೀವನದತ್ತ ಹೆಜ್ಜೆ ಹಾಕಲು ಮಾರ್ಗದರ್ಶನ ಮಾಡುವ ಕೆಲಸ ಭರದಿಂದ ಸಾಗಿದೆ. 

„ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next