Advertisement

ಇ-ಕಾಮರ್ಸ್‌ ಸಂಸ್ಥೆಗಳ ವಿರುದ್ಧ ದಂಡ ಪ್ರಯೋಗಕ್ಕೆ ಸಿದ್ಧತೆ

06:10 AM Feb 15, 2018 | Team Udayavani |

ಬೆಂಗಳೂರು: ಇ- ಕಾಮರ್ಸ್‌ ಸಂಸ್ಥೆಗಳು, ಇ- ಕಾಮರ್ಸ್‌ ಉದ್ಯಮಗಳು ಆನ್‌ಲೈನ್‌ನಲ್ಲಿ ಮಾರುವ ಉತ್ಪನ್ನಗಳ ಎಂಆರ್‌ಪಿ ಸೇರಿದಂತೆ ಇತರೆ ವಿವರ ಪ್ರಕಟಿಸುವುದು ಜ.1ರಿಂದ ಕಡ್ಡಾಯವಾಗಿದ್ದರೂ ಬಹಳಷ್ಟು ಸಂಸ್ಥೆ ಪಾಲಿಸದ ಕಾರಣ ಪ್ರಕರಣ ದಾಖಲಿಸಿ ದಂಡ ಪ್ರಯೋಗಕ್ಕೆ ರಾಜ್ಯ ಕಾನೂನು ಮಾಪನ ಇಲಾಖೆ ಸಿದ್ಧತೆ ನಡೆಸಿದೆ.

Advertisement

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಸರಕಿಗೆ ಸಂಬಂಧಪಟ್ಟಂತೆ ಆರು ಪ್ರಮುಖ ವಿವರ ಪ್ರಕಟಿಸುವುದನ್ನು ಕೇಂದ್ರ ಸರ್ಕಾರ ಜ.1ರಿಂದ ಕಡ್ಡಾಯಗೊಳಿಸಿದೆ. ಇಷ್ಟಾದರೂ ಬಹಳಷ್ಟು ಇ-ಕಾಮರ್ಸ್‌ ಸಂಸ್ಥೆಗಳು ವಿವರ ಪ್ರಕಟಿಸುತ್ತಿಲ್ಲ. ವಿವರ ಪ್ರಕಟಿಸದಿರುವುದನ್ನು ವಂಚನೆ ಎಂದು ಪರಿಗಣಿಸಿರುವ ಇಲಾಖೆ ಇದೀಗ ದಂಡ ವಿಧಿಸಲು ಸಜ್ಜಾಗಿದೆ.

ಈಚಿನ ವರ್ಷಗಳಲ್ಲಿ ಆನ್‌ಲೈನ್‌ ವಹಿವಾಟು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇ- ಕಾಮರ್ಸ್‌ ಸಂಸ್ಥೆಗಳು, ಇ- ಕಾಮರ್ಸ್‌ ಉದ್ಯಮಗಳು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉತ್ಪನ್ನಗಳಿಗೆ ಭಾರಿ ರಿಯಾಯ್ತಿ ಘೋಷಿಸುತ್ತಿರುವುದರಿಂದ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಆದರೆ ಸರಕಿಗೆ ಸಂಬಂಧಪಟ್ಟಂತೆ ಕೆಲ ವಿವರ ನೀಡದ ಕಾರಣ ಗ್ರಾಹಕರು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ.

ಗ್ರಾಹಕರ ಹಿತಕ್ಕಾಗಿ ಕ್ರಮ: ಗ್ರಾಹಕರ ಹಿತ ಕಾಪಾಡಲು 2017ರ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್‌x ಕಮಾಡಿಟಿ) ತಿದ್ದುಪಡಿ ನಿಯಮಾವಳಿಯಂತೆ ಎಂಆರ್‌ಪಿ ಇತರೆ ವಿವರ ಪ್ರಕಟಣೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಡಿಜಿಟಲ್‌, ಎಲೆಕ್ಟ್ರಾನಿಕ್‌ ನೆಟ್‌ವರ್ಕ್‌ ವೇದಿಕೆಯಡಿ ನಾನಾ ಬ್ರಾಂಡ್‌ನ‌ ಸರಕು- ಸೇವೆ ಮಾರಾಟ ಮಾಡುವ ಸಂಸ್ಥೆಗಳು ಇ- ಕಾಮರ್ಸ್‌ ಸಂಸ್ಥೆ ಹಾಗೂ ತನ್ನದೇ ಬ್ರಾಂಡ್‌ನ‌ ಉತ್ಪನ್ನವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಸಂಸ್ಥೆಯನ್ನು ಇ- ಕಾಮರ್ಸ್‌ ಉದ್ಯಮ ಎಂದು ನಿಯಮದಲ್ಲಿ ಗುರುತಿಸಲಾಗಿದೆ.

ಉತ್ಪನ್ನದ ಹೆಸರು, ಉತ್ಪಾದಕರ ಹೆಸರು, ವಿಳಾಸ, ಎಂಆರ್‌ಪಿ, ನಿವ್ವಳ ತೂಕ, ಆಕಾರ, ಗ್ರಾಹಕರ ದೂರು ಸಲ್ಲಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ಅಂತರ್ಜಾಲದಲ್ಲಿ ನಿರ್ದಿಷ್ಟ ಗಾತ್ರದ ಅಕ್ಷರಗಳಲ್ಲಿ ಪ್ರಕಟಿಸುವುದು ಕಡ್ಡಾಯ. ಇದನ್ನು ಪಾಲಿಸುವಂತೆ ಇಲಾಖೆಯು ಇ- ಕಾಮರ್ಸ್‌ ಸಂಸ್ಥೆಗಳಿಗೆ ಪತ್ರ ಬರೆದು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಿತ್ತು. ಈವರೆಗೆ ಬೆರಳೆಣಿಕೆ ಸಂಸ್ಥೆಗಳಷ್ಟೇ ಕ್ರಮ ಕೈಗೊಂಡಿವೆ. ಆ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪರಿಶೀಲನೆ ಆರಂಭಿಸಿ ಪ್ರಕರಣ ದಾಖಲಿಸಲು ನಿರ್ಧರಿಸಿದೆ.

Advertisement

ವಂಚನೆ ಹೇಗೆ: ಅಂತರ್ಜಾಲದಲ್ಲಿ ಪ್ರಕಟಿಸುವ ಉತ್ಪನ್ನದ ಎಲ್ಲ ತೆರಿಗೆ ಒಳಗೊಂಡಂತೆ ಎಂಆರ್‌ಪಿ ದರ ಪ್ರಕಟಿಸದೆ ಭಾರಿ ರಿಯಾಯ್ತಿ ಪ್ರಕಟಿಸುತ್ತವೆ. ಮೂಲ ಬೆಲೆಯೇ ಗೊತ್ತಿಲ್ಲದೆ ರಿಯಾಯ್ತಿ ಆಕರ್ಷಣೆಗೆ ಒಳಗಾಗಿ ಖರೀದಿಸಿದಾಗ ನಿಗದಿತ ರಿಯಾಯ್ತಿ ಸಿಗದೆ ಹೋಗಬಹುದು. ಖರೀದಿಸಿದ ಉತ್ಪನ್ನದ ತೂಕ, ಅಳತೆಯಲ್ಲಿ ಲೋಪ. (ಉದಾ: 6.3 ಮೀ. ಉದ್ದದ ಸೀರೆ ಖರೀದಿಸಿದರೆ 5.45 ಮೀ. ಮಾತ್ರ ಇರುವುದು), ಖರೀದಿಸಿದ ಉತ್ಪನ್ನದ ಪೂರಕ ಉತ್ಪನ್ನ (ಆಕ್ಸೆಸರಿಸ್‌) ನೀಡದೆ ವಂಚಿಸುವುದು.

ಆನ್‌ಲೈನ್‌ನಲ್ಲಿ ಖರೀದಿಸುವ ಗ್ರಾಹಕರ ಅನುಕೂಲಕ್ಕಾಗಿ ಸರಕಿನ ಎಂಆರ್‌ಪಿ ಸೇರಿದಂತೆ ಇತರೆ ವಿವರ ಪ್ರಕಟಿಸುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಇ-ಕಾಮರ್ಸ್‌ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಆದರೂ ಕೆಲ ಸಂಸ್ಥೆಗಳು ವಿವರ ಪ್ರಕಟಿಸದಿರುವುದು ಕಂಡುಬಂದಿದ್ದು, ಈ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಸದ್ಯದಲ್ಲೇ ನಿಯಮಾನುಸಾರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ.
– ಎಂ.ಮಮತ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಇಲಾಖೆ

ದಂಡ- ಜೈಲು ಶಿಕ್ಷೆ
ಮೊದಲ ಬಾರಿ ನಿಯಮ ಉಲ್ಲಂಘನೆಗೆ 5000 ರೂ. ದಂಡ. ಎರಡನೇ ಬಾರಿ ನಿಯಮ ಉಲ್ಲಂಘನೆಗೆ ನ್ಯಾಯಾಲಯದಲ್ಲಿ ದಾವೆ ಹೂಡಿ, ಗರಿಷ್ಠ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ. ಇ-ಕಾಮರ್ಸ್‌ ಸಂಸ್ಥೆಗಳು ನಾನಾ ಕಂಪನಿ, ಬ್ರಾಂಡ್‌ನ‌ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುತ್ತವೆ. ಆದರೆ ನಿಯಮ ಉಲ್ಲಂಘನೆಯಾದಾಗ ನಿರ್ದಿಷ್ಟ ಕಂಪನಿ ಜತೆಗೆ ಇ- ಕಾಮರ್ಸ್‌ ಸಂಸ್ಥೆಯೂ ಜವಾಬ್ದಾರಿ ಹೊರಬೇಕಾಗುತ್ತದೆ. ಸರಕಿನ ಸ್ವರೂಪ, ಸಂದರ್ಭಕ್ಕೆ ಪೂರಕವಾಗಿ ಜವಾಬ್ದಾರಿ ಗೊತ್ತುಪಡಿಸಲಾಗುತ್ತದೆ. ಆಯ್ದ ಉತ್ಪನ್ನಗಳ ಬಳಕೆ ಮಿತಿಯ ತಿಂಗಳು, ವರ್ಷದ ವಿವರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ಅಗತ್ಯವಿಲ್ಲ. ಆದರೆ ಉತ್ಪನ್ನದ ಮೇಲೆ ನಮೂದಿಸುವುದು ಕಡ್ಡಾಯ.

ಗ್ರಾಹಕರೂ ದೂರು ನೀಡಬಹುದು
ಆನ್‌ಲೈನ್‌ನಲ್ಲಿ ಸರಕು ಖರೀದಿ ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ ಗ್ರಾಹಕರು ದಾಖಲೆ ಸಹಿತ ದೂರು ನೀಡಬಹುದಾಗಿದೆ. ದೂರವಾಣಿ ಸಂಖ್ಯೆ: 080- 2225 3500. ಇ-ಮೇಲ್‌ ವಿಳಾಸ: kar.lmdhelpdesk@gmail.com

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next