ತಿ.ನರಸೀಪುರ: ತಾಲೂಕಿನ ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಭಾನುವಾರದಿಂದ ಆರಂಭಗೊಳ್ಳುವ 11ನೇ ಕುಂಭಮೇಳದಲ್ಲಿ 2 ರಿಂದ 3 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಅವರಿಗೆ ಅನುಕೂಲ ಕಲ್ಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಉಪಭಾಗಾಧಿಕಾರಿ ಶಿವೇಗೌಡ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ವಿವರ ನೀಡಿದ ಅವರು, ಕಳೆದ ಬಾರಿಗಿಂತ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ. ಸಂಚಾರಕ್ಕೆ ಯಾವುದೇ ಕೊರತೆಯಾಗದಂತೆ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ಎಚ್ಚರಿಗೆ ವಹಿಸಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಐದು ಕಡೆ ಸಹಾಯವಾಣಿ ಕೇಂದ್ರ ತೆರೆಯಲಾಗುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಕೂಡ ಬರುತ್ತಿರುವುದರಿಂದ 1400 ಪೊಲೀಸರ ನಿಯೋಜನೆಗೆ ಕ್ರಮ ವಹಿಸಲಾಗಿದೆ. 80 ಜನ ಈಜುಗಾರರನ್ನು ಅವಘಡದ ನಿಯಂತ್ರಣಕ್ಕೆ ನಿಯೋಜಿಸಲಾಗಿದೆ. 4 ಬೋಟಿಂಗ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಗುಂಜಾ ನರಸಿಂಹಸ್ವಾಮಿ ದೇಗುಲ ಬಳಿ, ಅಗಸ್ತೇಶ್ವರ ಸ್ವಾಮಿ, ಮಠದ ಬಳಿ 200 ಬಟ್ಟೆ ಬದಲಿಸುವ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಸೆಸ್ಕ್ ವತಿಯಿಂದ ದಸರಾ ಮಾದರಿಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ತ್ರಿವೇಣಿ ಸಂಗಮದ ಅಕ್ಕಪಕ್ಕ ಹಾಗೂ ಪಟ್ಟಣದಲ್ಲಿ ಸ್ವತ್ಛತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪೊಟಾಷ್ ಆಲಂ, ಬ್ಲೀಚಿಂಗ್ ಬಳಕೆ ಮಾಡಿ ಸ್ವತ್ಛಗೊಳಿಸಲಾಗುತ್ತಿದೆ. ತುರ್ತು ಸಂದರ್ಭಕ್ಕಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಸಂಗಮದ ಬಳಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರ ನೀಡಿದರು.
ತಹಶೀಲ್ದಾರ್ ಪಿ.ಎನ್.ನಾಗಪ್ರಶಾಂತ್, ಬಿಇಒ ಸ್ವಾಮಿ, ಸಿಡಿಪಿಒ ಬಿ.ಎನ್.ಬಸವರಾಜು, ಪಿಎಸ್‌ಐ ಅಜರುದ್ದೀನ್, ಎಇಇ ಸುರೇಶ್, ಲೋಕೋಪಯೋಗಿ ಎಇಇ ಶಿವಶಂಕರ್, ಬಿಆರ್‌ಸಿ ಮಂಜುಳಾ, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಪುರಸಭಾ ಮುಖ್ಯಾಧಿಕಾರಿ ಅಶೋಕ್ ಇತರರಿದ್ದರು.