Advertisement

ಸಬ್‌ಅರ್ಬನ್‌ಗೆ “ಸಮಗ್ರ’ಸಿದ್ಧತೆ

12:02 PM Feb 13, 2018 | |

ಬೆಂಗಳೂರು: ಬಜೆಟ್‌ನಲ್ಲಿ ಅನುಮೋದನೆಗೊಂಡ ಬೆನ್ನಲ್ಲೇ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಗೆ ವೇಗ ದೊರಕಿದ್ದು, ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಈ ಸಂಬಂಧದ “ಸಮಗ್ರ ಯೋಜನಾ ವರದಿ’ (ಡಿಪಿಆರ್‌) ಸಿದ್ಧಗೊಳ್ಳಲಿದೆ. ಈಗಾಗಲೇ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲಾಗಿದ್ದು, ಡಿಪಿಆರ್‌ಗೂ ಸಿದ್ಧತೆ ನಡೆದಿದೆ.

Advertisement

ಈ ಸಂಬಂಧ ರೈಟ್ಸ್‌ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಡಿಪಿಆರ್‌ ಸಿದ್ಧಪಡಿಸಲು 9ರಿಂದ 10 ತಿಂಗಳು ಬೇಕಾಗುತ್ತದೆ. ಆದರೆ, ಮೂರ್‍ನಾಲ್ಕು ತಿಂಗಳಲ್ಲಿ ಉಪನಗರ ಯೋಜನೆ ಡಿಪಿಆರ್‌ ರೂಪಿಸುವ ಗುರಿ ಇದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌. ಸಕ್ಸೇನಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಒಟ್ಟಾರೆ 160 ಕಿ.ಮೀ ಉದ್ದದ ರೈಲು ಮಾರ್ಗದ ಪೈಕಿ, ಈಗಾಗಲೇ ಕಂಟೋನ್ಮೆಂಟ್‌-ವೈಟ್‌ಫೀಲ್ಡ್‌ ನಡುವೆ 492 ಕೋಟಿ ರೂ. ವೆಚ್ಚದಲ್ಲಿ ರೈಲು ಮಾರ್ಗಗಳ ಚತುಷ್ಪಥ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಉಳಿದ 142.8 ಕಿ.ಮೀ. ಅನ್ನು ಉಪನಗರ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗುವುದು. ಇಡೀ ಯೋಜನೆ ವೆಚ್ಚ 17 ಸಾವಿರ ಕೋಟಿ ರೂ. ಆಗಿದ್ದು, ಈ ಪೈಕಿ ಮೂಲಸೌಕರ್ಯಗಳಿಗೆ 12,413 ಕೋಟಿ ರೂ.ಗೆ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ ಎಂದು ಆರ್‌.ಎಸ್‌. ಸಕ್ಸೇನಾ ಸ್ಪಷ್ಟಪಡಿಸಿದರು. 

ಯೋಜನೆ ಸಿವಿಲ್‌ ಕಾಮಗಾರಿಗೆ 7,223 ಕೋಟಿ ರೂ., ಭೂಸ್ವಾಧೀನಕ್ಕೆ 2,075 ಕೋಟಿ, ಎಲೆಕ್ಟ್ರಿಕಲ್‌ 286 ಕೋಟಿ, ಸಮೀಕ್ಷೆ, ವಿನ್ಯಾಸ, ಪರಿಸರಕ್ಕೆ ಸಂಬಂಧಿಸಿದ ವೆಚ್ಚಕ್ಕೆ 1,472 ಕೋಟಿ ರೂ. ಸೇರಿದಂತೆ ಒಟ್ಟಾರೆ 12,413 ಕೋಟಿ ರೂ. ಈ ಯೋಜನೆಗೆ ಖರ್ಚಾಗಲಿದೆ.

ರೈಲು ಕಾರಿಡಾರ್‌ಗೆ 15 ಎಕರೆ, ಬಿನ್ನಿ ಮಿಲ್‌ ಬಳಿ ಸ್ಥಿರೀಕರಣ ಮಾರ್ಗ ನಿರ್ಮಾಣಕ್ಕೆ 10 ಎಕರೆ ಹಾಗೂ “ಎಮು’ ಡಿಪೊ ಕಂ ಟ್ರಿಪ್‌ ಶೆಡ್‌ಗೆ 75 ಎಕರೆ ಒಳಗೊಂಡಂತೆ ಯೋಜನೆಗೆ 100 ಎಕರೆ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 50:50ರ ಪಾಲುದಾರಿಕೆಯಲ್ಲಿ ವೆಚ್ಚ ಭರಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು ಐದು ಎಫ್ಎಸ್‌ಐ (ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌)ಗೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. 

Advertisement

ಇದಲ್ಲದೆ, ಬಜೆಟ್‌ನಲ್ಲಿ ಬೈಯಪ್ಪನಹಳ್ಳಿ-ಹೊಸೂರು, ಯಶವಂತಪುರ-ಚನ್ನಸಂದ್ರ, ಪಿನುಕೊಂಡ-ಧರ್ಮಾವರಂ ನಡುವಿನ 41.5 ಕಿ.ಮೀ. ಜೋಡಿ ಮಾರ್ಗಗಳ ನಿರ್ಮಾಣಕ್ಕೆ 295 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಯಶವಂತಪುರ, ಬೈಯಪ್ಪನಹಳ್ಳಿ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಬಳಿ ಹಾದುಹೋಗುವ ಈ ಮಾರ್ಗವು ಬಹುತೇಕ ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದರಿಂದ ಆ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ.

ಚಿಕ್ಕಬಾಣಾವರ-ಹಾಸನ ಮತ್ತು ಬಂಗಾರಪೇಟೆ-ಯಲಹಂಕ ನಡುವಿನ 315 ಕಿ.ಮೀ. ಉದ್ದದ ಮಾರ್ಗವು ವಿದ್ಯುದ್ದೀಕರಣಗೊಳ್ಳಲಿದ್ದು, ಇದರ ಯೋಜನಾ ವೆಚ್ಚ 293.38 ಕೋಟಿ ರೂ. ಆಗಿದೆ ಎಂದು ವಿವರಿಸಿದರು. 

ಉಪನಗರ ರೈಲು ಎಲ್ಲೆಲ್ಲಿ?
ಎಲ್ಲಿಂದ ಎಲ್ಲಿಗೆ    ಮಾರ್ಗದ ಉದ್ದ (ಕಿ.ಮೀ.ಗಳಲ್ಲಿ)

-ಬೆಂಗಳೂರು ಸಿಟಿ-ಯಶವಂತಪುರ-ಯಲಹಂಕ    18.15 
-ಯಲಹಂಕ-ಚನ್ನಸಂದ್ರ-ಬೈಯಪ್ಪನಹಳ್ಳಿ    16.17
-ಬೈಯಪ್ಪನಹಳ್ಳಿ-ಕಂಟೋನ್ಮೆಂಟ್‌-ಬೆಂಗಳೂರು ಸಿಟಿ    4.76
-ಲೊಟ್ಟೆಗೊಲ್ಲಹಳ್ಳಿ-ಹೆಬ್ಟಾಳ-ಬೈಯಪ್ಪನಹಳ್ಳಿ    14.4
-ಕೆಂಗೇರಿ-ಬೆಂಗಳೂರು ಸಿಟಿ    12.22
-ನೆಲಮಂಗಲ-ಚಿಕ್ಕಬಾಣಾವರ    13.8
-ಚಿಕ್ಕಬಾಣಾವರ-ಯಶವಂತಪುರ    8.12
-ರಾಜಾನುಕುಂಟೆ-ಯಲಹಂಕ    8.71 
-ದೇವನಹಳ್ಳಿ-ಯಲಹಂಕ    23.7
-ಹೀಲಳಿಗೆ-ಬೈಯಪ್ಪನಹಳ್ಳಿ    22.81
-ಒಟ್ಟಾರೆ    142.8 ಕಿ.ಮೀ.

ಭೂಸ್ವಾಧೀನ ಮತ್ತು ವೆಚ್ಚ
ವಿವರಣೆ    ಭೂಸ್ವಾಧೀನ (ಎಕರೆಗಳಲ್ಲಿ)    ಮೊತ್ತ (ಕೋಟಿ ರೂ.ಗಳಲ್ಲಿ)

-ರೈಲ್ವೆ ಕಾರಿಡಾರ್‌    15    1,200
-ಬಿನ್ನಿಮಿಲ್‌ ಸಮೀಪ ಸ್ಟೇಬ್ಲಿಂಗ್‌ ಲೈನ್‌ಗಳು    10    500
-ಡಿಪೋ ಕಂ ಟ್ರಿಪ್‌ ಶೆಡ್‌    75     375
-ಒಟ್ಟಾರೆ    100 ಎಕರೆ    2,075 ಕೋಟಿ ರೂ. 

ಎತ್ತರಿಸಿದ ಮಾರ್ಗ ಎಲ್ಲೆಲ್ಲಿ?
-ಲೊಟ್ಟೆಗೊಲ್ಲಹಳ್ಳಿ-ಹೆಬ್ಟಾಳ-ಬಾಣಸವಾಡಿ-ಬೈಯಪ್ಪನಹಳ್ಳಿ
-ನೆಲಮಂಗಲ-ಚಿಕ್ಕಬಾಣಾವರ
-ದೇವನಹಳ್ಳಿ-ಯಲಹಂಕ
-ಹೀಲಳಿಗೆ-ಬೈಯಪ್ಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next