ಹೊಸದಿಲ್ಲಿ: ಬಾಲ್‌ಕೋಟ್ ಉಗ್ರ ಶಿಬಿರಗಳ ಮೇಲೆ ವಾಯು ದಾಳಿಯ ಬಳಿಕ ಪಾಕಿಸ್ಥಾನದ ಯಾವುದೇ ಪ್ರಚೋದನೆಗೆ ಪ್ರತಿಕ್ರಿಯಿಸಲು ಸೇನೆ ಮೂರು ವಲಯಗಳಲ್ಲಿ ಸರ್ವ ಸನ್ನದ್ಧವಾಗಿತ್ತು ಎಂದು ಮೂರು ಸೇನೆಗಳ ಅಧಿಕಾರಿಗಳು ಗುರುವಾರ ಸಂಜೆ ಮಹತ್ವದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ ಅಧಿಕಾರಿಗಳು, ಪಾಕ್ ಈಗಲೂ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗುರುವಾರ ಮಧ್ಯಾಹ್ನವೂ ಪಾಕ್ ಕಡೆಯಿಂದ 2 ಜೆಟ್ ವಿಮಾನಗಳು ವಾಯುಗಡಿ ಉಲ್ಲಂಘನೆ ಮಾಡಿ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಹಾರಾಟ ನಡೆಸಿವೆ. ಆದರೆ ಅವುಗಳನ್ನು ನಮ್ಮ ಸೇನಾ ವಿಮಾನಗಳು ಹಿಮ್ಮೆಟ್ಟಿಸಿವೆ ಎಂದರು.
ಪಾಕ್ ಮೊದಲು ಮೂರು ಭಾರತದ ವಿಮಾನಗಳನ್ನು ಹೊಡೆದುರುಳಿಸಿ ಇಬ್ಬರು ಪೈಲಟ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಸುಳ್ಳು ಹೇಳಿತ್ತು, ಆದರೆ ಒಂದು ಮಿಗ್ ವಿಮಾನಮಾತ್ರ ನಾಪತ್ತೆಯಾಗಿದ್ದು, ಪೈಲಟ್ ಅಭಿನಂದನ್‌ರನ್ನು ನಾಳೆ ಭಾರತಕ್ಕೆ ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಪಾಕ್ ವಿಮಾನಗಳು ನಮ್ಮ ವಾಯುನೆಲೆಯನ್ನು ಗುರಿಯಾಗಿಟ್ಟುಕೊಂಡು ದಾಳಿಗೆ ಮುಂದಾಗಿದ್ದವು ಎಂದು ತಿಳಿಸಿದರು.
ಇದೇ ವೇಳೆ ಪಾಕ್ ನಡೆಸಿದ AMRAAM ಕ್ಷಿಪಣಿ ದಾಳಿಯನ್ನು ಧೃಡ ಪಡಿಸಿ ಪತನಗೊಂಡ ಕ್ಷಿಪಣಿಯ ಅವಶೇಷಗಳನ್ನು ಸುದ್ದಿಗಾರರೆದುರು ಪ್ರದರ್ಶಿಸಿದರು.