Advertisement

ಉತ್ತರ-ದಕ್ಷಿಣದ ಚುನಾವಣೆಗೆ ಸಕಲ ಸಿದ್ಧತೆ

04:34 PM Apr 14, 2018 | Team Udayavani |

ದಾವಣಗೆರೆ: ಮೇ 12ರಂದು ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕೆ
ಸಕಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಇಸ್ಲಾವುದೀನ್‌ ಗದ್ಯಾಳ್‌ ತಿಳಿಸಿದ್ದಾರೆ.

Advertisement

ಶುಕ್ರವಾರ, ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಾಲಿಕೆ ವ್ಯಾಪ್ತಿಯ 2 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಮತಗಟ್ಟೆ ಗುರುತಿಸುವಿಕೆ, ಮತದಾರರ ಪಟ್ಟಿ ಸಿದ್ಧತೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಎರಡೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5,56,620 ಜನಸಂಖ್ಯೆ ಇದೆ. ಈ ಪೈಕಿ 4,34,228 ಜನ ಮತದಾನದ ಹಕ್ಕು ಹೊಂದಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 2,33,070 ಮತದಾರರಿದ್ದು ಈ ಪೈಕಿ 1,17,231 ಪುರುಷ, 1,15,839 ಮಹಿಳಾ ಮತದಾರರಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,01,158 ಮತದಾರರಿದ್ದು, ಈ ಪೈಕಿ 99,590 ಮಹಿಳೆಯರು, 1,01,568 ಪುರುಷ ಮತದಾರರಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ 232 ಮತಗಟ್ಟೆ ಇದ್ದವು, 13 ಹೊಸ ಕೇಂದ್ರ ಸ್ಥಾಪಿಸಲಾಗುವುದು. ಇದೇ ರೀತಿ ದಕ್ಷಿಣ ಕ್ಷೇತ್ರದಲ್ಲಿ 208 ಮತಗಟ್ಟೆ ಇದ್ದವು, ಈಗ ಮತ್ತೆ 3 ಸೇರಿ, ಒಟ್ಟು 211 ಮತಗಟ್ಟೆ ಕಾರ್ಯ ನಿರ್ವಹಿಸಲಿವೆ
ಎಂದು ಅವರು ತಿಳಿಸಿದರು. 

ಚುನಾವಣೆಗೆ ಅಗತ್ಯ ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದೆ. ಉತ್ತರಕ್ಕೆ 19, ದಕ್ಷಿಣಕ್ಕೆ 17 ಸೆಕ್ಟರ್‌ ಅಧಿಕಾರಿಗಳು, ಅಂಕಿ ಅಂಶ ಸರ್ವೇಕ್ಷಣೆಗೆ 6 ತಂಡ, ದಕ್ಷಿಣಕ್ಕೆ 7 ತಂಡ, ಫ್ಲೆಯಿಂಗ್‌ ಸ್ಕಾಡ್‌ ಉತ್ತರಕ್ಕೆ 4, ದಕ್ಷಿಣಕ್ಕೆ 5 ತಂಡ ನಿಯೋಜಿಸಲಾಗಿದೆ.
ಇವಿಎಂ ಮಾಸ್ಟರ್‌ ತರಬೇತಿಗೆ ಎರಡೂ ಕ್ಷೇತ್ರಕ್ಕೆ 6 ಮಂದಿ ನಿಯೋಜಿಸಲಾಗಿದೆ. ಇದರ ಜೊತೆಗೆ ವಿಡಿಯೋ ಸರ್ವೇಕ್ಷಣೆ,
ವೀಡಿಯೋ ವೀಕ್ಷಣೆ, ಲೆಕ್ಕಾಚಾರ ವೀಕ್ಷಣೆಗೆ ತಲಾ ಒಂದು ತಂಡ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಇದರ ಜೊತೆಗೆ ಕ್ಲಿಷ್ಟ, ದುರ್ಬಲ ಮತಗಟ್ಟೆಗಳನ್ನು ಗುರುತಿಸಿ ವಿಶೇಷ ಭದ್ರತೆ ನೀಡಲು ಕ್ರಮ ವಹಿಸಲಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 7 ದುರ್ಬಲ, 48 ಕ್ಲಿಷ್ಟ, ದಕ್ಷಿಣ ಕ್ಷೇತ್ರದಲ್ಲಿ 8 ದುರ್ಬಲ, 52 ಕ್ಲಿಷ್ಟ ಮತಗಟ್ಟೆ ಗುರುತಿಸಲಾಗಿದೆ. ಮುಕ್ತ, ನಿರ್ಭೀತ ಚುನಾವಣೆ ನಡೆಸುವುದು ಮುಖ್ಯ ಉದ್ದೇಶ ಆಗಿದೆ ಎಂದು ಅವರು ತಿಳಿಸಿದರು. 

Advertisement

ಪಿಂಕ್‌ ಮತಗಟ್ಟೆ ಆರಂಭಕ್ಕೂ ಸಹ ಕ್ರಮ ವಹಿಸಲಾಗಿದೆ. ಹೆಣ್ಣುಮಕ್ಕಳು ಹೆಚ್ಚಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಬರೀ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಈ ಮತಗಟ್ಟೆಗಳನ್ನು ಪಿಂಕ್‌ ಮತಗಟ್ಟೆ ಎಂದು ಗುರುತಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಉಪ ಆಯುಕ್ತ ಯೋಗೇಂದ್ರ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next