ಶ್ರೀಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲಿಂಗಾಯತ ಧರ್ಮ ವೇದಿಕೆ ಕಾರ್ಯದರ್ಶಿಯಾಗಿರುವ ಎಸ್.ಎಂ. ಜಾಮದಾರ ಹೇಳಿದ್ದಾರೆ.
Advertisement
ಜನವರಿ ಕೊನೇ ವಾರದಲ್ಲಿ ಬೆಂಗಳೂರಿನಲ್ಲಿ ಸೂಕ್ತ ಸ್ಥಳದಲ್ಲಿ ಚರ್ಚಿಸಲು ಸಿದ್ಧರಿದ್ದು, ಶ್ರೀಗಳು ಕೇಳುವ ಎಲ್ಲ ಪ್ರಶ್ನೆಗಳಿಗೂ ತಮ್ಮ ತಂಡ ಉತ್ತರಿಸಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವೇಶ ತೀರ್ಥ ಶ್ರೀಗಳು ಲಿಂಗಾಯತರೂ ಶಿವನ ಪೂಜೆ ಮಾಡುತ್ತಾರೆ. ಹೀಗಾಗಿ ಅವರೂ ಹಿಂದುಗಳೇ ಎಂದು ಹೇಳಿದ್ದರು. ಅವರ ಹೇಳಿಕೆ ವಿರೋಧಿಸಿ ಲಿಂಗಾಯತ ಶಿವನಿಗೂ ಹಿಂದುಗಳ ಶಿವನಿಗೂ ವ್ಯತ್ಯಾಸವಿದೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಹೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಪೇಜಾವರ ಶ್ರೀಗಳು ಲಿಂಗಾಯತರು ಹಿಂದೂಗಳೇ ಎನ್ನುವುದರ ಕುರಿತು ಬಹಿರಂಗವಾಗಿ ಚರ್ಚಿಸಲು ಸಿದ್ಧ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಅಕ್ಟೋಬರ್‌ನಲ್ಲಿ ಚಾತುರ್ಮಾಸ್ಯ ಪೂಜೆ ಇರುವುದರಿಂದ ಉಡುಪಿ ಬಿಟ್ಟು ಬರಲು ಆಗುವುದಿಲ್ಲ.ಜನವರಿಯಲ್ಲಿ ಬೆಂಗಳೂರಿನಲ್ಲಿಯೇ ಮುಕ್ತ ಚರ್ಚೆಗೆ ಬರುವುದಾಗಿ ಹೇಳಿದ್ದರು. ಹೀಗಾಗಿ, ಬಹಿರಂಗ ಚರ್ಚೆಗೆ ಒಪ್ಪಿ ಜನವರಿ ಕೊನೇ ವಾರದಲ್ಲಿ ನಿಗದಿಮಾಡಬಹುದು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಈಮಧ್ಯೆ, ಹಿಂದೂಗಳ ಆರಾಧ್ಯ ದೈವ ಶಿವನ ಬಗ್ಗೆ ಅನಗತ್ಯವಾಗಿ ಹೇಳಿಕೆ ನೀಡದಂತೆ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರಗೆ ವಿಧಾನ ಪರಿಷತ್ ಸದಸ್ಯ ಹಾಗೂ ಲಿಂಗಾಯತ ಧರ್ಮ ವೇದಿಕೆಯ ಗೌರವಾಧ್ಯಕ್ಷ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ದೇವರು ಮತ್ತು ಧಾರ್ಮಿಕ ಆಚರಣೆ ಅವರವರ ವೈಯಕ್ತಿಕ ವಿಷಯವಾಗಿದ್ದು, ಅದನ್ನು ಪ್ರಸ್ತಾಪ
ಮಾಡುವ ಮೂಲಕ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.