ಹೊಸದಿಲ್ಲಿ: ಯಾವುದೇ ರೀತಿಯ ಭದ್ರತಾ ಅಪಾಯವನ್ನು ಸಮರ್ಥವಾಗಿ ಎದುರಿಸಲು ನಮ್ಮ ನೌಕಾಪಡೆ ಸನ್ನದ್ಧವಾಗಿದೆ. ಜತೆಗೆ, ನೌಕಾ ಥಿಯೇಟರ್ ಕಮಾಂಡ್ ರಚನೆ ಸೇರಿದಂತೆ ಮೂರೂ ಸೇನೆಗಳ ಸುಧಾರಣ ಕ್ರಮಗಳನ್ನೂ ನಾವು ಬೆಂಬಲಿಸುತ್ತೇವೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಹೇಳಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ಚೀನ ನೌಕಾಪಡೆಯ ಕ್ಷಿಪ್ರಗತಿಯ ಚಟುವಟಿಕೆಗಳು ಹೆಚ್ಚಿರುವಂತೆಯೇ ನೌಕಾಪಡೆ ಮುಖ್ಯಸ್ಥರಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ.
ಚೀನೀ ನೌಕಾಪಡೆಯ ಚಟುವಟಿಕೆಗಳು ನಮ್ಮ ಗಮನಕ್ಕೆ ಬಂದಿವೆ. ಅವರು ಕಳೆದ 10 ವರ್ಷಗಳಲ್ಲಿ 138 ನೌಕೆಗಳನ್ನೂ ನಿರ್ಮಿಸಿದ್ದಾರೆ. ಆದರೆ ನಮ್ಮ ವ್ಯಾಪ್ತಿಯಲ್ಲಿ ಚೀನ ಯಾವುದೇ ದುಸ್ಸಾಹಸಕ್ಕೆ ಕೈಹಾಕದಂತೆ ನೋಡಿಕೊಳ್ಳುತ್ತೇವೆ ಎಂದೂ ಅಡ್ಮಿರಲ್ ಹರಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 413 ಕೋವಿಡ್ ಪಾಸಿಟಿವ್ ಸೋಂಕು ಪತ್ತೆ: ನಾಲ್ವರು ಸಾವು
ಇದೇ ವೇಳೆ ದೇಶದ ಪ್ರಮುಖ ಯುದ್ಧನೌಕೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಪ್ರಸ್ತುತ 28 ಮಹಿಳೆಯರನ್ನು ಪ್ರಮುಖ ಹುದ್ದೆಗಳಿಗೆ ನಿಯೋಜಿಸಲಾಗಿದೆ.
ಕೇಂದ್ರ ಸರಕಾರದ ಮಹಿಳಾ ಸಶಕ್ತೀಕರಣದ ಉದ್ದೇಶದ ಹಿನ್ನೆಲೆಯಲ್ಲಿ ನೌಕಾಪಡೆ ಈ ನಿರ್ಧಾರ ತೆಗೆದುಕೊಂಡಿದೆ. ನೌಕಾಪಡೆ ಮಹಿಳೆಯರನ್ನು ನೇಮಿಸಿಕೊಂಡು, ಅವರಿಗೆ ದೊಡ್ಡ ಜವಾಬ್ದಾರಿ ನೀಡಲು ಸರ್ವ ಸನ್ನದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.