Advertisement

PM ಮೋದಿ, ಶಾಗೆ ಕೊಲೆ ಬೆದರಿಕೆ- ಸಾವು ಎದುರಿಸಲು ಸಿದ್ಧರಾಗಿ: ಖಲಿಸ್ಥಾನಿ ಉಗ್ರರ ಎಚ್ಚರಿಕೆ

08:14 AM Sep 13, 2023 | Pranav MS |

ಟೊರಾಂಟೋ/ಹೊಸದಿಲ್ಲಿ: ಖಲಿಸ್ಥಾನಿ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರಿಗೆ ಎಚ್ಚರಿಕೆ ನೀಡಿರುವಂತೆಯೇ, ಆ ದೇಶದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಜೋರಾಗಿದೆ.

Advertisement

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಖಲಿಸ್ಥಾನಿ ಉಗ್ರರು ನೇರವಾಗಿಯೇ ಹತ್ಯೆ ಬೆದರಿಕೆ ಹಾಕಿದ್ದಾರೆ.

ರವಿವಾರ ಕೆನಡಾದ ವಾಂಕೂವರ್‌ನಲ್ಲಿ ಭಾರತ ವಿರೋಧಿ ಪ್ರತಿಭಟನೆ ನಡೆದಿತ್ತು. ಅದರಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸಿದ್ದರು. ಸಿಕ್ಖ್ ಫಾರ್‌ ಜಸ್ಟೀಸ್‌ ಎಂಬ ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥ ಗುರು ಪತ್ವಂತ್‌ ಸಿಂಗ್‌ ಪನ್ನು, “ನಾವು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಜೈಶಂಕರ್‌, ಅಜಿತ್‌ ದೋವಲ್‌ ಅವರಿಗಾಗಿ ಭಾರತಕ್ಕೆ ಬರಲಿದ್ದೇವೆ. ಹರ್‌ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೊಂದವರಿಗಾಗಿ ಭಾರತಕ್ಕೆ ಆಗಮಿಸಲಿದ್ದೇವೆ. ಸಾವನ್ನು ಎದುರಿಸಲು ಸಿದ್ಧರಾಗಿ’ ಎಂದು ವೀಡಿಯೋದಲ್ಲಿ ಬೆದರಿಕೆ ಹಾಕಿದ್ದಾನೆ.

ದೇಶ ಛಿದ್ರಗೊಳಿಸುವೆವು: ಇದಲ್ಲದೆ ಭಾರತವನ್ನು ಛಿದ್ರಗೊಳಿಸುತ್ತೇವೆ ಮತ್ತು ಅದಕ್ಕಾಗಿ ಅಂತಾರಾಷ್ಟ್ರೀಯ ಕಾನೂನುಗಳನ್ನು ಬಳಕೆ ಮಾಡುತ್ತೇವೆ ಎಂಬ ಬೆದರಿಕೆಗಳನ್ನೂ ಒಡ್ಡಲಾಗಿದೆ. ಇನ್ನೊಂದೆಡೆ ಭಾರತದಲ್ಲಿ ಜಿ20 ಶೃಂಗದ ವೇಳೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರನ್ನು ಅಗೌರವದಿಂದ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಖಲಿಸ್ಥಾನಿ ಉಗ್ರರ ಗುಂಪೊಂದು, “ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಯನ್ನು ಮುಚ್ಚಬೇಕು ಮತ್ತು ಹೈಕಮಿಷನರ್‌ ಸಂಜಯ ಕುಮಾರ್‌ ವರ್ಮಾ ಅವರನ್ನು ವಾಪಸ್‌ ಕರೆಯಿಸಿಕೊಳ್ಳಬೇಕು’ ಎಂದು ಆಗ್ರಹಿಸಿದೆ. ಟ್ರಾಡೊ ಅವರಿಗೆ ಅವಮಾನವಾಗಲು ಭಾರತದ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಉಗ್ರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

48 ಗಂಟೆಗಳ ಬಳಿಕ ಸ್ವದೇಶಕ್ಕೆ ಜಸ್ಟಿನ್‌ ಟ್ರಾಡೊ
ಜಿ20 ಶೃಂಗ ಮುಕ್ತಾಯವಾಗಿ 2 ದಿನಗಳ ಬಳಿಕ ಕೊನೆಗೂ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಸ್ವದೇಶಕ್ಕೆ ವಾಪಸಾ ಗಿದ್ದಾರೆ. ವಿಮಾನದಲ್ಲಿನ ತಾಂತ್ರಿಕ ದೋಷದಿಂದಾಗಿ ಅವರು 48 ಗಂಟೆಗಳ ಕಾಲ ಭಾರತದಲ್ಲೇ ಉಳಿದುಕೊಳ್ಳ ಬೇಕಾಯಿತು. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಟ್ರಾಡೊ ಮತ್ತವರ ನಿಯೋಗ ಕೆನಡಾಕ್ಕೆ ತೆರಳಿತು. ರವಿವಾರವೇ ಕೇಂದ್ರ ಸರಕಾರವು ಟ್ರಾಡೊ ಅವರನ್ನು “ಏರ್‌ ಇಂಡಿಯಾ ಒನ್‌’ ವಿಮಾನದಲ್ಲಿ ಕಳುಹಿಸುವ ಆಫ‌ರ್‌ ನೀಡಿತ್ತು. ಆದರೆ ಕೆನಡಾ ನಿಯೋಗವು ಅದಕ್ಕೆ ಒಪ್ಪಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಖಲಿಸ್ಥಾನಿ ಪರ ನಿಲುವೇ ಶಾಪ?
ಜಿ20 ಶೃಂಗದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರ ರಾಜತಾಂತ್ರಿಕ ವೈಫ‌ಲ್ಯವು ಅವರಿಗೆ ಸ್ವದೇಶದಲ್ಲಿ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ. ಖಲಿಸ್ಥಾನಿಗಳ ಕುರಿತ ಮೃದು ಧೋರಣೆಯ ಕಾರಣಕ್ಕಾಗಿ ಜಸ್ಟಿನ್‌ ಜಿ20 ಶೃಂಗದ ವೇಳೆ ಮೂಲೆಗುಂಪಾಗಿದ್ದರು. ಪ್ರಧಾನಿ ಮೋದಿಯವರೂ ದ್ವಿಪಕ್ಷೀಯ ಮಾತುಕತೆ ವೇಳೆ ಕಟುವಾಗಿಯೇ ಅವರ ನಿಲುವನ್ನು ಟೀಕಿಸಿದ್ದರು. ಈ ಎಲ್ಲ ಸುದ್ದಿ ಕೆನಡಾಕ್ಕೆ ತಲುಪುತ್ತಿದ್ದಂತೆಯೇ, ಅಲ್ಲಿನ ಜನ ತಮ್ಮ ಪ್ರಧಾನಿ ವಿರುದ್ಧ ಭುಗಿಲೆದ್ದಿದ್ದಾರೆ ವಿಪಕ್ಷ ನಾಯಕ ಪಿಯೆಲ್‌ ಪಾಲಿರೆ ಅವರು ಟೊರಂಟೋ ಸನ್‌ ಪತ್ರಿಕೆಯ ಮುಖಪುಟವನ್ನು ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಿ “ಇಡೀ ಜಗತ್ತು ಪದೇ ಪದೆ ಕೆನಡಾ ಪ್ರಧಾನಿಯನ್ನು ಅವಮಾನಿಸುತ್ತಿದೆ. ಜಿ20ಯಲ್ಲೂ ಇದು ಮತ್ತೆ ಸಾಬೀತು ಆಯಿತು’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಕೆನಡಾ ಕಾರಣ ನೀಡದೇ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಮಾತುಕತೆ ಕೈಬಿಟ್ಟಿತ್ತು. ಇದು ಕೂಡ ಕೆನಡಾ ಜನರ ಅತೃಪ್ತಿಗೆ ಕಾರ ಣವಾಗಿತ್ತು. ಖಲಿಸ್ಥಾನಿಯರಿಗೆ ಬೆಂಬಲ ನೀಡುವುದರಿಂದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಟ್ರಾಡೊ ಖಲಿಸ್ಥಾನಿ ಶಕ್ತಿಗಳ ಪರ ನಿಂತಿದ್ದಾರೆ ಎನ್ನುವ ಆಕ್ರೋಶ ಜನರಿಗಿದೆೆ. ಒಟ್ಟಿನಲ್ಲಿ ಟ್ರಾಡೊ ಜನಪ್ರಿಯತೆ ಕುಸಿಯುತ್ತಿದ್ದರೆ ವಿಪಕ್ಷಕ್ಕೆ ವರದಾನವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next