ಅರಸೀಕೆರೆ: ತಾಲೂಕಿನಲ್ಲಿ ಬರ ಹಾಗೂ ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸಮರೋಪಾದಿ ಸರ್ವ ಸನ್ನದ್ಧರಾಗಿರಬೇಕೆಂದು ತಹಶೀಲ್ದಾರ್ ಸಂತೋಷ್ ಕುಮಾರ್ ಸೂಚನೆ ನೀಡಿದರು.
ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಸತತ ಮಳೆ ಅಭಾವದಿಂದ ಬರಗಾಲದ ಪರಿಸ್ಥಿತಿ ಉಂಟಾಗುತ್ತಿದ್ದು, ಸಮಸ್ಯೆಯನ್ನು ಎದುರಿಸಲು ಅಗತ್ಯ ಸ್ಥಳಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕೆಂದು ಆದೇಶಿಸಿದರು.
ಟ್ಯಾಂಕರ್ ಮೂಲಕ ನೀರು ಸರಬರಾಜು: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಉತ್ತರಿಸಿದ ತಾಪಂ ಇಒ ಕೃಷ್ಣಮೂರ್ತಿ ನೀರಿನ ಸಮಸ್ಯೆ ಎದುರಿಸುತ್ತಿರುವ 27ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು 19ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಮಾಹಿತಿ ಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.
ಸಂತ್ರಸ್ತರಿಗೆ ಪರಿಹಾರ ನೀಡಿ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ತಕ್ಷಣವೇ ಪರಿಶೀಲಿಸಿ ಪರಿಹಾರ ನೀಡಬೇಕು. ಅಲ್ಲದೇ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಸಹಾಯ ನೀಡಲಾಗುವುದು ಮಳೆ-ಗಾಳಿಯಿಂದ ಮರಗಳು ಉರುಳಿ ಬಿದ್ದರೆ ಆ ಸಂದರ್ಭದಲ್ಲಿ ಗಾಯಗೊಂಡರೆ ಪರಿಹಾರ ದೊರಕಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಈ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದು ಕಂಬಗಳು ತುಂಡಾಗಿ ಸಾರ್ವಜನೀಕರಿಗೆ ತೊಂದರೆ ಉಂಟಾಗಬಹುದು ಆದ್ದರಿಂದ ಅಗತ್ಯವಿರುವಷ್ಟು ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳನ್ನು ದಾಸ್ತಾನು ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ಪಶುಗಳಿಗೆ ಚಿಕಿತ್ಸೆ ನೀಡಿ: ಪಕೃತಿ ವಿಕೋಪದ ಸಂದರ್ಭದಲ್ಲಿ ದನ,ಕರುಗಳಿಗೆ ಬರಬಹುದಾದ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಿ ಬೇಕಾಗುವ ಔಷದಗಳನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕು. ತೋಟಗಾರಿಕಾ ಇಲಾಖೆ ಹಾಗೂ ಪಶು ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ಪಕೃತಿ ವಿಕೋಪದಿಂದ ಆಗಿರುವ ಅನಾಹುತಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನೀಡಬೇಕು ಹಾಗೂ ನಷ್ಟ ಅನುಭವಿಸದವರಿಗೆ ಪರಿಹಾರ ದೊರಕಿಸಬೇಕೆಂದರು.
ಪ್ಲಾಸ್ಟಿಕ್ ನಿಷೇಧಿಸಿ: ನಗರದಲ್ಲಿ ಪ್ಲ್ರಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆಯಾದರೂ ಅಲ್ಲಲ್ಲಿ ವ್ಯಾಪಾರಸ್ಥರು ಕದ್ದು-ಮುಚ್ಚಿ ಪ್ಲ್ರಾಸ್ಟಿಕ್ ವ್ಯಾಪಾರ ಮುಂದುವರಿಸಿರುವುದರಿಂದ ಎಲ್ಲೆಡೆ ಪ್ಲ್ರಾಸ್ಟಿಕ್‌ನ ಕಸ ತುಂಬಿ, ತುಳುಕುತ್ತಿದೆ ಎಂದು ತಹಶೀಲ್ದಾರ್ ಪೌರಾಯುಕ್ತ ಚಲಪತಿಯವರನ್ನು ಪ್ರಶ್ನಿಸಿದಾಗ ಉತ್ತರಿಸಿದ ಅವರು ಪ್ಲ್ರಾಸ್ಟಿಕ್ ವ್ಯಾಪಾರ ಮಾಡುತ್ತಿರುವವರಿಗೆ ಒಂದು ವಾರ ಗಡುವು ನೀಡಿ ಆನಂತರ ವ್ಯಾಪಾರ ಮುಂದುವರಿಸಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸೂಚಿಸಿದರು.
ನಗರ ಠಾಣೆ ಇನ್ಸ್‌ಪೆಕ್ಟರ್ ರಂಗಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರ ಸ್ವಾಮಿ, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಶ್ರೀಲಕ್ಷ್ಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.