Advertisement

ಕಸದಿಂದ ಸಾವಯವ ಗೊಬ್ಬರ ತಯಾರಿ

06:37 AM Feb 12, 2019 | |

ಬೆಂಗಳೂರು: ಗ್ರಾಮ ಸ್ವತ್ಛತೆಗೆ ಆದ್ಯತೆ ನೀಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಇದೀಗ ಗ್ರಾಮೀಣ ಭಾಗದ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸದಿಂದ ರಸ ತೆಗೆಯುವ ಕೆಲಸಕ್ಕೆ ಮುಂದಾಗಿದೆ.

Advertisement

ಸ್ವತ್ಛ ಭಾರತ ಯೋಜನೆಯಡಿ ಆಯಾ ಭಾಗದ ಸಾರ್ವಜನಿಕರನ್ನು ಜತೆಗೂಡಿಸಿಕೊಂಡು ಸರ್ಕಾರೇತರ ಸಂಸ್ಥೆಗಳೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿ ಅದರಿಂದ ಸಾವಯವ ಗೊಬ್ಬರ ತಯಾರಿಸಲು ತೀರ್ಮಾನಿಸಿದೆ.

ಇದಕ್ಕಾಗಿ ಸಾಹಸ್‌ ಸಂಸ್ಥೆ ಮತ್ತು ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಸರ್ಕಾರೇತರ ಸಂಸ್ಥೆಗಳೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾ.ಪಂ ಪ್ರಾಯೋಗಿಕವಾಗಿ ಮನೆಗಳಲ್ಲೇ ಗೊಬ್ಬರ ತಯಾರಿಸುವತ್ತ ಮೊದಲ ಹೆಜ್ಜೆ ಇರಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಂದಿಕೊಂಡಿರುವ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲದಲ್ಲಿ ಸುಮಾರು 2200 ಮನೆಗಳಿವೆ. ದಿನೇ ದಿನೆ ಪಂಚಾಯಿತಿ ವ್ಯಾಪ್ತಿ ಹಿಗ್ಗುತ್ತಿರುವ ಹಿನ್ನೆಲೆಯಲ್ಲಿ ಕಸ ನಿರ್ವಹಣೆಗೆ ಜಾಗದ ಸಮಸ್ಯೆ ಎದುರಾಗಿದೆ.

ವೈಜ್ಞಾನಿಕ ರೀತಿಯಲ್ಲಿ ಕಸ ನಿರ್ವಹಣೆ ಮಾಡುವುದು ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಜಿ.ಪಂ, ಚಿಕ್ಕಜಾಲದಲ್ಲಿ ಮನೆಯಲ್ಲೇ ಗೊಬ್ಬರ ತಯಾರಿ, ನಿರ್ವಹಣೆ (ಹೋಂ ಕಾಂಪೋಸ್ಟ್‌), ಮತ್ತು ಕ್ಲಸ್ಟರ್‌ ಕಾಂಪೋಸ್ಟ್‌ (3ಂ ಮನೆಗೆ ಒಂದು ತೊಟ್ಟಿ) ನಿರ್ವಹಣೆಗೆ ಆದ್ಯತೆ ನೀಡಿದೆ.

Advertisement

ಪ್ರಾರಂಭಿಕ ಹಂತದಲ್ಲಿ ಹೋಂ ಕಾಂಪೋಸ್ಟ್‌ಗಾಗಿ 60 ಮನೆಗಳನ್ನು ಆಯ್ಕೆ ಮಾಡಲಾಗಿದೆ. 30 ಮನೆಗಳ ನಡುವೆ ಒಂದರಂತೆ ಎರಡು ಕಡೆ ಕ್ಲಸ್ಟರ್‌ ಕಾಂಪೋಸ್ಟ್‌ ತೊಟ್ಟಿ ನಿರ್ಮಿಸಲಾಗಿದೆ. ಪ್ರಾಥಮಿಕ ಹಂತದಲ್ಲಿರುವ ಈ ಪ್ರಯೋಗಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆಂಧ್ರಪ್ರದೇಶಕ್ಕೆ ಭೇಟಿ: ಈ ಮಧ್ಯೆ, ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸದ ವೈಜ್ಞಾನಿಕ ನಿರ್ವಹಣೆ ಸಂಬಂಧ ಚಿಕ್ಕಜಾಲ ಗ್ರಾ.ಪಂ ಅಧ್ಯಕ್ಷ ಲಕ್ಷಿಪತಿ ನೇತೃತ್ವದಲ್ಲಿ 16 ಮಂದಿಯ ತಂಡ, ಆಂಧ್ರಪ್ರದೇಶದ ಕಣ್ಣೂರು ಮತ್ತು ಗುಂಟೂರಿಗೆ ಭೇಟಿ ನೀಡಿತ್ತು. ಗುಂಟೂರು ವ್ಯಾಪ್ತಿಯ ನಂದಿಗ್ರಾಮ ಸೇರಿ ನಾಲ್ಕು ಗ್ರಾ.ಪಂ.ಗಳಿಗೆ ತೆರಳಿ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಗೊಬ್ಬರವಾಗಿಸುವುದು, ಕ್ಲಸ್ಟರ್‌ ಕಾಂಪೋಸ್ಟ್‌ ಗೊಬ್ಬರ ನಿರ್ವಹಣೆ ಬಗ್ಗೆ ಈ ತಂಡ ಮಾಹಿತಿ ಪಡೆದಿತ್ತು. 

ಅಲ್ಲಿ ಸಂಪೂರ್ಣ ಮಾಹಿತಿ ಪಡೆದ ಬಳಿಕ ಇದೀಗ ಚಿಕ್ಕಜಾಲದಲ್ಲಿ ಪ್ರಾಥಮಿಕ ಪ್ರಯೋಗ ನಡೆಯುತ್ತಿದೆ. ಎರಡು ತಿಂಗಳಿಂದ ಆರಂಭವಾಗಿರುವ ಪ್ರಕ್ರಿಯೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪಿಡಿಒ ಉಮಾದೇವಿ “ಉದಯವಾಣಿ’ಗೆ ತಿಳಿಸಿದರು.

ಕಸ ನಿರ್ವಹಣೆಗೆಂದೇ ಸಾಹಸ್‌ ಸಂಸ್ಥೆ ಈಗಾಗಲೇ ಜನರಿಗೆ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ನೀಡಿದೆ. ಅಲ್ಲದೆ ಜನರಿಗೆ ತಿಳಿವಳಿಕೆ ನೀಡಲು ಮಂಜುನಾಥ್‌ ಮತ್ತು ಉಷಾ ಎಂಬುವರನ್ನು ಸಂಯೋಜಕರನ್ನಾಗಿ ನೇಕಮ ಮಾಡಿದೆ. ಪ್ರತಿ ದಿನ ಇವರು ಪ್ರತಿ ಮನೆಗೆ ತೆರಳಿ ಕಸ ನಿರ್ವಹಣೆ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುತ್ತಾರೆ. ಆರಂಭಿಕ ಹಂತದಲ್ಲಿ ಜನರು ಆಲಸ್ಯ ತೋರಿದ್ದರು. ಆದರೆ ಈಗ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಈ ಯೋಜನೆ ಕಾರ್ಯಗತವಾಗುವ ಮೊದಲು ಮನೆ ತುಂಬೆಲ್ಲಾ ಕಸ ಇರುತ್ತಿತ್ತು.ಆದರೆ ಈಗ ಕಸದಿಂದಲೇ ರಸ ಮಾಡುವ ವಿಧಾನ ತಿಳಿದುಕೊಂಡಿದ್ದೇವೆ.
-ನಿರ್ಮಲಾ, ಸ್ಥಳೀಯ ನಿವಾಸಿ
 
ಗ್ರಾಮೀಣ ಸ್ವತ್ಛತೆ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹಲವು ಯೋಜನೆ ರೂಪಿಸಿದ್ದು, ಆ ನಿಟ್ಟಿನಲ್ಲಿ ಹೋಂ ಕಾಂಪೋಸ್ಟ್‌ ಮತ್ತು ಕ್ಲಸ್ಟರ್‌ ಕಾಂಪೋಸ್ಟ್‌ ನಿರ್ವಹಣೆ ಹೊಸ ಪ್ರಯತ್ನವಾಗಿದೆ.
-ಅರ್ಚನಾ, ಬೆಂ.ನಗರ ಜಿ.ಪಂ. ಸಿಇಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next