Advertisement

ಹಣದ ಚಿಂತೆ ಬಿಟ್ಟು ಕುಂಭಮೇಳ ಸಿದ್ಧತೆ ನಡೆಸಿ

07:28 AM Feb 06, 2019 | Team Udayavani |

ತಿ.ನರಸೀಪುರ: ಕುಂಭಮೇಳಕ್ಕೆ ಹಣಕಾಸಿನ ಕೊರತೆ ಇಲ್ಲದಿರುವುದರಿಂದ ಅಧಿಕಾರಿಗಳು ಆ ಬಗ್ಗೆ ಯೋಚಿಸದೇ ತ್ವರಿತವಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಅಧಿಕಾರಿಗಳಿಗೆ ಸೂಚಿಸಿದರು.

Advertisement

ತ್ರಿವೇಣಿ ಸಂಗಮ ತಿರುಮಕೂಡಲಿನಲ್ಲಿ ಫೆ.17ರಿಂದ 19ರವರೆಗೆ ನಡೆಯಲಿರುವ 11ನೇ ಕುಂಭಮೇಳದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ನಂತರ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಜನಪ್ರತಿನಿಧಿಗಳು ಹಾಗು ಜಿಲ್ಲಾ ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಹಣಕ್ಕೆ ಕೊರತೆಯಿಲ್ಲ: ಮುಖ್ಯಮಂತ್ರಿ ಅಧ್ಯಕ್ಷತೆ ಯಲ್ಲಿ ಬೆಂಗಳೂರಿನಲ್ಲಿ ನಡೆದ ಕುಂಭಮೇಳ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮೇಳಕ್ಕೆ ಹಣದ ಕೊರತೆ ಇಲ್ಲ. ಅಧಿಕಾರಿಗಳು ತ್ವರಿತವಾಗಿ ಸಮಗ್ರ ವರದಿ ಸಲ್ಲಿಸಿದರೆ ಎಷ್ಟು ಬೇಕಾದರೂ ಹಣ ನೀಡಲು ಹಣಕಾಸು ಇಲಾಖೆ ಸಿದ್ಧವಿದೆ ಎಂದು ತಿಳಿಸಿರುವುದರಿಂದ ಅಧಿಕಾರಿಗಳು ಹಾಗು ಗುತ್ತಿಗೆದಾರರು ಯಾವುದೇ ಹಿಂದೇಟು ಹಾಕದೇ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಖುದ್ದು ಪರಿಶೀಲಿಸಿ: ಪವಿತ್ರ ಪುಣ್ಯಕ್ಷೇತ್ರ ತಿರುಮ ಕೂಡಲಿನಲ್ಲಿ ನಡೆಯುತ್ತಿರುವ ಕುಂಭಮೇಳದ ಕಾಮಗಾರಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳನ್ನು ನಿಯೋಜಿಸದೆ ತಾವೇ ಖುದ್ದಾಗಿ ಪರಿಶೀಲಿಸಬೇಕು. ತಿರುಮ ಕೂಡಲಿನ ಹಾಸುಪಾಸಿನಲ್ಲಿರುವ ಎಲ್ಲಾ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗದೆ ಡಾಂಬರು ಹಾಕಬೇಕು. ಕಾವೇರಿ ಕಪಿಲ ಸೇತುವೆ ಮೇಲೆ ಬೆಳೆದಿರುವ ಗಿಡಗಂಟಿ ಗಳನ್ನು ತೆರವುಗೊಳಿಸಿ, ಅಂದವಾಗಿ ಕಾಣುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.

ತಾತ್ಕಾಲಿಕ ಸೇತುವೆ ನಿರ್ಮಿಸಿ: ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಕುಂಭಮೇಳ ನಡೆಯುವ ಯಾಗಮಂಟಪದವರೆಗೆ ಕಪಿಲಾ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ ನಿರ್ಮಿಸ ಬೇಕು. ಮೇಳಕ್ಕೆ ಸಮಯಾವಕಾಶ ಕಡಿಮೆ ಇರುವುದರಿಂದ 15ರೊಳಗೆ ಕೃತಕ ಸೇತುವೆ ನಿರ್ಮಿಸಲು ಅಪರ ಜಿಲ್ಲಾಧಿಕಾರಿ ಅರ್ಚನಾಗೆ ಸೂಚಿಸಿದರು.

Advertisement

ಸೇತುವೆ ಅಗಲೀಕರಣ: ಕುಂಭಮೇಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಯಾಗ ಮಂಟಪ ಹಾಗೂ ಧಾರ್ಮಿಕ ಸಭೆ ನಡೆಯುವ ಸ್ಥಳಕ್ಕೆ ಈಗ ನಿರ್ಮಿಸಿರುವ ಮರಳು ಮೂಟೆ ಸೇತುವೆ ತುಂಬಾ ಕಿರಿದಾಗಿದ್ದು, ಕೂಡಲೇ ಅದರ ಅಗಲೀಕರಣವಾಗಬೇಕು. ಅಲ್ಲದೇ ಕಾವೇರಿ ನದಿಯ ಮಧ್ಯಭಾಗದಲ್ಲಿರುವ ರುದ್ರಪಾದಕ್ಕೂ ರಸ್ತೆ ಸಂಪರ್ಕ ಕಲ್ಪಿಸಿ ಭಕ್ತಾದಿಗಳಿಗೆ ದರ್ಶನ ಸಿಗುವಂತೆ ಮಾಡಬೇಕು ಎಂದು ತಿಳಿಸಿದರು.

ದಸರಾ ಮಾದರಿ ದೀಪಾಲಂಕಾರ: ವಿದ್ಯುತ್‌ ಇಲಾಖೆಯವರು ಕುಂಭಮೇಳದಲ್ಲಿ ಪ್ರಮುಖ ಅಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರ ವನ್ನು ದಸರಾ ಮಾದರಿ ಅಳವಡಿಸಿ ಸಾರ್ವಜನಿಕರ ಗಮನ ಸೆಳೆಯುವಂತೆ ಮಾಡಬೇಕು. ದೀಪಾಲಂ ಕಾರ ನೋಡಲೆಂದೇ ಜನ ಬರುವಂತಾಗಬೇಕು ಎಂದರು.

ಉಚಿತ ಬಸ್‌ ವ್ಯವಸ್ಥೆ: ಸಾರಿಗೆ ಇಲಾಖೆಯವರು ಕುಂಭಮೇಳಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ ಸಚಿವರು, ಪಾರ್ಕಿಂಗ್‌ ಸ್ಥಳದಿಂದ ಮೇಳ ನಡೆಯುವ ಜಾಗಕ್ಕೆ ಹಾಗೂ ಪಟ್ಟಣದ 5 ಕಿ.ಮೀ. ವ್ಯಾಪ್ತಿಯಲ್ಲಿ ಉಚಿತವಾಗಿ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ಮೇಳಕ್ಕೆ ಬಿಗಿ ಬಂದೋಬಸ್ತ್: ಎಎಸ್ಪಿ ಪಿ.ಸ್ನೇಹ ಮಾತನಾಡಿ, ಕುಂಭ ಮೇಳಕ್ಕೆ ಬಂದೋಬಸ್ತ್ಗಾಗಿ 1,100 ಪುರುಷ ಹಾಗೂ 300 ಮಹಿಳಾ ಪೊಲೀಸ್‌ ಪೇದೆ ನಿಯೋಜಿಸಲಾಗುತ್ತಿದ್ದು, ಮೂರು ಔಟ್ ಪೋಸ್ಟ್‌ ತೆರೆಯಲಾಗುತ್ತಿದೆ. ಅಗತ್ಯ ಬಿದ್ದಕಡೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು. ಇದಕ್ಕೆ ಮೊದಲು ಸಚಿವರು ಅಧಿಕಾರಿಗಳ ತಂಡದೊಂದಿಗೆ ಗುಂಜಾನರಸಿಂಹಸ್ವಾಮಿ, ಅಗಸ್ತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ನಡುವೆ, ಕುಂಭಮೇಳದ ಪ್ರಚಾರದ ಪೋಸ್ಟರ್‌ಗಳನ್ನು ಸಚಿವ ಜಿ.ಟಿ. ದೇವೇಗೌಡ ಬಿಡುಗಡೆಗೊಳಿಸಿದರು. ಈ ವೇಳೆ ಶಾಸಕರಾದ ಎಂ.ಅಶ್ವಿ‌ನ್‌ ಕುಮಾರ್‌, ಯತೀಂದ್ರ ಸಿದ್ದರಾಮಯ್ಯ, ಜಿಪಂ ಸದಸ್ಯರಾದ ಟಿ.ಎಚ್.ಮಂಜುನಾಥ್‌, ಜೈಪಾಲ್‌ ಭರಣಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಚೆಲುವರಾಜು, ಮುಖಂಡರಾದ ಪಿ. ಸ್ವಾಮಿನಾಥ್‌ಗೌಡ,

ಬಿ. ಮರಯ್ಯ, ಆಲಗೂಡು ನಾಗರಾಜು, ಹುಣಸೂರು ಬಸವಣ್ಣ, ಬೇವಿನಹಳ್ಳಿ ಸತೀಶ್‌, ಹೆುಮಿಗೆ ಹೊನ್ನನಾಯಕ, ಬೂದಹಳ್ಳಿ ಸಿದ್ದರಾಜು, ತಾಪಂ ಸದಸ್ಯ ಕೆ.ಎಸ್‌. ಗಣೇಶ್‌, ಎಂ.ರಮೇಶ್‌, ರಾಮಲಿಂಗು, ಪುರಸಭೆ ಸದಸ್ಯರಾದ ಬಾದಾಮಿ ಮಂಜು, ಕಿರಣ್‌, ಟಿ.ಎಂ. ನಂಜುಂಡಸ್ವಾಮಿ, ನಾಗರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next