Advertisement
ಕ್ರಮೇಣ ಆಧುನಿಕ ಜೀವನ ಪದ್ಧತಿ, ವೇಗದ ಜೀವನಕ್ರಮಗಳಿಂದ ಇವೆಲ್ಲ ಕಣ್ಮರೆಯಾದವು. ಆದರೂ, ಗ್ರಾಮೀಣ ಭಾಗದಲ್ಲಿ ಈಗಲೂ ಒಂದಿಷ್ಟು ಜನ ಅಂತಹ ಪದ್ಧತಿಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಚಾರ. ಅಂಗಡಿಯಲ್ಲಿ ದುಡ್ಡು ಕೊಟ್ಟು ಕಲಬೆರಕೆಯ ಎಣ್ಣೆಯನ್ನು ತಂದು, ತಿಂದು, ಹಣದ ಜೊತೆಗೆ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಹಳೆಯ ಜೀವನ ಪದ್ಧತಿಯೇ ಉತ್ತಮ ಎನಿಸುವುದು ಸುಳ್ಳಲ್ಲ.
Related Articles
Advertisement
ಈಗ ಮಳೆಗಾಲ ಕಾಡುಗಳಲ್ಲಿ ಹೆಚ್ಚಾಗಿ ಸಿಗುವ ಧೂಪದ ಕಾಯಿಯಿಂದ ಎಣ್ಣೆ ತಯಾರಿಸುವ ಸಾಂಪ್ರದಾಯಿಕ ವಿಧಾನವೊಂದನ್ನು ಪರಿಚಯಿಸುತ್ತೇನೆ. ಈ ಎಣ್ಣೆಯನ್ನು ಯಾವುದೇ ಖರ್ಚಿಲ್ಲದೆ ತಯಾರಿಸ ಬಹುದು. ಎಲ್ಲಾ ಎಣ್ಣೆಗಳನ್ನು ಇದೇ ವಿಧಾನದಲ್ಲಿಯೇ ಮಾಡುವರು ಎನ್ನಬಹುದು.
ಧೂಪದಕಾಯಿ ಎಣ್ಣೆಬೆಳೆದು ಉದುರಿದ ಕೆಂಪಗಿನ ಧೂಪದ ಕಾಯಿಯನ್ನು ಸಂಗ್ರಹಿಸಿ, ಕಲ್ಲು ಅಥವಾ ಮರದ ಕೊರಡು (ಚಿಕ್ಕ ತುಂಡು)ನಿಂದ ಜಜ್ಜಿ ಸಿಪ್ಪೆಯನ್ನು ತೆಗೆಯಬೇಕು. ಅದರ ಒಳಗಿರುವ ಕಾಯಿಯನ್ನು ಚಿಕ್ಕ ಮರದ ಚೂರಿಯಿಂದ ಕೆರೆದು ಶುಚಿ ಮಾಡಿ ಹೋಳುಗಳಾಗಿಸಿ, ಅದರ ಒಳಗಿರುವ ಸೊಂಡಿಲನ್ನು ಮತ್ತು ಅದರ ಸುತ್ತಲಿರುವ ಲೋಳೆಯ ಅಂಶವನ್ನು ಚೆನ್ನಾಗಿ ತೆಗೆದು ಶುಚಿಮಾಡಬೇಕು. ದಪ್ಪ ತಳದ ಅಲ್ಯೂಮಿನಿಯಂ ಪಾತ್ರೆಯಲ್ಲಿ ಈ ಎಲ್ಲಾ ಹೋಳುಗಳನ್ನು ತುಂಬಿಸಿ, ಈ ಹೋಳುಗಳು ಸಂಪೂರ್ಣ ಮುಳುಗುವಷ್ಟು ನೀರನ್ನು ಹಾಕಬೇಕು, 15 ರಿಂದ 20 ನಿಮಿಷಗಳಲ್ಲಿ ಈ ಹೋಳುಗಳು ಬೇಯುತ್ತವೆ. ಬೇಯಿಸಿದ ಕಾಯಿಯನ್ನು ತೆಗೆದು ಕಲ್ಲಿನ ಒರಳು ಅಥವಾ ಕಡೆಯುವ (ರುಬ್ಬುವ) ಕಲ್ಲಿನಲ್ಲಿ ಹಾಕಿ ಕುಟ್ಟಬೇಕು (ಕಡೆಯುವ ಕಲ್ಲನ್ನು ಶುಚಿಯಿಟ್ಟಿರಬೇಕು ಮಸಾಲೆ ಅಂಶ ಇರಬಾರದು) ಕುಟ್ಟಲು ಮರದ ಒನಕೆಯನ್ನೆ ಒಳಸಬೇಕು. ಕುಟ್ಟಿದ ನಂತರ ಅದನ್ನು ಪುನಃ ಮೊದಲು ಬೇಯಿಸಿದ ಅಲ್ಯುಮಿನಿಯಂ ಪಾತ್ರೆಯಲ್ಲಿ ಹಾಕಿ, ಸಾಕಷ್ಟು ನೀರನ್ನು ಬೆರೆಸಬೇಕು. ಈ ಮಿಶ್ರಣವನ್ನು ಎರಡು-ಮೂರು ಗಂಟೆಗಳ ಕಾಲ ಮರದ ಸೌಟನ್ನು ಉಪಯೋಗಿಸಿ ತಿರುವುತ್ತ ಕುದಿಸಬೇಕು. ಲೋಹದ ಸೌಟನ್ನು ಉಪಯೋಗಿಸಬಹುದು. ಆದರೆ ಅದು ಕೈ ಸುಡುತ್ತದೆ. ಮರದ ಸೌಟಾದರೆ ಕೈಗೆ ಶಾಖ ತಾಗದು. ಇದು ಹಾಲು ಉಕ್ಕಿದಂತೆ ಉಕ್ಕುತ್ತದೆ. ಹೀಗೆ ಉಕ್ಕಲು ಬಿಡಬಾರದು. ಬೆಂಕಿಯು ಒಂದೇ ಹದದಲ್ಲಿ ಇರುವಂತೆ ನೋಡಿಕೊಳ್ಳುವುದು ಮುಖ್ಯ. ಕುದಿಯುವಾಗಲೇ ಮೇಲ್ಭಾಗದಲ್ಲಿ ಎಣ್ಣೆಯ ಅಂಶ ತೇಲುತ್ತದೆ. ಇದನ್ನು ಜಾಗ್ರತೆಯಲ್ಲಿ ತೆಗೆದು ಇನ್ನೊಂದು ದಪ್ಪತಳದ ಪಾತ್ರೆಯಲ್ಲಿ ಶೇಖರಿಸಿ. ನಂತರ ನೀರಿನ ಪಸೆ ಆರುವ ತನಕ ಕುದಿಸಬೇಕು. ಈಗ ಧೂಪದಯೆಣ್ಣೆ ರೆಡಿ. ಈ ರೀತಿ ತಯಾರಿಸಿದ ಎಣ್ಣೆಯನ್ನು ಭದ್ರ ಮುಚ್ಚಳವಿರುವ ಅಗಲಬಾಯಿಯ ಬಾಟಲ್‌ಗಳಲ್ಲಿ ಶೇಖರಣೆ ಮಾಡಬೇಕು. ಯಾಕೆಂದರೆ, ಈ ಎಣ್ಣೆ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ. ಅದನ್ನು ತೆಗೆಯಲು ಚಮಚ, ಸೌಟು ಒಳಹಾಕಲು ಅನುಕೂಲವಿರುವಂಥ ಡಬ್ಬಗಳನ್ನೇ ಉಪಯೋಗಿಸಬೇಕು. ಉಪಯೋಗಿಸುವಾಗ ನೀರಿನ ಪಸೆ ಈ ಶೇಖರಿಸಿದ ಬಾಟಲಿಯಲ್ಲಿ ಸೇರದಂತೆ ಮುಂಜಾಗ್ರತೆ ಅನುಸರಿಸಬೇಕು. ಇದು ಮನೆಯಲ್ಲೇ ತಯಾರಿಸುವ ಆರೋಗ್ಯಕರ ಧೂಪದೆಣ್ಣೆ ತಯಾರಿಯ ವಿಧಾನ. ನಿತ್ಯದ ಅಡುಗೆಯ ಒಗ್ಗರಣೆಗೆ ಈ ಎಣ್ಣೆ ಹಾಕುವುದರಿಂದ ವಿಶೇಷ ರುಚಿ. ಹಾಗೆಯೇ ವಿವಿಧ ರೀತಿಯ ಖಾದ್ಯ ಹುರಿಯಲು ಈ ಎಣ್ಣೆ ಬಳಸಬಹುದು. ಹಪ್ಪಳ, ಸಂಡಿಗೆ ಕರಿಯಲೂ ಬಹುದು. ದೋಸೆ ಹುಯ್ಯಲು ಈ ಎಣ್ಣೆ ಉಪಯೋಗಿಸಬಹುದು. ಈ ಎಣ್ಣೆ ವಾತದ ನೋವಿರುವ ಜಾಗಕ್ಕೆ ಲೇಪಿಸಿ ಮಸಾಜ… ಮಾಡಿದರೆ ರಾಮಬಾಣವಾಗಿ ಕೆಲಸಮಾಡುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್ ತೊಂದರೆ ಇರುವವರು ಇದೇ ಎಣ್ಣೆಯನ್ನು ಆಹಾರ ತಯಾರಿಯಲ್ಲಿ ಉಪಯೋಗಿಸಿದರೆ, ಆ ಸಮಸ್ಯೆ ಯಿಂದ ಮುಕ್ತಿ ಪಡೆಯಬಹುದು. ಧೂಪದ ಕಾಯಿ ಬೇಯಿಸಿದ ನೀರನ್ನು ಚರ್ಮವ್ಯಾಧಿ ಇರುವವರು ಸ್ನಾನ ಮಾಡಿದರೆ, ಕೆಲವು ಚರ್ಮ ರೋಗ ಗುಣವಾಗುತ್ತದೆ. ಕೆಲವು ಉಲ್ಬಣಿಸಲೂಬಹುದು. ಅನುಭವಿಗಳ ಸಲಹೆ ಪಡೆದು ಉಪಯೋಗಿಸುವುದು ಸೂಕ್ತ. ಧೂಪದಕಾಯಿ ಚಚ್ಚಲು/ಕೆರೆಯಲು/ಬೇಯಿಸಿದ್ದನ್ನು ಕುಟ್ಟಲು ಯಾವುದಕ್ಕೂ ಲೋಹದ ವಸ್ತುಗಳನ್ನು ಉಪಯೋಗಿಸಬಾರದು. ಧೂಪದ ಕಾಯಿಯ ಸಿಪ್ಪೆಯು ಉರುವಲಾಗಿ ಉಪಯೋಗವಾಗುತ್ತದೆ. ಅಲ್ಲದೇ ಧೂಪದ ಮೇಣ, ಅಗ್ಗಿಷ್ಟಿಕೆಗೆ ಹಾಕಿದರೆ ಮನೆಯೆಲ್ಲ ಸುವಾಸನಾಭರಿತ ಹೊಗೆ ತುಂಬುತ್ತದೆ. ಸೊಳ್ಳೆ ಕಾಟ ಇರುವುದಿಲ್ಲ. ಚಿಕ್ಕಮಕ್ಕಳಿಗೆ ಧೂಪದ ಹೊಗೆ ಆರೋಗ್ಯಕರ. ಹೀಗೆ, ಮನೆಯಲ್ಲಿ ತಯಾರಿಸುವ ಎಣ್ಣೆಗಳಲ್ಲಿ ಕಲಬೆರಕೆ, ಜಿಡ್ಡು, ಕೊಲೆಸ್ಟ್ರಾಲ…ನ ಅಂಶ ಇರುವುದಿಲ್ಲ. ಆರೋಗ್ಯಕರ ಬದುಕಿಗೆ ಸಾಂಪ್ರದಾಯಿಕ ಎಣ್ಣೆಗಳ ಸಾಥ್ ಅತೀ ಅಗತ್ಯ.
ಸಾಂಪ್ರದಾಯಿಕ ಎಣ್ಣೆ ತಯಾರಿಯಲ್ಲಿ ಎಲ್ಲ ವಸ್ತುಗಳು ಉಪಯುಕ್ತವಾಗುತ್ತವೆ. ಆದರೆ, ಈಗ ಈ ದೀರ್ಘ ಪರಿಶ್ರಮದಿಂದ ಆರೋಗ್ಯವಂತರಾಗಿರಲು ಯಾರೂ ಮನ ಮಾಡುತ್ತಿಲ್ಲ ಎನ್ನುತ್ತಾರೆ, ಸಾಂಪ್ರದಾಯಿಕವಾಗಿ ಧೂಪದೆಣ್ಣೆ ತಯಾರಿಸುವ ಉತ್ಸಾಹಿ ಯುವಕ ಮೌನೇಶ್ ಹೈಕಾಡಿ ಇವರು. ಪೂರ್ಣಿಮಾ ಎನ್. ಭಟ್ಟ