Advertisement

ಅತೃಪ್ತ ಶಾಸಕರು ನಾಳೆ ಪದತ್ಯಾಗ?

12:30 AM Feb 05, 2019 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಒಂದು ದಿನ ಬಾಕಿ ಇರುವಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಮುಂಬೈನಲ್ಲಿರುವ ನಾಲ್ವರು ಅತೃಪ್ತ ಕಾಂಗ್ರೆಸ್‌ ಶಾಸಕರು ಜಂಟಿ ಅಧಿವೇಶನ ಪ್ರಾರಂಭಕ್ಕೆ ಮುನ್ನ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೂಂದೆಡೆ ನಾಲ್ವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದರೆ ಆರು ಮಂದಿ ಬಿಜೆಪಿ ಶಾಸಕರನ್ನು ಸೆಳೆಯುವ ಕಾರ್ಯತಂತ್ರ ಕಾಂಗ್ರೆಸ್‌-ಜೆಡಿಎಸ್‌ ರೂಪಿಸಿದೆ.

Advertisement

ಇದಕ್ಕೆ ಇಂಬು ಕೊಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಸಮ್ಮಿಶ್ರ ಸರ್ಕಾರ ಬೀಳಿಸಲು ಗಡುವು ಕೊಡುತ್ತಿರುವವರ ಮತ್ತು ಶಾಸಕರಿಗೆ ಆಮಿಷ ಒಡ್ಡುವವವರ ‘ಫ್ಯೂಸ್‌’ ತೆಗೆಯುವುದು ತಮಗೆ ಗೊತ್ತಿದೆ ಎಂದು ‘ಬಾಂಬ್‌’ ಸಿಡಿಸಿದ್ದು, ಬಿಜೆಪಿ ಶಾಸಕರೂ ತಮ್ಮ ಜತೆ ಸಂಪರ್ಕದಲ್ಲಿದ್ದು ಅಗತ್ಯ ಬಿದ್ದಲ್ಲಿ ರಕ್ಷಣೆಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರ್ರೆಸ್‌ ಸಹ ನಾಲ್ವರು ಶಾಸಕರು ಜಂಟಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿದ್ದಾರೆ ಎಂಬ ವಿಶ್ವಾಸದಲ್ಲಿಯೇ ಇದೆ.

ಈ ಮಧ್ಯೆ, ಕುಮಾರಸ್ವಾಮಿ ಹೇಳಿಕೆಯಿಂದ ಆತಂಕಗೊಂಡಂತೆ ಕಾಣುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು, ಕಾಂಗ್ರೆಸ್‌-ಜೆಡಿಎಸ್‌ ಆಮಿಷಗಳಿಗೆ ಯಾರೂ ಬಲಿಯಾಗಬೇಡಿ ಎಂದು ಮನವೊಲಿಸುವುದು ಸಭೆಯ ಉದ್ದೇಶ ಎಂದು ತಿಳಿದು ಬಂದಿದೆ.

ಮುಂಬೈನಲ್ಲಿರುವ ನಾಲ್ವರು ಕಾಂಗ್ರೆಸ್‌ ಶಾಸಕರು ಮಲ್ಲೇಶ್ವರಂ ಶಾಸಕ ಅಶ್ವಥ್‌ನಾರಾಯಣ ಅವರ ಜತೆ ಮಂಗಳವಾರ ರಾತ್ರಿ ಹೊರಟು ಬುಧವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಸ್ಪೀಕರ್‌ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಒಂದೊಮ್ಮೆ ಸ್ಪೀಕರ್‌ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದರೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿಎಂ ಹೇಳಿದ್ದೇನು?: ಸೋಮವಾರ ಪತ್ರಿಕೆಗಳ ಸಂಪಾದಕರ ಜತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಿಗೆ ಗಡುವು ಯಾರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ಯಾರು ಆಮಿಷ ಒಡ್ಡುತ್ತಿದ್ದಾರೆ ಎನ್ನುವುದೂ ಗೊತ್ತಿದೆ. ಅಂತಹವರ ಫ್ಯೂಸ್‌ ತೆಗೆಯುವುದು ತಮಗೆ ಗೊತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದ್ದು, ‘ಫ್ಯೂಸ್‌’ ತೆಗೆಯುತ್ತಾ ಇದ್ದೇನೆ. ಆದರೆ, ಅದನ್ನು ತಾವು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಎಂದು ಹೇಳಿದರು.

Advertisement

ಬಿಜೆಪಿಯ ಕೆಲ ಶಾಸಕರೂ ತಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿಯ ಸ್ನೇಹಿತರು ತಮಗೆ ಸಹಾಯಹಸ್ತ ನೀಡಬಹುದು ಎಂದು ಮಾರ್ಮಿಕವಾಗಿ ಹೇಳಿದರು. ಜತೆಗೆ, ಅತೃಪ್ತ ಕಾಂಗ್ರೆಸ್‌ ಶಾಸಕರ ಬಗ್ಗೆ ವಿವರಿಸಿದ ಅವರು, ‘ಆ ಶಾಸಕರು ತಮ್ಮ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದು ಬೆಳಿಗ್ಗೆ (ಸೋಮವಾರ)ಯೂ ಅವರ ಜತೆ ಮಾತನಾಡಿರುವುದಾಗಿ ಸ್ಪಷ್ಟ ಪಡಿಸಿದರು. ‘ಕಾಂಗ್ರೆಸ್‌ ಪಕ್ಷದವರಿಗೆ ಅವರ ಸಂಪರ್ಕ ಇದೆಯೋ ಗೊತ್ತಿಲ್ಲ. ನನ್ನ ಜತೆಯಂತೂ ಅವರು ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಮುಂಬರುವ ಬಜೆಟ್ ಅಧಿವೇಶನಕ್ಕೆ ಬಂದು ಕಲಾಪಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಮುಖ್ಯಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ ಎಂಬುದು ನನಗೆ ಗೊತ್ತಿದೆ. ಪ್ರಧಾನಮಂತ್ರಿಯಂತಹ ಹುದ್ದೆ ಬಿಟ್ಟು ಬಂದ ಕುಟುಂಬ ನಮ್ಮದು. ಅಧಿಕಾರದಲ್ಲಿ ಇರುವವರೆಗೆ ನಾಡಿನ ಜನರ ಅಭಿವೃದ್ಧಿಗೆ ಕೆಲಸ ಮಾಡುವುದು ನನ್ನ ಗುರಿ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವ ಕೂಗಿನ ಬಗ್ಗೆ ವಿಶ್ಲೇಷಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಕುರ್ಚಿ ತೆರವಾಗಿಲ್ಲ. ಮುಂದೆ ಅವಕಾಶ ಬಂದರೆ ಮುಖ್ಯಮಂತ್ರಿ ಆಗುವುದಾಗಿ ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ಅವರ ಬೆಂಬಲಿಗರು ನೀಡುತ್ತಿರುವ ಹೇಳಿಕೆಗಳಿಗೆ ತಾವು ವಿಚಲಿತರಾಗಿಲ್ಲ ಎಂದು ಹೇಳಿದರು. ಜಾರಕಿಹೊಳಿಯವರೂ ಮುಂದಿನ ಮುಖ್ಯಮಂತ್ರಿ ಎಂಬ ಅವರ ಬೆಂಬಲಿಗರ ಹೇಳಿಕೆಗಳನ್ನು ಉಲ್ಲೇಖೀಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಮುಖ್ಯಮಂತ್ರಿ ಆಗಲು ಅವ‌ಕಾಶವಿದೆ ಎಂದರು. ಆ ಮೂಲಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕೆನ್ನುವ ಕೂಗಿನ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.

ಕೈ ಕಾನೂನು ಹೋರಾಟ
ಬಿಜೆಪಿಯ ಆಪರೇಷನ್‌ ಕಮಲದ ಭೀತಿಗೆ ಕಾಂಗ್ರೆಸ್‌ ನಾಯಕರು ಹೆಚ್ಚು ತಲೆ ಕೆಡಿಸಿಕೊಳ್ಳದೆ, ತಮ್ಮ ಪಕ್ಷದ ಶಾಸಕರು ರಾಜೀನಾಮೆ ನೀಡಿದರೆ, ಅವರ ವಿರುದ್ಧ ಕಾನೂನು ಹೋರಾಟ ನಡೆಸಲು ಆಲೋಚನೆ ನಡೆಸಿದ್ದಾರೆ. ಒಂದು ವೇಳೆ ಅಧಿವೇಶನಕ್ಕೂ ಮುಂಚೆಯೇ ನಾಲ್ವರು ಶಾಸಕರು ರಾಜೀನಾಮೆ ನೀಡಿದರೆ, ಅವರು ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್‌ ರಮೇಶ್‌ ಕುಮಾರ್‌ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ, ಸ್ಪೀಕರ್‌ ರಾಜಿನಾಮೆ ಅಂಗೀಕರಿಸದಿದ್ದರೆ, ಅವರು ರಾಜ್ಯಪಾಲರ ಮೊರೆ ಹೋಗುವ ಸಾಧ್ಯತೆ ಇದೆ. ರಾಜ್ಯಪಾಲರು ಸ್ಪೀಕರ್‌ ತೀರ್ಮಾನವನ್ನು ಪ್ರಶ್ನಿಸುವ ಸಾಧ್ಯತೆ ಕಡಿಮೆ ಇರುವುದರಿಂದ ರಾಜೀನಾಮೆ ಕೊಟ್ಟ ಶಾಸಕರು ಕೋರ್ಟ್‌ ಮೆಟ್ಟಿಲು ಏರುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದು. ಈ ನಡುವೆ ಅಧಿವೇಶನದಲ್ಲಿ ಬಜೆಟ್ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್‌ ಜಾರಿಗೊಳಿಸಲು ನಿರ್ಧರಿಸಿದ್ದು, ವಿಪ್‌ ಉಲ್ಲಂಘನೆ ಮಾಡಿದರೆ, ಅದನ್ನೇ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ, ಆರು ವರ್ಷ ಶಾಸಕ ಸ್ಥಾನದಿಂದ ಅವರನ್ನು ಉಚ್ಚಾಟಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next