Advertisement

ತರಗೆಲೆ ಬಳಸಿ ಗೊಬ್ಬರ ತಯಾರಿ

12:29 AM Apr 02, 2019 | Lakshmi GovindaRaju |

ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಮರ-ಗಿಡಗಳಿಂದ ಉದುರಿದ ಒಣ ಎಲೆಗಳ ಕಸ ಒಟ್ಟುಗೂಡಿಸಿ ಗೊಬ್ಬರವನ್ನಾಗಿ ಪರಿವರ್ತಿಸುವತ್ತ ತೋಟಗಾರಿಕೆ ಇಲಾಖೆ ಹೆಜ್ಜೆಯಿರಿಸಿದೆ.

Advertisement

ಈಗ ವಂಸತ ಕಾಲವಾಗಿರುವುದರಿಂದ ಕಬ್ಬನ್‌ ಪಾರ್ಕ್‌ನಲ್ಲಿ ಅಧಿಕ ಪ್ರಮಾಣದ ಒಣಗಿದ ಎಲೆಗಳು ಉದುರುತ್ತಿವೆ. ಇವುಗಳನ್ನು ಒಟ್ಟುಗೂಡಿಸಿ ರಸಗೊಬ್ಬರ ಮಾಡುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮೊದಲು, ವಿವಿಧ ಮರಗಳಿಂದ ಉದುರಿ ಬಿದ್ದಿರುವ ಒಣ ಎಲೆಗಳನ್ನು ಒಂದು ಕಡೆ ಗುಡ್ಡೆ ಹಾಕಲಾಗುತ್ತದೆ. ನಂತರ, ಪ್ರತಿ ಹದಿನೈದು ದಿನಕ್ಕೆ ಒಮ್ಮೆ ಒಣ ಎಲೆಗಳ ಕಸವನ್ನು ವಾಹನಗಳ ಮೂಲಕ ಗೊಬ್ಬರ ತಯಾರಿಕೆ ಘಟಕಕ್ಕೆ ಕೊಂಡೊಯ್ದು, ಅಲ್ಲಿ ಗೊಬ್ಬರ ತಯಾರಿಸಲಾಗುತ್ತದೆ. ಹೀಗೆ, ತಯಾರಾದ ಗೊಬ್ಬರವನ್ನು ತೋಟಗಾರಿಕೆ ಇಲಾಖೆ, ಲಾಲ್‌ಬಾಗ್‌ನಲ್ಲಿರುವ ಹೂ ತೋಟ ಹಾಗೂ ಸಸಿಗಳನ್ನು ಬೆಳೆಸಲು ಬಳಸುತ್ತಿದೆ.

ಗೊಬ್ಬರ ಉತ್ಪಾದನೆ ಕೇಂದ್ರ: ತೋಟಗಾರಿಕೆ ಇಲಾಖೆ ತನಗೆ ಅಗತ್ಯವಿರುವ ಗೊಬ್ಬರವನ್ನು ತಾನೇ ಉತ್ಪಾದಿಸಿಕೊಳ್ಳುತ್ತಿದೆ. ಇದಕ್ಕಾಗಿ ಹತ್ತು ಗೊಬ್ಬರ ಉತ್ಪಾದನೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ಬಾಗ್‌ನಲ್ಲಿ ಗೊಬ್ಬರ ತಯಾರಿಕೆ ಘಟಕಗಳಿದ್ದು, ಇಲ್ಲಿ ಎರೆಹುಳು ಗೊಬ್ಬರನ್ನು ತಯಾರಿಸಲಾಗುತ್ತಿದೆ.

ಇದರೊಂದಿಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ಬಯೋಟೆಕ್ನಾಜಿ ಕೇಂದ್ರದಲ್ಲೂ ಗೊಬ್ಬರ ತಯಾರಿಸುವ ಕೆಲಸ ನಡೆಯುತ್ತಿದೆ. ಕಬ್ಬನ್‌ ಪಾರ್ಕ್‌ನಲ್ಲಿ ಮರಗಳಿಂದ ಉದುರಿದ ಒಣ ಎಲೆಗಳ ಕಸವನ್ನು ಹದಿನೈದು ದಿನಕ್ಕೆ ಎರಡು ಬಾರಿ ಇಲಾಖೆಯ 2 ಲಾರಿಗಳಲ್ಲಿ ಗೊಬ್ಬರ ತಯಾರಿಕೆ ಕೇಂದ್ರಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಒಂದು ಟನ್‌ ಗೊಬ್ಬರ ಉತ್ಪಾದನೆ: ಹೂ ತೋಟ ಮತ್ತು ಸಸಿಗಳನ್ನು ಬೆಳೆಸಲು ತೋಟಗಾರಿಕೆ ಇಲಾಖೆಗೆ ಅಧಿಕ ಪ್ರಮಾಣದಲ್ಲಿ ಸಾವಯವ ಗೊಬ್ಬರ ಬೇಕಾಗುತ್ತದೆ. ಆದರೆ, ಅಗತ್ಯ ಪ್ರಮಾಣದಷ್ಟು ಎರೆಹುಳು ಗೊಬ್ಬರ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಆದರೂ, ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ಬಾಗ್‌ನಲ್ಲಿ ಮರಗಳಿಂದ ಉದುರಿದ ಒಣ ಎಲೆಗಳಿಂದ ಪ್ರತಿ ವರ್ಷ ಒಂದು ಟನ್‌ ಗೊಬ್ಬರವನ್ನು ಇಲಾಖೆ ಉತ್ಪಾದಿಸುತ್ತದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಮಹಾಂತೇಶ್‌ ಮುರುಗೋಡ್‌ ಮಾಹಿತಿ ನೀಡುತ್ತಾರೆ.

ತೋಟಗಾರಿಕೆ ಇಲಾಖೆ ಕಳೆದ 2 ವರ್ಷದಿಂದ ಸುಮಾರು 2 ಟನ್‌ ಎರೆಹುಳು ಗೊಬ್ಬರ ಉತ್ಪಾದನೆ ಮಾಡಿದೆ. ಈ ಗೊಬ್ಬರ ತಯಾರಿಸಲು ಸುಮಾರು ಒಂದು ವರ್ಷ ಕಾಯಬೇಕು ಎನ್ನುತ್ತಾರೆ.

ತೋಟಗಾರಿಕೆ ಇಲಾಖೆಯ ಈ ಕಾರ್ಯಕ್ಕೆ ವಾಯು ವಿಹಾರಿಗಳಿಂದ ಮತ್ತು ಪರಿಸರ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗೆ ಮಾಡುವುದರಿಂದ ಕಬ್ಬನ್‌ ಪಾರ್ಕ್‌ ಅನ್ನು ಅಂದವಾಗಿ ಇರಿಸಿಕೊಂಡಂತಾಗುತ್ತದೆ. ಜತೆಗೆ ಗಿಡಗಳಿಗೂ ಗೊಬ್ಬರ ಸಿಗುತ್ತದೆ ಎಂಬುದು ಕಬ್ಬನ್‌ ಪಾರ್ಕ್‌ನ ವಾಯು ವಿಹಾರಿ ಗಿರಿಧರ್‌ ಅವರ ಅಭಿಪ್ರಾಯ.

ಕಬ್ಬನ್‌ ಪಾರ್ಕ್‌ನಲ್ಲಿ ಮರಗಳಿಂದ ಉದುರುವ ಒಣಗಿದ ಎಲೆಗಳಿಂದ, ತೋಟಗಾರಿಕೆ ಇಲಾಖೆ ಗೊಬ್ಬರ ತಯಾರಿಸಿ, ಹೂ ಗಿಡಗಳನ್ನು ಬೆಳೆಸಲು ಬಳಸುತ್ತಿರುವುದು ಆಶಾದಾಯಕ ಬೆಳವಣಿಗೆ.
-ವಿಜಯ್‌ ನಿಶಾಂತ್‌, ಮರತಜ್ಞ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next