Advertisement

ರಕ್ಷಣೆ, ಕೃಷಿ ಯಂತ್ರೋಪಕರಣ, ಖಾದ್ಯ ತೈಲೋತ್ಪನ್ನ; ಸ್ವಾವಲಂಬಿ ರಾಷ್ಟ್ರದ ಗುರಿ: ಸಚಿವೆ ಶೋಭಾ

01:55 AM Jun 01, 2022 | Team Udayavani |

ಉಡುಪಿ: ರಕ್ಷಣ ವ್ಯವಸ್ಥೆ ಯಂತ್ರೋಪಕರಣಗಳ ಸಂಶೋಧನೆ, ರಸಗೊಬ್ಬರ ಮತ್ತು ಖಾದ್ಯ ತೈಲಗಳ ಉತ್ಪನ್ನದಲ್ಲಿ ಭಾರತ ಸ್ವಾವಲಂಬಿಯಾಗಿಸುವ ಮಹತ್ತರ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಕೇಂದ್ರ ಕೃಷಿ (ರಾಜ್ಯ ಖಾತೆ) ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಮಂಗಳವಾರ ರಜತಾದ್ರಿಯಲ್ಲಿ ಜರಗಿದ ಗರೀಬ್‌ ಕಲ್ಯಾಣ್‌ ಯೋಜನೆ ಸಮಾವೇಶ ಮತ್ತು ಫ‌ಲಾನುಭವಿಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.

ಖಾದ್ಯ ತೈಲಕ್ಕಾಗಿ ಭಾರತವು 80 ಸಾವಿರ ಕೋ.ರೂ.ಗೂ ಅಧಿಕ ವೆಚ್ಚ ಮಾಡುತ್ತಿದೆ. ಖಾದ್ಯ ತೈಲ ಉತ್ಪಾದನೆ, ಕೃಷಿ ಬೆಳೆ ಅಭಿವೃದ್ಧಿ ಮತ್ತು ವಿಸ್ತರಣೆಗೆ ಶೇ. 90ರಷ್ಟು ಸಬ್ಸಿಡಿ ಕೇಂದ್ರ ಸರಕಾರ ನೀಡುತ್ತಿದೆ. ಕೃಷಿ ಕ್ಷೇತ್ರದ ಉನ್ನತಿಗೆ ದೇಶದಲ್ಲಿ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಬೇಕಿದೆ. ದೇಶದಲ್ಲಿ ಶ್ರೇಷ್ಠ ಎಂಜಿನಿಯರ್, ತಂತ್ರಜ್ಞರಿದ್ದಾರೆ. ಪೂರಕವಾದ ಪ್ರಾಕೃತಿಕ ಸಂಪತ್ತು ಇದ್ದು ಕೆಲವೇ ವರ್ಷದಲ್ಲಿ ನಾವು ಗುರಿ ಸಾಧಿಸಲಿದ್ದೇವೆ ಎಂದರು.

10 ಸಾವಿರ ರೈತ ಉತ್ಪಾದಕ ಕಂಪೆನಿ
ದೇಶದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾ ರಿಕೆ ಮತ್ತು ಮಾರಾಟ ಸಹಿತ ಮೊದ ಲಾದ ಉದ್ದೇಶಕ್ಕೆ 10 ಸಾವಿರ ರೈತ ಉತ್ಪಾದಕ ಕಂಪೆನಿಗಳನ್ನು ರಚಿಸಿ ಮೂಲ ಬಂಡವಾಳ 25 ಲ.ರೂ. ನೀಡುವ ಯೋಜನೆ ರೂಪಿಸಲಾಗಿದೆ.

ಇದಕ್ಕಾಗಿ ಕಚೇರಿ ನಿರ್ಮಾಣ, ಸಿಬಂದಿ ವೇತನ ಸರಕಾರವು 2 ವರ್ಷಗಳವರೆಗೆ ನೋಡಿಕೊಳ್ಳಲಿದೆ. ಜಿಲ್ಲೆಯಲ್ಲಿ ಕೃಷಿ ಮತ್ತು ಮೀನುಗಾರಿಕೆಗೆ ಅನುಕೂಲವಾಗುವ ಮಣ್ಣು ಪರೀಕ್ಷೆ ಕೇಂದ್ರ, ಬೆಳೆಗಳನ್ನು ಪರೀಕ್ಷಿಸುವ ಲ್ಯಾಬ್‌, ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆಗೆ ಜಿಲ್ಲೆಗೆ ಏನೇನು ಆಗಬೇಕು ಎಂಬ ಸ್ಪಷ್ಟ ಯೋಜನ ವರದಿಯನ್ನು ತಯಾರಿಸಿದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಗರಿಷ್ಠ 5 ಕೋ. ರೂ. ವರೆಗೆ ಕೇಂದ್ರ ಸರಕಾರ ಅನುದಾನ ಒದಗಿಸಲಿದೆ ಎಂದರು.

Advertisement

ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ ಸ್ವಾಗತಿಸಿದರು. ಶಾಸಕ ಕೆ. ರಘುಪತಿ ಭಟ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಸಿಇಒ ಪ್ರಸನ್ನ ಎಚ್‌. ಉಪಸ್ಥಿತರಿದ್ದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಷನ್‌ ಕುಮಾರ್‌ ಶೆಟ್ಟಿ ನಿರೂಪಿಸಿ, ವಂದಿಸಿದರು. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜರಗಿದ ಪ್ರಧಾನಮಂತ್ರಿ ಅವರ ಸಂವಾದವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲಾಯಿತು.

ಫ‌ಲಾನುಭವಿಗಳೊಂದಿಗೆ ಸಂವಾದ
ವಿವಿಧ ಯೋಜನೆ ಫ‌ಲಾನುಭವಿಗಳಾದ ಪೆರಂಪಳ್ಳಿಯ ರೇಷ್ಮಾ ಡಿ’ಸೋಜಾ, ರಮೇಶ್‌ ಶೆಟ್ಟಿ ರೆಂಜಾಳ, ಶಾಹಿನಾ ಕಾರ್ಕಳ, ಅಮೃತಾ ಶಂಕರನಾರಾಯಣ, ಕಲಾವತಿ ಎಣ್ಣೆಹೊಳೆ, ಶೋಭಾ ಮಣಿಪಾಲ ಸಹಿತ 13 ಮಂದಿ ಫ‌ಲಾನುಭವಿಗಳೊಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂವಾದ ನಡೆಸಿದರು.

ಅಶ್ವಿ‌ನಿ ಶಿರ್ವ ಅವರು ಮಗನ ಚಿಕಿತ್ಸೆಗೆ ನೆರವಾದ ಆಯುಷ್ಮಾನ್‌ ಭಾರತ್‌ ಯೋಜನೆ ಬಡವರಿಗೆ ಎಷ್ಟು ಅನುಕೂಲವಾಗಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು. ಹೆಚ್ಚುವರಿ ಚಿಕಿತ್ಸೆ ಬಗ್ಗೆ ಹೇಳಿಕೊಂಡಾಗ ಪಿಎಂ ಕೇರ್ ಅಡಿಯಲ್ಲಿ ಚಿಕಿತ್ಸೆ ವೆಚ್ಚಕ್ಕೆ ಅವಕಾಶವಿದೆ. ಜಿಲ್ಲಾಡಳಿತ ನಿಮಗೆ ಸಹಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ಕಿಸಾನ್‌ ಸಮ್ಮಾನ್‌ ಫ‌ಲಾನುಭವಿ ಬಾಲಕೃಷ್ಣ ಮಾತನಾಡಿ, ಸಕಾಲದಲ್ಲಿ ಬಿತ್ತನೆ ಬೀಜ ಪೂರೈಸುವಂತೆ ಮತ್ತು ಕಟಾವು, ನಾಟಿ ವೇಳೆ ಕೃಷಿ ಯಂತ್ರೋಪಕರಣಗಳ ಸಂಖ್ಯೆ ಹೆಚ್ಚಿಸುವಂತೆ ಮನವಿ ಮಾಡಿಕೊಂಡರು.
ಈ ವರ್ಷ ಕೃಷಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಕೃಷಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next