Advertisement

ಕಂಚಿನಡ್ಕದಲ್ಲಿ ಟೋಲ್‌ಗೆ ಸಿದ್ಧತೆ: ವಾಹನ ಸವಾರರ ಕಿಸೆಗೆ ಕತ್ತರಿ “ಸಿದ್ಧ”!

07:42 AM Aug 03, 2023 | Team Udayavani |

ಪಡುಬಿದ್ರಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ಈಗಾಗಲೇ ಪಡುಬಿದ್ರಿ ಕಾರ್ಕಳದ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕ ಪ್ರದೇಶದಲ್ಲಿ ಟೋಲ್‌ ನಿರ್ಮಾಣಕ್ಕಾಗಿ ಮೂರನೇ ಬಾರಿಗೆ ಟೆಂಡರನ್ನು ಆಹ್ವಾನಿಸಿದೆ.

Advertisement

ಈ ಹಿಂದಿನ ಟೆಂಡರ್‌ಗಳಿಗೆ ನಿರೀಕ್ಷಿತ ಪ್ರತಿಕ್ರಿಯೆ ಇರಲಿಲ್ಲ. ಈ ಟೋಲ್‌ ಕುರಿತು ಈ ಹಿಂದೆ ನಡೆದಿದ್ದ ಹೋರಾಟಗಳ ಬಳಿಕವೂ ರಾಜ್ಯ ಸರಕಾರವು ಖಜಾನೆ ತುಂಬಿಸಿಕೊಳ್ಳಲು ಈ ದಾರಿಯನ್ನು ಹಿಡಿದಿದೆ.

ಕಂಚಿನಡ್ಕ ಪ್ರದೇಶದಲ್ಲಿನ ಈ ಟೋಲ್‌ ಮುಂದೆ ಬೆಳ್ಮಣ್‌ನಲ್ಲಿ ಸ್ಥಾಪಿತವಾಗುವ ಸುದ್ದಿ ಹರಡಿದಾಗ ಅಲ್ಲಿಯೂ ಪಕ್ಷ ರಹಿತ ನೆಲೆಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಆದರೆ ಬೆಳ್ಮಣ್‌ನಲ್ಲಿ ಟೋಲ್‌ ಗೇಟ್‌ ಇದ್ದಲ್ಲಿ ಮುದರಂಗಡಿ ರಸ್ತೆಯ ಮೂಲಕ ಒಂದಷ್ಟು ಸೋರಿಕೆಯಾಗಬಹುದೆನ್ನುವ ನಿರೀಕ್ಷೆಯಲ್ಲಿ ಅದನ್ನು ಕೈಬಿಟ್ಟು ಕಂಚಿನಡ್ಕವನ್ನೇ ಸೂಕ್ತ ಎಂದು ಆಯ್ದುಕೊಳ್ಳಲಾಗಿದೆ. ಈಗ ಇಲ್ಲಿ ಕಂಚಿನಡ್ಕ ಟೋಲ್‌ ನಿರ್ಮಾಣಗೊಂಡಲ್ಲಿ ಹೆಜಮಾಡಿ ಟೋಲ್‌ ಜತೆಗೇ ವಾಹನ ಸವಾರಿಗೆ ಇದು ಇನ್ನಷ್ಟು ತುಟ್ಟಿ ಎನಿಸಲಿದೆ.
ಕೆಆರ್‌ಡಿಸಿಎಲ್‌ ಟೆಂಡರ್‌ ಆಹ್ವಾನಿಸಿರುವ ಪ್ರಕಟನೆಯನ್ನು ಜು. 21ರ ಹೊರಡಿಸಿದೆ. ಅದರನ್ವಯ ಗುಬ್ಬಿ ಬಳಿಯ ಕೆ.ಎಸ್‌. ಪಾಳ್ಯ ಗ್ರಾಮದಲ್ಲಿ ರಾಜ್ಯ ಹೆದ್ದಾರಿ 84ರಲ್ಲಿ 49.03 ಕಿ.ಮೀ. ವ್ಯಾಪ್ತಿಗೆ ಮತ್ತು ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿ ರಾಜ್ಯ ಹೆದ್ದಾರಿ 1ರಲ್ಲಿ 27.38 ಕಿ.ಮೀ. ವ್ಯಾಪ್ತಿಗೆ ನಿರ್ಮಾಣವಾಗಲಿದೆ. ಟೆಂಡರ್‌ ಸಲ್ಲಿಕೆಗೆ ಆ. 5 ಕಡೆಯ ದಿನ; ಆ. 7ರಂದು ಟೆಂಡರ್‌ ಪರಿ ಶೀಲಿಸಲಾಗುವುದೆಂದೂ ತಿಳಿಸಲಾಗಿದೆ.

ಇಲ್ಲಿರುವ ಸ್ವಾರಸ್ಯವೆಂದರೆ 49.03 ಕಿ.ಮೀ. ದೂರಕ್ಕಾಗಿ ಘಟ್ಟದ ಮೇಲಿನ ರಾಜ್ಯ ಹೆದ್ದಾರಿಯಲ್ಲಿ ವಾರ್ಷಿಕ 102.08 ಲಕ್ಷ ರೂ. ಸಂಗ್ರಹಿಸುವ ಗುರಿ ಇದ್ದರೆ ಕರಾವಳಿಯ ರಾಜ್ಯ ಹೆದ್ದಾರಿಯಲ್ಲಿ ಈ ಗುರಿಯು ಕೇವಲ 27.38 ಕಿ.ಮೀ.ಗೆ 278.32 ಲಕ್ಷ ರೂ. ಎಂದು ಅಂದಾಜಿಸಲಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next