Advertisement

ಹೆಂಗಳೆಯರ ಸಂಭ್ರಮದ ತಯಾರಿ

11:38 AM Aug 23, 2018 | Team Udayavani |

ಬೆಂಗಳೂರು: ಶ್ರಾವಣದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮೀ ಹಬ್ಬ ಮಹಿಳೆಯರಲ್ಲಿ ವಿಶೇಷ ಸಂಭ್ರಮದ ಕಳೆ ಮೂಡಿಸಿದ್ದು, ಮನೆಮನೆಗಳಿಗೆ ಮಹಾಲಕ್ಷ್ಮೀಯನ್ನು ಬರಮಾಡಿಕೊಳ್ಳಲು ನಗರದಲ್ಲಿ ಹೆಂಗಳೆಯರು ಭರದ ಸಿದ್ಧತೆ ನಡೆಸಿದ್ದಾರೆ.

Advertisement

ಎಂದಿನಂತೆ ಲಕ್ಷ್ಮೀಯ ಅಲಂಕಾರಕ್ಕೆ ವಿಶೇಷ ಒತ್ತು ನೀಡಿರುವ ಮಹಿಳೆಯರು, ವರಮಹಾಲಕ್ಷ್ಮೀಯ ಕಳೆ ಹೆಚ್ಚಿಸಲೆಂದೇ ನಗರದ ಮಾರುಕಟ್ಟೆಗಳಲ್ಲಿ ವಿವಿಧ ಅಲಂಕಾರಿಕ ಸಾಮಾಗ್ರಿಗಳು ಲಭ್ಯವಿವೆ. ವರಮಹಾಲಕ್ಷ್ಮೀ ಹಬ್ಬದಲ್ಲಿ ಲಕ್ಷ್ಮೀಯ ಮೂರ್ತಿಯನ್ನು ಪೂಜಿಸುವುದಕ್ಕಿಂತ ಹೆಚ್ಚಾಗಿ ಅದರ ಮುಖವಾಡ ಇಟ್ಟು ಆರಾಧಿಸುವವರೇ ಹೆಚ್ಚು. ಹೀಗಾಗಿ ಮಾರುಕಟ್ಟೆಗಳಲ್ಲಿ ಲಕ್ಷ್ಮೀಯ ಬೆಳ್ಳಿ ಮುಖವಾಡ, ತೆಂಗಿನಕಾಯಿ, ಅರಿಶಿಣ, ಮಣ್ಣಿನ ಮುಖವಾಡಗಳು, ಎಲೆಯಲ್ಲಿ ಮಾಡಿದ ಮುಖವಾಡಗಳಿಗೆ ಬೇಡಿಕೆ ಹೆಚ್ಚಿದೆ.

ತೆಂಗಿನಕಾಯಿಗೆ ಮುಖವಾಡ ಕಟ್ಟಿ ತ್ರಾಮದ ಬಿಂದಿಗೆಯಲ್ಲಿ ಇರಿಸಿ, ಸೀರೆ ಉಡಿಸುವ ಮೂಲಕ ವರಮಹಾಲಕ್ಷ್ಮಿಯನ್ನು ಸಿದ್ಧಪಡಿಸಲಾಗುತ್ತದೆ. ಕೆಲ ಮನೆಗಳಲ್ಲಿ ಅಲಂಕಾರಕ್ಕಾಗಿ ಬೆಳ್ಳಿ ಕೈಗಳನ್ನು ಬಳಸುತ್ತಾರೆ. ಮಹಿಳೆಯರು ಉಡುವ ಸೀರೆಯನ್ನು ಕಳಸಕ್ಕೆ ಹಾಗೂ ಬಿಂದಿಗೆಗೆ ಉಡಿಸಲು ಆಗುವುದಿಲ್ಲ. ಹೀಗಾಗಿ ಲಕ್ಷ್ಮೀ ಕಳಸಕ್ಕೆ ಉಡಿಸಲೆಂದೇ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಸೀರೆಗಳು ಬಂದಿವೆ. ಹಸಿರೆಲೆ ಸೀರೆ, ಧೈರ್ಯ ಲಕ್ಷ್ಮೀ ಸೀರೆ, ಮಹಾಲಕ್ಷ್ಮೀ ಸೀರೆಗಳು 500ರಿಂದ 5 ಸಾವಿರ ರೂ.ವರೆಗೆ ಸಿಗುತ್ತವೆ. 1000 ರೂ.ವರೆಗಿನ ಬೆಲೆ ಸೀರೆಗಳು ಹೆಚ್ಚಾಗಿ ಮಾರಾಟವಾಗುತ್ತವೆ ಎನ್ನುತ್ತಾರೆ ಸೀರೆ ವ್ಯಾಪಾರಿ ರಾಜು.
 
ಲಕ್ಷ್ಮೀ ಮೂರ್ತಿ ಸೀರೆಯಷ್ಟೇ ಅಲ್ಲದೆ ಅಕ್ಕಪಕ್ಕದಲ್ಲಿ ಇರಿಸುವ ಸುಳಿಗರಿ, ತಾವರೆ ಹೂವು, ಒಡವೆಗಳು, ಅಲಂಕಾರಿಕ ಬಳೆಗಳ ಬೆಲೆಯೂ ಹೆಚ್ಚಾಗಿದೆ. ಲಕ್ಷ್ಮೀ ಮಾದರಿಗೆ ಹೆಚ್ಚಿನ ಮಂದಿ ಗಾಜಿನ ಬಳೆ ತೊಡಿಸುತ್ತಾರೆ. ಆದರೆ ಅಲಂಕಾರಿಕ ಬಳೆಗಳನ್ನು ತೊಡಿಸುವವರು ಹೆಚ್ಚಾಗಿದ್ದಾರೆ. ಅದಕ್ಕಾಗಿಯೇ ಗಾಜಿನ ಬಳೆಗಳ ಮೇಲೆ ಚಿನ್ನದ ಬಣ್ಣದ ಚುಮುಕಿ, ಬಣ್ಣದ ಮಣಿಗಳು, ಚಿತ್ತಾಕರ್ಷವಾದ ಪುಟ್ಟ ಪುಟ್ಟ ವಿನ್ಯಾಸಗಳನ್ನು ಮಾಡಲಾಗುತ್ತದೆ. ಈ ರೀತಿ ಆಕರ್ಷಕವಾದ ಗಾಜಿನ ಬಳೆಗಳ ಬೆಲೆ 20 ರೂ.ಗಳಿಂದ 100 ರೂ. ಇದೆ. ಲಕ್ಷ್ಮೀಯ ಅಕ್ಕಪಕ್ಕದಲ್ಲಿಡುವ ಸುಳಿಗರಿಗಳ ಬೆಲೆ ಜೋಡಿಗೆ 50 ರೂ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next