Advertisement

‘ಪುನೀತ ಪರ್ವ’ಕ್ಕೆ ಭರದ ತಯಾರಿ: ಅಭಿಮಾನಿಗಳ ಜತೆ “ಗಂಧದ ಗುಡಿ’ಪ್ರೀ-ರಿಲೀಸ್‌ ಇವೆಂಟ್‌

12:45 PM Oct 20, 2022 | Team Udayavani |

ಬೆಂಗಳೂರು: ಪುನೀತ್‌ ರಾಜಕುಮಾರ್‌ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿರುವ “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾದ ಇದೇ ಅ. 28ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾದಂತೆಯೇ ಭರ್ಜರಿಯಾಗಿ ಪ್ರಚಾರ ಪಡೆದುಕೊಳ್ಳುತ್ತಿರುವ “ಗಂಧದ ಗುಡಿ’ಯನ್ನು ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯವಾಗಿಸಲು ರಾಜ್‌ ಕುಟುಂಬ ಮತ್ತು ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ಟೊಂಕ ಕಟ್ಟಿನಿಂತಿದ್ದಾರೆ.

Advertisement

ಅಪ್ಪು ಕೊನೆ ತೆರೆ ಚಿತ್ರಕ್ಕೆ ಅದ್ಧೂರಿ ತಯಾರಿ: ಇನ್ನು ಪುನೀತ್‌ ರಾಜಕುಮಾರ್‌ ಅವರ ಕನಸಿನ “ಗಂಧದ ಗುಡಿ’ಯನ್ನು ತೆರೆಗೆ ತರುವ ಮುನ್ನ ಅದ್ಧೂರಿಯಾಗಿ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ಶ್ರೀಕೃಷ್ಣ ವಿಹಾರದಲ್ಲಿ ನಡೆಯಲಿರುವ “ಗಂಧದ ಗುಡಿ’ ಪ್ರೀ-ರಿಲೀಸ್‌ ಇವೆಂಟ್‌ಗಾಗಿ, ಕಳೆದ 3 ದಿನಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ವೇಳೆ ರಾಘವೇಂದ್ರ ರಾಜಕುಮಾರ್‌, ಒಂದಷ್ಟು ಮಾಹಿತಿ ಹಂಚಿಕೊಂಡರು.

“ಅಪ್ಪು ಇದ್ದರೆ ಎಷ್ಟು ಅದ್ಧೂರಿಯಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದರೋ, ಅಷ್ಟೇ ಅದ್ದೂರಿಯಾಗಿ ನಾವು ಕೂಡ ಈ ಕಾರ್ಯಕ್ರಮವನ್ನು ಪ್ಲ್ರಾನ್‌ ಮಾಡಿದ್ದೇವೆ. ಅಶ್ವಿ‌ನಿ ನೇತೃತ್ವದಲ್ಲಿ, ಅಭಿಮಾನಿಗಳ ಜೊತೆಗೂಡಿ ಈ ಕಾರ್ಯಕ್ರಮ ನಡೆಯಲಿದೆ. ಅಶ್ವಿ‌ನಿ ಅವರೇ ಇದರ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಪುನೀತ್‌ “ಗಂಧದ ಗುಡಿ’ಯನ್ನು ಬಹಳ ಪ್ರೀತಿಯಿಂದ ಮಾಡಿದ್ದಾರೆ. ದೇವರು ಈ ಸಿನಿಮಾ ಮುಗಿಸಿ ಹೋಗಲು ಅಪ್ಪುಗೆ ಅವಕಾಶ ಕೊಟ್ಟಿದ್ದಾನೆ. ಇನ್ನು ಈ ಇವೆಂಟ್‌ನಲ್ಲಿ ಹಾಡು, ಡಾನ್ಸ್‌, ಪುನೀತ್‌ ಸ್ಮರಣೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಅಭಿಮಾನಿಗಳು ಎಷ್ಟೇ ಬಂದರೂ, ಎಲ್ಲರಿಗೂ ಕಾರ್ಯಕ್ರಮ ತೋರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್‌.

ದೂರದಿಂದ ಬರುವವರಿಗೆ ವ್ಯವಸ್ಥೆ: “ದೂರದಿಂದ ಬರುವ ಅಭಿಮಾನಿಗಳಿಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. 2 ದಿನಗಳ ಹಿಂದಿನಿಂದಲೇ ಅಭಿಮಾನಿಗಳು ಬರೋದಕ್ಕೆ ಶುರು ಮಾಡಿದ್ದಾರೆ. ಈ ಕಾರ್ಯಕ್ರಮ ನೋಡಿ ಇಡೀ ದೇಶ ಪ್ರಪಂಚ ಮಾತಾಡಬೇಕು ಆ ರೀತಿ ಮಾಡೋಣ. ಅಪ್ಪಾಜಿ ಬಗ್ಗೆ ಒಂದು ಪುಸ್ತಕ ಬರೆದ ಅಪ್ಪು. ಈಗ ಈ ಸಿನಿಮಾ ಮೂಲಕ ಜನರಿಗೆ ಅಪ್ಪು ಏನೋ ಹೇಳ್ಳೋಕೆ ಹೊರಟಿದ್ದಾರೆ. ಎಷ್ಟು ಜನ ಬರ್ತಾರೆ ಅಂತ ಲೆಕ್ಕ ಹಾಕೋಕೆ ಆಗಲ್ಲ. ಎಷ್ಟೇ ಜನ ಬಂದ್ರು ಅವರಿಗೆ ಕಾರ್ಯಕ್ರಮ ತೋರಿಸೋ ಕೆಲಸ ನಮ್ಮದು ಅದಕ್ಕೆ ನಾವು ರೆಡಿಯಿದ್ದೇವೆ. ನಾವು ಏನೋ ಮಾಡುತ್ತೇವೆ ಅಂತ ಹೇಳಿಕೊಳ್ಳೊ ಕುಟುಂಬ ಅಲ್ಲ. ನೀವು ನೋಡಿ ಹೇಳಬೇಕು’ ಎಂದರು ರಾಘವೇಂದ್ರ ರಾಜಕುಮಾರ್‌.

ಇದನ್ನೂ ಓದಿ:‘ಕಾಂತಾರ’ ಪ್ರಭಾವ: ದೈವ ನರ್ತಕರಿಗೆ ಮಾಸಾಶನ ನೀಡಲು ಮುಂದಾದ ಸರ್ಕಾರ

Advertisement

“ಗಂಧದ ಗುಡಿ’ ಪ್ರೀ-ರಿಲೀಸ್‌ ಇವೆಂಟ್‌ ಅನ್ನು ಒಂದು ಸೆಲೆಬ್ರೇಷನ್‌ ಥರ ಮಾಡಬೇಕು ಎಂಬುದು ನಮ್ಮ ಉದ್ದೇಶ. ಈ ಕಾರ್ಯಕ್ರಮದಲ್ಲಿ ಎಲ್ಲಾ ಚಿತ್ರರಂಗದ ಗಣ್ಯರು ಇರುತ್ತಾರೆ. ಈ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತೆ. ಕಣ್ಣಿಗೆ ಹಬ್ಬದ ಹಾಗೆ ಇರುತ್ತೆ. ಇದನ್ನ ನಿಮಗಾಗೆ ಮಾಡುತ್ತಿದ್ದೇವೆ, ನಿಮಗೆ ತಲುಪಿಸೋದು ನಮ್ಮ ಧರ್ಮ. ಅಪ್ಪು ಯಾರೊಬ್ಬರ ಸ್ವತ್ತಲ್ಲ. ಇಡೀ ಕರ್ನಾಟಕದ ಸ್ವತ್ತು. ಇದನ್ನ ಎಲ್ಲರಿಗೂ ತಲುಪಿಸಬೇಕು’ ಎಂದರು ರಾಘವೇಂದ್ರ ರಾಜಕುಮಾರ್‌.

ದಕ್ಷಿಣ ಸಿನಿಮಾ ರಂಗದ ದಿಗ್ಗಜ ನಟರು ಭಾಗಿ:  “ಗಂಧದ ಗುಡಿ’ಯ ನಿರ್ದೇಶಕ ಅಮೋಘ ವರ್ಷ ಈ ವೇಳೆ ಹಾಜರಿದ್ದು, ಕಾರ್ಯಕ್ರಮದ ಕುರಿತು ಒಂದಷ್ಟು ಮಾತನಾಡಿದರು. ಇನ್ನು “ಪುನೀತ್‌ ಪರ್ವ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ “ಗಂಧದ ಗುಡಿ’ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ದಕ್ಷಿಣ ಸಿನಿಮಾ ರಂಗದ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮಿಳು ಸಿನಿಮಾ ರಂಗದ ಕಮಲ್‌ ಹಾಸನ್‌, ಪ್ರಭುದೇವ, ಸೂರ್ಯ, ತೆಲುಗು ನಟರಾದ ರಾಣಾ ದಗ್ಗುಬಾಟಿ, ನಂದಮೂರಿ ಬಾಲಕೃಷ್ಣ, ಕನ್ನಡದಿಂದ ಸುದೀಪ್‌, ಯಶ್‌, ರಮ್ಯಾ, ರವಿಚಂದ್ರನ್‌, ಜಗ್ಗೇಶ್‌, ರಮೇಶ್‌ ಅರವಿಂದ್‌, ಶ್ರೀಮುರಳಿ, ಗಣೇಶ್‌, ಉಪೇಂದ್ರ, ಧ್ರುವ ಸರ್ಜಾ ಸೇರಿದಂತೆ ಬಹುತೇಕ ಕಲಾವಿದರು ಹಾಜರಾಗಲಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದೆ. ಚಿತ್ರರಂಗದ ಜೊತೆಗೆ ರಾಜಕೀಯ, ಉದ್ಯಮ ಹೀಗೆ ಇತರ ಕ್ಷೇತ್ರಗಳ ಪ್ರಮುಖ ಗಣ್ಯರಿಗೆ ಕೂಡ ರಾಜ್‌ ಕುಟುಂಬ ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನವನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next