ಮೈಸೂರು: ದಸರಾ ಸಂಭ್ರಮದ ಅಂತಿಮ ದಿನವಾದ ಇಂದು ಮೈಸೂರಿನಲ್ಲಿ ಜಂಬೂ ಸವಾರಿಗೆ ಸಿದ್ದತೆ ನಡೆಯುತ್ತಿದೆ. ಜಂಬೂ ಸವಾರಿಗೂ ಮುನ್ನ ನಡೆಯುವ ನಂದಿ ಧ್ವಜ ಪೂಜೆಗೆ ಸಿದ್ಧತೆ ಮಾಡಲಾಗುತ್ತಿದೆ.
ಅರಮನೆಯ ಬಲರಾಮ ದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಂದಿ ಧ್ವಜ ಪೂಜೆಗೆ ಸಿದ್ಧತೆ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ 2.59 ರಿಂದ 3.20ರ ಒಳಗೆ ಸಲ್ಲುವ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ.
ನಂದಿ ಧ್ವಜ ಪೂಜಾ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ
ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಟಾಪಿಸುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ.
ಪ್ರತಿ ವರ್ಷದಂತೆ ಜಂಬೂ ಸವಾರಿ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರಿಗೆ ಅವಕಾಶ ನೀಡಲಾಗಿಲ್ಲ. ಕೋವಿಡ್ ಕಾರಣದಿಂದ ಈ ಬಾರಿ ಕೇವಲ 300 ಜನರಿಗೆ ಮಾತ್ರ ಜಂಬೂ ಸವಾರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಕೇವಲ ಐದು ಆನೆಗಳು ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲಿದೆ. ಗಜಪಡೆಯ ನೇತೃತ್ವ ವಹಿಸಿರುವ ಅಭಿಮನ್ಯು ಜೊತೆಗೆ ಕಾವೇರಿ, ವಿಜಯಾ, ಗೋಪಿ, ವಿಕ್ರಮ ಆನೆಗಳು ಹೆಜ್ಜೆ ಹಾಕಲಿವೆ.