ಹೊನ್ನಾಳಿ: ವಿದ್ಯಾರ್ಥಿಗಳು ಮಾನಸಿಕ ಸ್ಥೈರ್ಯ ಹೊಂದಿ ಆತ್ಮವಿಶ್ವಾಸದಿಂದ ಇರಬೇಕು. ಆಗ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗುರುನಾಥ್ ಹೆಗಡೆ ಹೇಳಿದರು.
ಇಲ್ಲಿನ ಎಂ.ಎಸ್. ಪಪೂ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮದಲ್ಲಿ ಅವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಕುರಿತು ಮಾರ್ಗದರ್ಶನ ನೀಡಿದರು. ಪರೀಕ್ಷೆಗೆ ಹೆದರಬಾರದು. ನಿರಂತರ ಓದು, ಬರಹದ ಮೂಲಕ ಪರೀಕ್ಷೆಗೆ ಸಮರ್ಪಕ ಪೂರ್ವಸಿದ್ಧತೆ ನಡೆಸುವುದರಿಂದ ಉತ್ತಮವಾಗಿ ಪರೀಕ್ಷೆ ಬರೆದು ಅಧಿಕ ಅಂಕಗಳನ್ನು ಗಳಿಸಬಹುದು ಎಂದರು.
ಎಂ.ಎಸ್. ಪಪೂ ಕಾಲೇಜು ಪ್ರಾಂಶುಪಾಲ ಯು.ಎನ್. ಸಂಗನಾಳಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಛಲ ಹೊಂದಬೇಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ಅದೇ ದಾರಿಯಲ್ಲಿ ಸಾಗಬೇಕು. ಪಿಯುಸಿ ನಂತರದ ಕೋರ್ಸ್‌ಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ಕಾರಣದಿಂದ ನಿಯಮಿತವಾಗಿ ಅಧ್ಯಯನ ನಡೆಸಬೇಕು. ಪಠ್ಯದ ವಿಷಯಗಳನ್ನು ಕಾಲ ಕಾಲಕ್ಕೆ ಮನನ ಮಾಡಿಕೊಳ್ಳಬೇಕು. ಆಗ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಅಂತರ್ಜಾಲ ತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಮೊಬೈಲ್ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ಜ್ಯೋತಿ ಅಕ್ಕ, ಕಾಲೇಜಿನ ಉಪನ್ಯಾಸಕರಾದ ಎಚ್.ಅಣ್ಣಪ್ಪ, ಕೆ.ಉಮಾ ಮಾತನಾಡಿದರು.