ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಸಂಗತಿ ಭಾರಿ ಕುತೂಹಲ ಕೆರಳಿಸಿರುವ ಬೆನ್ನಲ್ಲೇ ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಆರಂಭಿಸಿ ಕೆಲವು ಸಮಯದ ಬಳಿಕ ದಿಢೀರ್ ರದ್ದಾದ ಪ್ರಸಂಗ ನಡೆದಿದೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸುವುದು ಮಾತ್ರ ಬಾಕಿ ಇದೆ ಎಂಬ ವದಂತಿಗಳು ಹರಡುತ್ತಿದ್ದಂತೆ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಸಿಎಂ ಪ್ರಮಾಣಕ್ಕೆ ವೇದಿಕೆ ಸಹಿತ ಭಾರೀ ಸಿದ್ಧತೆ ನಡೆಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ| ಎಂ.ಎ.ಸಲೀಂ, ಡಿಸಿಪಿ ಎಂ.ಎನ್.ಅನುಚೇತ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ದಂಡು ಕಂಠೀರವ ಕ್ರೀಡಾಂಗಣಕ್ಕೆ ಬಂದು ಭದ್ರತೆ ಒದಗಿಸುವ ಬಗ್ಗೆ ಚರ್ಚಿಸುತ್ತಿದ್ದರು.
ಮತ್ತೂಂದೆಡೆ ಹಲವು ಟೆಂಪೋಗಳಲ್ಲಿ ಶಾಮಿಯಾನ, ಬ್ಯಾರೀಕೇಡ್, ಕುರ್ಚಿಗಳು, ವೇದಿಕೆ ನಿರ್ಮಿಸಲು ಬೇಕಾಗುವ ವಸ್ತುಗಳೊಂದಿಗೆ ಆಗಮಿಸಿದ್ದ ಕಾರ್ಮಿಕರು ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಬೇಕಾದ ತಯಾರಿಯಲ್ಲಿದ್ದರು. ಇನ್ನು ಕೆಲವು ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ವೇದಿಕೆ ಎಲ್ಲಿರಬೇಕು, ಸಾರ್ವಜನಿಕರು, ವಿಐಪಿಗಳಿಗೆ ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಹೇಗೆ ಮಾಡಬೇಕು ಎಂಬಿತ್ಯಾದಿ ಸಿದ್ಧತೆಯಲ್ಲಿ ತೊಡಗಿದ್ದರು.
ಅರ್ಧದಲ್ಲೇ ಸ್ಥಗಿತ
ಇದೆಲ್ಲದರ ನಡುವೆ ಇನ್ನೂ ಸಿಎಂ ಅಭ್ಯರ್ಥಿ ಅಂತಿಮಗೊಳಿಸಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿಕೆ ಕೊಟ್ಟ ಬೆನ್ನಲ್ಲೇ ಸಿಎಂ ಪ್ರಮಾಣ ವಚನ ಕಾರ್ಯಕ್ರಮದ ಸಿದ್ಧತೆ ಸ್ಥಗಿತಗೊಳಿಸಲಾಗಿತ್ತು. ಭದ್ರತೆ ಒದಗಿಸಲು ರೂಪುರೇಷೆ ಹಾಕುತ್ತಿದ್ದ ಪೊಲೀಸರಿಗೆ ಕಂಟ್ರೋಲ್ ರೂಂನಿಂದ ತೆರಳುವಂತೆ ಸೂಚನೆ ಬಂದಿತ್ತು. ಕಾರ್ಯಕ್ರಮಕ್ಕೆ ಸದ್ಯ ಯಾವುದೇ ಭದ್ರತೆ ಒದಗಿಸುವುದು ಬೇಡ ಎಂಬ ಸಂದೇಶ ಪೊಲೀಸರಿಗೆ ಮೇಲಧಿಕಾರಿಗಳಿಂದ ಹೋಗಿತ್ತು. ಇದಾದ ಬಳಿಕ ಪೊಲೀಸರು ಹಾಗೂ ಕಾರ್ಯಕ್ರಮಕ್ಕೆಂದು ವೇದಿಕೆ ಸಜ್ಜುಗೊಳಿಸುತ್ತಿದ್ದ ಕಾರ್ಮಿಕರು ಅರ್ಧದಲ್ಲೇ ಕೆಲಸ ಮೊಟಕುಗೊಳಿಸಿ ತೆರಳಿದರು.
Related Articles