Advertisement

Panaji: ಪ್ರಧಾನಿ ಆಗಮನದ ಹಿನ್ನೆಲೆ ಕದಂಬ ಬಸ್ ನಿಲ್ದಾಣದ ಪರಿಸರದಲ್ಲಿ ಸಿದ್ಧತೆ ಚುರುಕು

02:43 PM Jan 30, 2024 | Team Udayavani |

ಪಣಜಿ: ಫೆ. 6 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗೋವಾದ ಮಡಗಾಂವ್‌ ಗೆ ಆಗಮಿಸುತ್ತಿದ್ದು, ಕದಂಬ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ಆಯೋಜಿಸಲಾಗುವ ‘ಅಭಿವೃದ್ಧಿ ಹೊಂದಿದ ಭಾರತ ಪ್ರದರ್ಶನ’ ಉದ್ಘಾಟಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆ ಮಡಗಾಂವ್‍ನ ಕದಂಬ ಬಸ್ ನಿಲ್ದಾಣದ ಪರಿಸರದಲ್ಲಿ ಸಿದ್ಧತೆಗಳನ್ನು ಚುರುಕುಗೊಳಿಸಲಾಗಿದೆ.

Advertisement

ವಸ್ತುಪ್ರದರ್ಶನಕ್ಕಾಗಿ ಟೆಂಟ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಬದಿಯಲ್ಲಿ ಹೊಸ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಅಂತಾರಾಜ್ಯ ಬಸ್ ನಿಲ್ದಾಣವನ್ನು ಒಸಿಯಾ ಕಟ್ಟಡದ ಮುಂಭಾಗದಲ್ಲಿರುವ ಎಸ್‍ಜಿಪಿಡಿಎ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ದಿನ ಬಸ್ ನಿಲ್ದಾಣದ ಸುತ್ತಮುತ್ತಲಿನ ಗೂಡಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.

ಫೆಬ್ರವರಿ 1 ರಿಂದ ಕದಂಬ ಬಸ್ ನಿಲ್ದಾಣದಲ್ಲಿ ಸ್ಥಳೀಯ ಬಸ್ ಸೇವೆಯನ್ನು ನಿಲ್ಲಿಸಲಾಗುತ್ತದೆ ಮತ್ತು ಫಟೋರ್ಡಾ ಕ್ರೀಡಾಂಗಣದ ಪಕ್ಕದಲ್ಲಿರುವ ಕೃತಕ ಟರ್ಫ್ ಫುಟ್ಬಾಲ್ ಮೈದಾನದ ಮುಂದಿನ ಸೈಟ್ ಗೆ ಸ್ಥಳಾಂತರಿಸಲಾಗುತ್ತದೆ. ಈ ಜಾಗಕ್ಕೆ ಮಣ್ಣು ತಂದು ಸಮತಟ್ಟು ಮಾಡುವ ಕಾರ್ಯ ಆರಂಭವಾಗಿದೆ. ಕದಂಬ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಅಗಲೀಕರಣವೂ ಆರಂಭವಾಗಿದೆ.

ಈ ಸಭೆಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಕೊಲ್ವಾ ವೃತ್ತದಿಂದ ಕದಂಬ ಬಸ್ ನಿಲ್ದಾಣದವರೆಗೆ ಭಿಕ್ಷುಕರ ಸಂಖ್ಯೆ ಹೆಚ್ಚಿದೆ. ಅವರಿಗೆ ಈ ಪ್ರದೇಶದಲ್ಲಿ ತಿರುಗಾಡಲು ಬಿಡುವುದಿಲ್ಲ. ಹೆಚ್ಚುವರಿಯಾಗಿ ವೆರ್ಣಾ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಜಂಕ್ಷನ್‍ನಲ್ಲಿಯೂ ಕಟ್ಟುನಿಟ್ಟಿನ ಭದ್ರತೆ ಇರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನೇತ್ ಕೊತ್ವಾಲೆ ತಿಳಿಸಿದ್ದಾರೆ.

ರಸ್ತೆ ಸಂಚಾರ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಮಡಗಾಂವ್‍ನಿಂದ ಪಣಜಿ ಅಥವಾ ವಾಸ್ಕೋಗೆ ಹೋಗುವ ಹೆಚ್ಚಿನ ವಾಹನಗಳು ಫಟೋರ್ಡಾ ದಾಮೋದರ್ ಲಿಂಗ್, ಅರ್ಲೆಮ್ ಸರ್ಕಲ್ ಕಡೆಯಿಂದ ಇಳಿಯುವ ನಿರೀಕ್ಷೆಯಿದೆ. ಹೀಗಾಗಿ ಮಾಥಾನಿ ಸಲ್ಧಾನ ಆಡಳಿತ ಭವನದಿಂದ ಕೊಲ್ವಾ ವೃತ್ತದವರೆಗಿನ ರಸ್ತೆ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಉತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next