Advertisement

ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮಕ್ಕೆ ಭರದ ಸಿದ್ಧತೆ

10:44 PM Sep 09, 2020 | mahesh |

ಉಡುಪಿ: ಕೋವಿಡ್‌ -19ರ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಸರಳವಾಗಿ ನಡೆಯುತ್ತಿದೆ. ಆದರೆ ಈ ಬಾರಿ ಸಾರ್ವಜನಿಕರು ಮನೆಯಲ್ಲಿ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸುತ್ತಿದ್ದು, ಹಬ್ಬಕ್ಕೆ ಅಗತ್ಯವಾದ ಹೂವು, ಲಡ್ಡು, ಚಕ್ಕುಲಿಗೆ ಬೇಕಾದ ಹಿಟ್ಟುಗಳ ಮಾರಾಟ ಮಾರುಕಟ್ಟೆಯಲ್ಲಿ ಭರದಿಂದ ನಡೆಯುತ್ತಿದೆ. ರಥಬೀದಿಯಲ್ಲಿ ಹೂವಿನ ವ್ಯಾಪಾರದವರು ಕಡಿಮೆ ಸಂಖ್ಯೆಯಲ್ಲಿ ಕಂಡುಬಂದರು. ಹಾಸನ ಮೂಲದ ಸುಮಾರು 30 ಹೂವಿನ ವ್ಯಾಪಾರಿಗಳು ಬುಧವಾರ ನಗರಕ್ಕೆ ಬಂದಿದ್ದು, ಕೆ.ಎಂ. ಮಾರ್ಗ, ನಗರಸಭೆ ಮುಂಭಾಗದ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕುಳಿತು ಹೂವುಗಳನ್ನು ಮಾರಾಟ ಮಾಡುತ್ತಿದ್ದಾರೆ.

Advertisement

ಶ್ರೀಕೃಷ್ಣ ಮಠದಲ್ಲಿ
ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ಶ್ರೀಕೃಷ್ಣ ಜಯಂತಿ ಉತ್ಸವ ನಡೆಯಲಿದ್ದು ಶ್ರೀಕೃಷ್ಣಮಠವನ್ನು ಅಲಂಕರಿಸಲಾಗಿತ್ತು. ಶ್ರೀಕೃಷ್ಣಮಠದ ವಾದ್ಯ ಕಲಾವಿದ ದಾಮೋದರ ಶೇರಿಗಾರ್‌ ಅವರ ಸಂಯೋಜನೆಯಲ್ಲಿ ಶಿವಮೊಗ್ಗದ ಕೃಷ್ಣಮೂರ್ತಿ ಬಳಗ, ಬಂಟ್ವಾಳದ ಪ್ರಶಾಂತ ಸಜಿಪ, ಅಲೆವೂರಿನ ಉದಯ ಶೇರಿಗಾರ್‌ ಮತ್ತು ಪರ್ಕಳದ ಶ್ರೀನಿವಾಸ ಶೇರಿಗಾರ್‌ ಅವರ ನಾಗಸ್ವರ ವಾದನವನ್ನು ಏರ್ಪಡಿಸಲಾಗಿದೆ. ವಿಟ್ಲಪಿಂಡಿ ಉತ್ಸವಕ್ಕೆ ಈಗಾಗಲೇ 12 ಗುರ್ಜಿ, ಎರಡು ಮಂಟಪಗಳನ್ನು ನಿರ್ಮಿಸಿದ್ದು, ಬುಧವಾರ ಇದಕ್ಕೆ ಬಟ್ಟೆ ಕಟ್ಟುವ ಕೆಲಸ ನಡೆದಿದೆ. ಇಷ್ಟು ವರ್ಷ ಮುದ್ದುಕೃಷ್ಣ ವೇಷ ಸ್ಪರ್ಧೆ ಮತ್ತು ಇತರ ವೇಷಗಳ ಸ್ಪರ್ಧೆ ನಡೆಯುತ್ತಿದ್ದರೆ ಈ ಬಾರಿ ಇವೆರಡಕ್ಕೂ ಅವಕಾಶ ಇಲ್ಲ.

ಶ್ರೀಕೃಷ್ಣ ಪ್ರಸಾದ ವಿತರಣೆಗೆ ತಯಾರಿ
ಕೋವಿಡ್‌-19 ಸೋಂಕಿನ ಕಾರಣ ಸಾರ್ವಜನಿಕರಿಗೆ ಶ್ರೀಕೃಷ್ಣಮಠಕ್ಕೆ ಪ್ರವೇಶ ನೀಡು ತ್ತಿಲ್ಲ. ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂದು ಜಿಲ್ಲಾಡಳಿತ ಸೂಚಿಸಿದೆ. ಕೃಷ್ಣ ದರ್ಶನ ಮಾಡಲು ಅವಕಾಶ ಇಲ್ಲದಿದ್ದರೂ ಕೃಷ್ಣನ ಪ್ರಸಾದವನ್ನು ಭಕ್ತರಿಗೆ ವಿತರಿಸಲು ಒಂದು ಲಕ್ಷ ಚಕ್ಕುಲಿ, ಒಂದು ಲಕ್ಷ ಉಂಡೆಯನ್ನು ತಯಾರಿಸಲಾಗುತ್ತಿದೆ.

ಹೂವಿನ ಬೆಲೆ ಇಳಿಕೆ
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯಕ್ತ ಪ್ರತಿ ಬಾರಿ ಹೂವಿನ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಹೂವಿನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಒಂದು ಮಾರು ಸೇವಂತಿಗೆಗೆ 50 ರೂ., ಜೀನಿಯಾ 15 ರೂ., ಗೊಂಡೆ 30 ರೂ., ಬಿಳಿ ಸೇವಂತಿಗೆ 50 ರೂ., ಗುಲಾಬಿ 60 ರೂ., ಮಾರಿಗೋಲ್ಡ್‌ 60 ರೂ., ಮೇಘನಾ 50 ರೂ., ಐಶ್ವರ್ಯ 50 ರೂ., ಊಟಿ ಮಲ್ಲಿಗೆ 30 ರೂ., ತುಳಸಿ 100 ರೂ., ಶಂಕರಪುರ ಮಲ್ಲಿಗೆ ಅಟ್ಟೆಗೆ 320 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ತರಕಾರಿ ಬೆಲೆ ಏರಿಕೆ!
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕೆ.ಜಿ.ಗೆ 10 ರೂ.ಗಳಿಂದ 20 ರೂ.ಗೆ ಏರಿಕೆಯಾಗಿದೆ. ಟೊಮೆಟೋ 50 ರೂ., ಕ್ಯಾರೆಟ್‌ 80 ರೂ., ಬೀನ್ಸ್‌ 80 ರೂ., ಕ್ಯಾಬೇಜ್‌ 36 ರೂ., ಹೀರೆ 80 ರೂ., ಎಲೆಕೋಸು 80 ರೂ., ನೆಲ್ಲಿಕಾಯಿ 120 ರೂ.ಗೆ ಮಾರಾಟವಾಗುತ್ತಿದೆ.

Advertisement

ಈ ಬಾರಿ 50 ರೂ. ಇಳಿಕೆ
ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಹೂವಿನ ಬೆಲೆ ತೀರಾ ಇಳಿಕೆಯಾಗಿದೆ. ಗೌರಿ ಹಬ್ಬದ ಸಮಯದಲ್ಲಿ ಒಂದು ಮಾರು ಸೇವಂತಿಗೆಗ ೆ100 ರೂ. ಇತ್ತು. ಈ ಬಾರಿ 50 ರೂ. ಇಳಿಕೆೆಯಾಗಿದೆ.
-ವಿಶ್ವನಾಥ, ಹೂವಿನ ವ್ಯಾಪಾರಿ, ಹಾಸನ.

ಬೇಕಿದ್ದಷ್ಟೇ ಖರೀದಿ
ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕಡಿಮೆ ಇದೆ. ಆದರೆ ತರಕಾರಿ ಬೆಲೆ  ಕೊಂಚ ಹೆಚ್ಚಿದೆ. ಹಬ್ಬದ ಹಿನ್ನೆಲೆಯಲ್ಲಿ  ಎಷ್ಟು ಬೇಕೋ ಅಷ್ಟೇ ವಸ್ತುಗಳನ್ನು ಖರೀದಿಸಲಾಗಿದೆ.
-ಸುಕನ್ಯಾ ಭಟ್‌,  ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next