Advertisement

ಕ್ಷೇತ್ರ ಪುನರ್‌ ವಿಂಗಡನೆಗೆ ಆಯೋಗ ರಚನೆ ಸಿದ್ಧತೆ

10:17 PM Sep 04, 2021 | Team Udayavani |

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಗಳ ಪುನರ್‌ ವಿಂಗಡನೆ ಮಾಡಲು ರಾಜ್ಯ ಸರಕಾರ ಪ್ರತ್ಯೇಕ ಕ್ಷೇತ್ರ ಪುನರ್‌ ವಿಂಗಡನ ಆಯೋಗ ರಚನೆ ಮಾಡಲು ತೀರ್ಮಾನಿಸಿದೆ. ಈ ಮೂಲಕ ಸರಕಾರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಮರು ಪುನರ್‌ ವಿಂಗಡಣೆಗೆ ಮುಂದಾಗಿದ್ದು, ಇದರಲ್ಲಿ ಚುನಾವಣೆಯನ್ನು ಮುಂದೂಡುವ ಲೆಕ್ಕಾಚಾರ ಅಡಗಿಕೊಂಡಿದೆ ಎಂದು ಹೇಳಲಾಗುತ್ತಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶನಿವಾರ ಜರಗಿದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಚುನಾವಣ ಆಯೋಗಕ್ಕೆ ನೀಡಲಾಗಿರುವ ಪುನರ್‌ ವಿಂಗಡನೆ ಮಾಡುವ ಅಧಿಕಾರವನ್ನು ಸರಕಾರ ವಾಪಸ್‌ ಪಡೆಯಲು ನಿರ್ಧರಿಸಿದೆ.

ಚುನಾವಣ ಆಯೋಗ ಯಾವುದೇ ವೈಜ್ಞಾನಿಕ ಮಾನದಂಡ ಅನುಸರಿಸದೆ ತಾಲೂಕು ಮತ್ತು ಜಿÇÉಾ ಪಂಚಾಯತ್‌ ಕ್ಷೇತ್ರಗಳಲ್ಲಿ ಪುನರ್‌ ವಿಂಗಡನೆ ಮಾಡಿರುವುದರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಆಯೋಗ ರಚನೆ ಮಾಡಿರುವ ಬಗ್ಗೆ ಹೈಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಲು ಸರಕಾರ ತೀರ್ಮಾನಿಸಿದೆ.

ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಹೈಕೋರ್ಟ್‌ ಅನುಮತಿ ನೀಡಿದರೆ  ಈಗಾಗಲೇ ಆಯೋಗ ಹೊರಡಿಸಿರುವ ಕ್ಷೇತ್ರಗಳ ಮೀಸಲಾತಿ ಕೂಡ ಬದಲಾಗಲಿದೆ.

ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕ್ಷೇತ್ರ ಪುನರ್‌ ವಿಂಗಡನೆಗೆ ಪ್ರತ್ಯೇಕ ಆಯೋಗ ರಚನೆ ಮಾಡುವುದರಿಂದ ಚುನಾವಣ ಆಯೋಗದ ಕೆಲಸ ಕಡಿಮೆಯಾಗಲಿದೆ. ಈ ಮೊದಲು ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುವ ಜವಾಬ್ದಾರಿ ಸರಕಾರಕ್ಕಿತ್ತು.  ಈಗ ಅದನ್ನು ವಾಪಸ್‌ ಪಡೆಯಲಾಗುತ್ತಿದೆ. ಕ್ಷೇತ್ರ ಪುನರ್‌ ವಿಂಗಡಣ ಆಯೋಗಕ್ಕೆ  ರಾಜ್ಯ ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‌ರಾಜ್‌  ಇಲಾಖೆ ಪ್ರಧಾನ ಕಾರ್ಯದರ್ಶಿ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಪದನಿಮಿತ್ತ ಕಾರ್ಯದರ್ಶಿ ಆಗಿರುತ್ತಾರೆಂದು ಹೇಳಿದರು.

Advertisement

ಚುನಾವಣ ಆಯೋಗದ ಪುನರ್‌ ವಿಂಗಡಣೆ ಬಗ್ಗೆ ನೂರಾರು ಆಕ್ಷೇಪಣೆ ಬಂದಿದ್ದು, ಅವುಗಳನ್ನು ಆಯೋಗ ಪರಿಶೀಲಿಸಿಲ್ಲ. ಆಯೋಗಕ್ಕೂ ಮತ್ತು ಪುನರ್‌ ವಿಂಗಡಣೆಗೂ ಸಂಬಂಧವಿಲ್ಲ. ಯಾರೋ  ಬಂದು ಜನಸಂಖ್ಯೆ ಆಧಾರವಿಲ್ಲದೆ  ಪುನರ್‌ ವಿಂಗಡಣೆ ಮಾಡಿದರು. ಇದರಿಂದ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಈಗ ಕ್ಷೇತ್ರ ಮರುವಿಂಗಡನ ಆಯೋಗದ ಮೂಲಕ ಹೊಸದಾಗಿ ಮರುವಿಂಗಡನೆ ಆಗಬೇಕಿರುವ ಸಂಬಂಧ ಕೋರ್ಟ್‌ಗೆ ವಿವರಣೆ ಕೊಡುತ್ತೇವೆ. ಅನುಮತಿ ಕೊಟ್ಟರೆ ಈಗ ಆಗಿರುವ ಮರುವಿಂಗಡನೆ ಮತ್ತೆ ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು.

2 ಹಂತದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ : ಕ್ಷೇತ್ರ ಪುನರ್‌ ವಿಂಗಡಣ ಆಯೋಗ ರಚನೆಯಾದರೆ, ಸಾರ್ವಜನಿಕರು ಎರಡು ಹಂತದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಮಟ್ಟದಲ್ಲಿ ಹಾಗೂ ಅನಂತರ ಆಯೋಗ ಮಟ್ಟದಲ್ಲಿ ತಕರಾರು ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ.   ಹಿಂದಿನ ವ್ಯವಸ್ಥೆಯಲ್ಲಿ ಆ ಅವಕಾಶ ಇರಲಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆ ಕೆಲವು ಪ್ರಮುಖ ತೀರ್ಮಾನಗಳು :

  • ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಇವರಿಗೆ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ಬೇಕಾಗಿರುವ 400 ಕೋಟಿ ರೂ.ದುಡಿಯುವ ಬಂಡವಾಳ ಸಾಲ ಸೌಲಭ್ಯಕ್ಕೆ ಸರಕಾರದ ಗ್ಯಾರಂಟಿ ನೀಡಲು ನಿರ್ಧಾರ.
  • ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು-2021ಕ್ಕೆ ಅನುಮೋದನೆ
  • ಬಂಡವಾಳ ಹೂಡಿಕೆಗಾಗಿ ಸಮಾಲೋಚಕ ಪಾಲುದಾರರಾಗಿರುವ ಮೆ| ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಇಂಡಿಯಾ ಪ್ರೈ.ಲಿ. (ಬಿಸಿಜಿ) ಸೇವೆಯನ್ನು ಮುಂದಿನ 1 ವರ್ಷಕ್ಕೆ ವಿಸ್ತರಿಸಲು ಒಪ್ಪಿಗೆ. ವರ್ಷಕ್ಕೆ 12 ಕೋಟಿ ರೂ. ಗೌರವ ಧನ ನೀಡಲು ತೀರ್ಮಾನ.
  • ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೊಮಾ ಕೋರ್ಸ್‌ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಯೆಂದು (ಉನ್ನತ ಶಿಕ್ಷಣ ಹಾಗೂ ಅನುಕಂಪದ ಆಧಾರದ ನೇಮಕಾತಿಗೆ) ಪರಿಗಣಿಸಲು ತೀರ್ಮಾನ
  • ಭದ್ರಾ ಮೇಲ್ದಂಡೆ ಯೋಜನೆ ಪ್ಯಾಕೇಜ್‌ 1, 2 ಮತ್ತು 3ರ ಕಾಮಗಾರಿಗಳಿಗೆ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಹೈಕೋರ್ಟ್‌ ಮಧ್ಯಾಂತರ ಆದೇಶದಂತೆ ಬೆಲೆ ಮರು ನಿಗದಿ ಪಡಿಸಲು ಒಪ್ಪಿಗೆ. ಇದರಿಂದ ಸರಕಾರಕ್ಕೆ ಸುಮಾರು 1.97 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಲಿದೆ.
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ಯುಪಿಎಸ್‌ ಮತ್ತು ಬ್ಯಾಟರಿಗಳನ್ನು 12.65 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ.
  • 2021-22 ಸಾಲಿನಲ್ಲಿ ರಾಜ್ಯದ ಎಲ್ಲ ಐಟಿಐಗಳಲ್ಲಿ ತರಬೇತಿ ಪಡೆಯು ತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲು 13,061 ಟೂಲ್‌ ಕಿಟ್‌ಗಳನ್ನು 17.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಖರೀದಿಸಿ ವಿತರಿಸಲು ಒಪ್ಪಿಗೆ.
  • ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ  ಸರಕಾರಿ ವೈಮಾನಿಕ ತರಬೇತಿ ಶಾಲೆ ಜಕ್ಕೂರಿನಲ್ಲಿ ರಾಜೀವ್‌ ಗಾಂಧಿ ಏರೋ ನ್ಪೋರ್ಟ್ಸ್ ಸೊಸೈಟಿ  ಸ್ಥಾಪನೆ ಮಾಡಿರುವ ಆದೇಶವನ್ನು  ಹಿಂಪಡೆದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ನಿರ್ಧಾರ
  • ಕೊರೊನಾ ಮೂರನೇ ಅಲೆ ನಿರ್ವಹಣೆ ಸಂಬಂಧ ವಿವಿಧ ಔಷಧಗಳ ಖರೀದಿಗಾಗಿ 17.72 ಕೋಟಿ ರೂ. ಮೊತ್ತಕ್ಕೆ ಅನುಮೋದನೆ.
Advertisement

Udayavani is now on Telegram. Click here to join our channel and stay updated with the latest news.

Next