Advertisement

ಲಸಿಕೆ ವಿತರಣೆಗೆ ಸಿದ್ಧತೆ; ಸಂಗ್ರಹ, ದಾಸ್ತಾನು, ನೀಡಿಕೆಗೆ ರಾಜ್ಯ ಸರಕಾರ ಸನ್ನದ್ಧ

01:25 AM Nov 25, 2020 | mahesh |

ಬೆಂಗಳೂರು: ಕೋವಿಡ್ ಹಾವಳಿ, ಲಾಕ್‌ಡೌನ್‌, ಸೋಂಕು ನಿಯಂತ್ರಣದ ಮಹಾ ಹೋರಾಟದ ಬಳಿಕ ಇನ್ನೀಗ ಲಸಿಕೆ ವಿತರಣೆಯ ಸಮರ ಆರಂಭವಾಗಲಿದೆ. ಅತ್ತ ಲಸಿಕೆಯ ಬ್ರಹ್ಮಾಸ್ತ್ರ ಸಿದ್ಧಗೊಳ್ಳುತ್ತಿರುವಂತೆಯೇ ದೇಶವಾಸಿಗಳಿಗೆ ಸಮರೋ ಪಾದಿಯಲ್ಲಿ ಲಸಿಕೆ ವಿತರಿಸುವ “ಆಪರೇಷನ್‌ ಲಸಿಕೆ’ ಪ್ರಕ್ರಿಯೆಗೆ ಕೇಂದ್ರ-ರಾಜ್ಯ ಸರಕಾರಗಳು ಸನ್ನದ್ಧವಾಗಿವೆ.

Advertisement

ದೇಶ- ವಿದೇಶಗಳಲ್ಲಿ ಕೊರೊನಾ ಹತ್ತಿಕ್ಕುವಂಥ ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿವೆ. ಅವುಗಳ ಬಳಕೆಗೆ ವಿಜ್ಞಾನಿಗಳು – ಸರಕಾರದ ಒಪ್ಪಿಗೆಯ ಮುದ್ರೆ ಬೀಳುತ್ತಿದ್ದಂತೆ ದೇಶಾದ್ಯಂತ ಲಸಿಕೆ ಹಂಚಿಕೆಯ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ. ರಾಜ್ಯ ಸರಕಾರವೂ ವ್ಯಾಕ್ಸಿನ್‌ ಸಂಗ್ರಹ ಮತ್ತು ಕ್ಷಿಪ್ರ ಹಂಚಿಕೆಗೆ ಸಜ್ಜಾಗಿದೆ.

ರಾಜ್ಯ ಮಟ್ಟದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಚಾಲನ ಸಮಿತಿ ರಚನೆಯಾಗಲಿದ್ದು, ಚುನಾವಣೆ ಮಾದರಿಯಲ್ಲೇ ಬೂತ್‌ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲು ಸರಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ತಮ್ಮ ಸಿಬಂದಿಗಾಗಿ ಲಸಿಕೆ ಪಡೆಯಲು 24 ಸಾವಿರಕ್ಕೂ ಅಧಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಕಾರ್ಯಕರ್ತರ ಮಾಹಿತಿ ನೀಡುವ ಮೂಲಕ ನೋಂದಣಿ ಮಾಡಿಕೊಂಡಿವೆ.

ಮೊದಲ ಹಂತ: 3 ಲಕ್ಷಕ್ಕೂ ಅಧಿಕ ಮಂದಿಗೆ
ಸದ್ಯ ರಾಜ್ಯದಲ್ಲಿ ಆರೋಗ್ಯ ಇಲಾಖೆ ಖಾಯಂ ಸಿಬಂದಿ, ಗುತ್ತಿಗೆ, ಹೊರ ಗುತ್ತಿಗೆ ನೌಕರರು, ಖಾಸಗಿ ಆಸ್ಪತ್ರೆ ವೈದ್ಯರು, ಸಿಬಂದಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಸೇರಿ ಅಂದಾಜು 3.4 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ.

ಕೇಂದ್ರದ ಮಾಹಿತಿ ನೆರವಿಗೆ ಮನವಿ
ಶೀತಲಾಗಾರ ಮತ್ತು ಸಂಗ್ರಹಕ್ಕೆ ಸಂಬಂಧಿಸಿ, ಡೋಸ್‌ಗಳು ಮತ್ತಿತರ ಮಾಹಿತಿ ಅಗತ್ಯವಿದೆ. ಇದನ್ನು ಶೀಘ್ರ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಕೋರಲಾಗಿದೆ. ಕೇಂದ್ರ ಸರಕಾರವು ಈಗಾಗಲೇ ಡೀಪ್‌ ಫ್ರೀಜರ್‌ ಮತ್ತು ರೆಫ್ರಿಜರೇಟರ್‌ಗಳನ್ನು ಮಂಜೂರು ಮಾಡಿದೆ. ಹೆಚ್ಚುವರಿ ಅಗತ್ಯಗಳ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ.

Advertisement

ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ
ಲಸಿಕೆ ಸಂಗ್ರಹ ಮತ್ತು ವಿತರಣೆಗೆ 2,855 ಶೀತಲ ಕೇಂದ್ರಗಳು ಲಭ್ಯವಿವೆ. ಜತೆಗೆ 10 ವಾಕ್‌ ಇನ್‌ ಕೂಲರ್‌ ಮತ್ತು 4 ವಾಕ್‌ ಇನ್‌ ಫ್ರೀಜರ್‌ ಇವೆ. ಹೆಚ್ಚುವರಿಯಾಗಿ ಕೇಂದ್ರ ಆರೋಗ್ಯ ಸಚಿವಾಲಯವು 3 ವಾಕ್‌ ಇನ್‌ ಕೂಲರ್‌, 2 ವಾಕ್‌ ಇನ್‌ ಫ್ರೀಜರ್‌ ನೀಡಲಿದೆ. ಇದರಿಂದ ಶೀಘ್ರ, ಲಸಿಕೆ ಸಾಗಣೆ ಮತ್ತು ವಿತರಣೆ ಸಾಧ್ಯ. ಜತೆಗೆ ಪಶು ಸಂಗೋಪನೆ ಇಲಾಖೆಯಲ್ಲಿ ಲಭ್ಯವಿರುವ ಶೀತಲ ಸಂಗ್ರಹ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕಾರ್ಪೊರೆಟ್‌ ಖಾಸಗಿ ಆಸ್ಪತ್ರೆಗಳ ಶೀತಲ ಸಂಗ್ರಹ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next