ಕೂಡಲಸಂಗಮ: ಏಪ್ರಿಲ್ 21ರಂದು ನಡೆಯುವ ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಈ ವರ್ಷ ಒಂದು ಲಕ್ಷಕ್ಕೂ ಅಧಿ ಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳುವ ನಿರೀಕ್ಷೆ ಇದೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಎ.ಇ. ರಘು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಮಾತ್ರವಲ್ಲದೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ, ಗೋವಾದಿಂದ ಅಪಾರ ಭಕ್ತರು ಆಗಮಿಸುವರು.
ಜಾತ್ರೆಗೆ ಆಗಮಿಸುವ ಭಕ್ತರಿಗೆ ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ್ದು ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರ ಕಾರ್ಯನಿರ್ವಹಿಸುವುದು. ಗೋಧಿ ಹುಗ್ಗಿ, ಬದನೆಕಾಯಿಪಲ್ಲೆ ಅನ್ನ ಸಾಂಬರ ತಯಾರಿಸಲು 15 ಬಾಣಸಿಗರು, 50 ಜನ ಸಹಾಯಕರನ್ನು ನಿಯೋಜಿಸಿದೆ.
ಬುಧವಾರ ಬೆಳಗ್ಗೆ 6 ಗಂಟೆಗೆ ಉತ್ಸವ ಮೂರ್ತಿ ರಥೋತ್ಸವ ನಡೆಯುವುದು, 7ರಿಂದ 8.30ರ ವರೆಗೆ ದೇವಾಲಯದ ಪಾದಗಟ್ಟೆಯ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯುವುದು. 9 ಗಂಟೆಯಿಂದ ದೇವಾಲಯ ಆವರಣದಲ್ಲಿ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯುವುದು. ಸಂಜೆ 6 ಗಂಟೆಗೆ ಅಪಾರ ಭಕ್ತರ ಜಯಘೋಷದಲ್ಲಿ ಸಂಗಮೇಶ್ವರ ರಥೋತ್ಸವ ನಡೆಯವುದು. ರಾತ್ರಿ 8 ಗಂಟೆಗೆ ಚಿತ್ರದುರ್ಗದ ಜಮುರಾ ಕಲಾ ತಂಡದಿಂದ ಅವಿರಳ ಜ್ಞಾನಿ ಚನ್ನಬಸವಣ್ಣ ನಾಟಕ ಪ್ರದರ್ಶನಗೊಳ್ಳಲಿದೆ.
ಜಾತ್ರೆಗೆ ಆಗಮಿಸುವ ಭಕ್ತರ ವಾಹನಗಳಿಗೆ ಬಸ್ ನಿಲ್ದಾಣ ಬಳಿಯ ಆವರಣದಲ್ಲಿ ವ್ಯವಸ್ಥೆ ಮಾಡಿದೆ. ದ್ವಿಚಕ್ರವಾಹನಗಳಿಗೆ ಸಂಗಮೇಶ್ವರ ಕಲ್ಯಾಣ ಮಂಟಪ ಬಳಿಯ ಬಯಲು ಜಾಗದಲ್ಲಿ ವ್ಯವಸ್ಥೆ ಮಾಡಿದೆ. ಬಸವೇಶ್ವರ ವೃತ್ತದವರೆಗೆ ಮಾತ್ರ ಬಸ್, ವಾಹನಗಳು ಸಂಚರಿಸುವವು. ಅಡವಿಹಾಳ ಕೂಡಲಸಂಗಮ ಸೇತುವೆಯ ಮೂಲಕ ಭಕ್ತರು ಬರಲು ಅವಕಾಶ ಇದ್ದು, ಸೇತುವೆ ಪ್ರವೇಶ ದ್ವಾರದಲ್ಲಿಯೇ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಿದೆ. ಭಕ್ತರು ಸಹಕರಿಸಬೇಕು ಎಂದರು. ಭಕ್ತರ ಅನುಕೂಲಕ್ಕಾಗಿ ಟ್ಯಾಂಕರ್ ಮೂಲಕ ರಸ್ತೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ದೇವಾಲಯ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇರುವುದು. ನದಿಯಲ್ಲಿ ನೀರು ಇಳಿಮುಖಗೊಂಡಿದ್ದರಿಂದ ಸ್ನಾನ ಮಾಡಲು ತಾತ್ಕಾಲಿಕ ಸ್ನಾನಘಟ್ಟ ನಿರ್ಮಿಸಲಾಗಿದೆ. ಜಾತ್ರೆಯ ನಿಮಿತ್ತ ಸಂಗಮೇಶ್ವರ ದೇವಾಲಯ, ಬಸವೇಶ್ವರ ಐಕ್ಯ ಮಂಟಪ, ಬಸವೇಶ್ವರ ವೃತ್ತ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಎಲ್ಲರ ಗಮನ ಸೆಳೆಯುತ್ತಿವೆ. ಗ್ರಾಮಸ್ಥರು ರಸ್ತೆಯುದ್ದಕ್ಕೂ ತಳಿರು ತೋರಣಗಳಿದ್ದ ಶೃಂಗರಿಸಿದ್ದಾರೆ.