Advertisement

ಮೇಘರಾಗಕೆ ಬೇಕು ತಯಾರಿಯ ತಾಳ 

12:30 AM Jun 15, 2018 | |

ತಿಂಗಳ ಆರಂಭದಿಂದಲೇ ಇನ್ನೂ ಕೆಲವು ದಿನ ಮುಂಚಿತವಾಗಿಯೇ ಮಳೆರಾಯ ಬಂದುಬಿಟ್ಟಿದ್ದಾನೆ. ಮಳೆಯಲ್ಲಿ ವಾಹನ ಚಲಾಯಿಸುವ ಥ್ರಿಲ್ಲನ್ನು ಸಾಮಾಜಿಕ ಜಾಲ ತಾಣಗಳ ತುಂಬ ವಿಡಿಯೋಗಳ ಮೂಲಕ ಸಾವಿರಾರು ಜನ ಹಂಚಿ ಕೊಳ್ಳುವುದನ್ನು ನೋಡುತ್ತಿದ್ದೇವೆ. ನಿಜ, ಮಳೆಗಾಲದಷ್ಟು ಸುಂದರ ವಾದ ವರುಷದ ಹೊತ್ತೇ ಬೇರೆ ಇಲ್ಲ. ಧೂಳು ಮೆತ್ತಿಕೊಂಡಿದ್ದ ಗಿಡಮರಗಳೆಲ್ಲ ಮತ್ತೆ ಹಸಿಹಸಿರಾಗಿ ಕಂಗೊಳಿಸುತ್ತಿವೆ. ಹಿಡಿ ಮಣ್ಣಿಂದ, ಸಂದಿ ಗೊಂದಿಗಳಲ್ಲಿ, ಎಲ್ಲೆಲ್ಲಿ ಒಂದಿಷ್ಟೇ ಮಣ್ಣಿದ್ದರೂ ಅಲ್ಲಿಂದಲೂ ಪುಟ್ಟ ಪುಟ್ಟ ಗಿಡಗಳೂ ಹುಟ್ಟಿಕೊಂಡು ಮಳೆಯ ಶಕ್ತಿಯನ್ನು ತಿಳಿಸುತ್ತಿದೆ. ಹಾಗಾದರೆ ಪ್ರಕೃತಿ, ಮಳೆ ಎದುರಿಸಲು ಸಜ್ಜಾಗಿದೆ, ಹೊಸತನ್ನು ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿದುಕೊಳ್ಳಬಹುದು. 

Advertisement

ನನ್ನ ಹುಟ್ಟೂರು ಕರಾವಳಿಗೆ ಹತ್ತಿರವಿರುವ ಪಶ್ಚಿಮಘಟ್ಟದ ತಪ್ಪಲು ಪ್ರದೇಶ. ಅಡಿಕೆ ಕೃಷಿಯ ಊರಾದ ಅಲ್ಲಿ ಕೃಷಿ ಚಟುವಟಿಕೆ ಗಳಿಗೆ, ಅಡಿಕೆ ಒಣಗಿಸಲು ಎಲ್ಲದಕ್ಕೂ ದೊಡ್ಡ ಅಂಗಳಗಳು ಅನಿ ವಾರ್ಯ. ಮಳೆಗಾಲದಲ್ಲಿ ಈ ಅಂಗಳಗಳಿಗೆ ಅತ್ತಿತ್ತ ಹೋಗುವಾಗ ಜಾರದಂತೆ ಸುರಕ್ಷತೆಯ ದೃಷ್ಟಿಯಿಂದ ಅಡಿಕೆ ಸೋಗೆಗಳನ್ನು ಹಾಕಿ ಮುಚ್ಚುತ್ತಾರೆ. ಈಗ ಅತ್ಯಾಧುನಿಕ ಎಂಬಂತೆ ಪ್ಲಾಸ್ಟಿಕ್ಕನ್ನು ಹೊದೆಸಿ ರುವುದು ಕಾಣಬಹುದು. ಇದರಿಂದಾಗಿ ಒಂದೂ ಹುಲ್ಲು ಹುಟ್ಟದು ಎಂಬ ಖುಷಿ ಕೃಷಿಕರಿಗೆ. ಅಂದು ಬಾಲ್ಯದಲ್ಲಿ ಅಲ್ಲೇ ಆ ಸುರಿಯುವ ಜಡಿಮಳೆಯಲ್ಲೂ ಕ್ರಿಕೆಟ್‌ ಆಡಿದ್ದು ನಿನ್ನೆ ಮೊನ್ನೆಯಂತಿದೆ. ಬ್ಯಾಟ್‌ ಇದ್ದರೆ ಸರಿ, ಇಲ್ಲದಿದ್ದರೆ ಗರಿ ತೆಗೆದ ತೆಂಗಿನ ಸೋಗೆಯ ಹಿಡಿಯೇ ನಮ್ಮ ಬ್ಯಾಟ್‌. ಬಾಲು ಎಸೆದ ರಭಸಕ್ಕೆ “ಛಿಲ್‌’ ಎಂದು ನೀರು ಹಾರಿಸುತ್ತಾ ಎಷ್ಟು ಸಾಧ್ಯವೋ ಅಷ್ಟು ದೂರ ಬಾಲನ್ನು ಎಸೆದರೆ ಸಿಗುತ್ತಿದ್ದ ಆನಂದ ನಂತರ ದುಡ್ಡುಕೊಟ್ಟು ತಂದ ಬ್ಯಾಟುಗಳಲ್ಲೂ ಸಿಗುತ್ತಿರಲಿಲ್ಲ. ಅಂತರ ವಿವಿ, ಅಂತರ ವಲಯದ ಕ್ರಿಕೆಟ್‌ ಪಂದ್ಯ ಆಡಿದ ಸವಿ ನೆನಪಿಗಿಂತ ಮಳೆಗಾಲದಲ್ಲಿ ಮನೆ ಮುಂದಿನ ಅಂಗಳದಲ್ಲಿ ಆಡಿದ ಕ್ರಿಕೆಟ್‌ ಹೆಚ್ಚು ನೆನಪು. ಭಾರೀ ಮಳೆಗೆ ಜಿಲ್ಲಾಧಿಕಾರಿ ರಜೆ ಘೋಷಿಸಿರುವ ಸುದ್ದಿ ಈಗ ಹೆಡ್‌ಲೈನ್‌ ಆಗುತ್ತದೆ. ಅಂದು ಜಡಿಮಳೆಗೆ ನದಿ ದಾಟಿ, ಒದ್ದೆ ಅಂಗಿಚಡ್ಡಿಯೊಂದಿಗೆ ಶಾಲೆಗೆ ಹೋದಾಗ ನಮ್ಮ ಪರಿಸ್ಥಿತಿ ನೋಡಿ ಹೆಡ್ಮಾಷ್ಟ್ರು ರಜೆ ಘೋಷಿಸುತ್ತಿದ್ದರು. ರಜೆ ಸಿಕ್ಕಿದ ತಕ್ಷಣ ನಾವು ಕ್ರಿಕೆಟ್‌, ಕಬಡ್ಡಿ ಆಡುತ್ತಿದ್ದೆವು. ಒದ್ದೆ ತಂಗೀಸಿನ ಸ್ಕೂಲು ಬ್ಯಾಗು, ಅಮ್ಮ ಸುಟ್ಟಾಕಿ ಕೊಡುತ್ತಿದ್ದ ಹಲಸಿನ ಹಪ್ಪಳ, ಹಲಸಿನ ಕಡುಬು, ಕುಂಭದ್ರೋಣ ಮಳೆಯಾದರೆ ಮುಲಾಜಿಲ್ಲದೇ ಹಾಕುತ್ತಿದ್ದ ರಜೆ, ಹಾಕಿದ ರಜೆಗೆ ಯಾರೂ ಕೇಳದೇ ಇರುವ 

ರಜಾ ಅರ್ಜಿ, ಮಲೆನಾಡಿನ ಮಳೆಗಾಲದ ಸಂಭ್ರಮದ ದಿನಗಳು. ಮಳೆ ನಿಂತಾಗ ಮೋಡದಿಂದ ಹೊರಬಂದು ಸೂರ್ಯ ಕಾಣುವಾಗ ಸೇತುವೆ ಪಕ್ಕ ಕೇದಗೆಯ ಪೊದೆಯಲ್ಲಿ ಕುಳಿತಿದ್ದ ಮಿಂಚುಳ್ಳಿ ಹಕ್ಕಿ ನದಿನೀರು ಯಾವಾಗ ತಿಳಿಯಾಗಿ ಮೀನುಗಳು ಕಂಡಾವು ಎಂಬ ನಿರೀಕ್ಷೆಯಲ್ಲಿ ಕೂತಿರುತ್ತಿತ್ತು. ಇದು ಮೂರು ದಶಕಗಳ ಹಿಂದಿನ ಮಾತು. ಮೊನ್ನೆ ಊರಿಗೆ ಹೋದಾಗ ಅದೇ ಜಾಗದಲ್ಲಿ ಅದೇ ಕೇದಗೆಯ ಪೊದೆಯಲ್ಲಿ ಮಿಂಚುಳ್ಳಿ ದರ್ಶನವಾಗಿತ್ತು. ಅಂದರೆ ಮೂವತ್ತು ವರ್ಷಗಳಲ್ಲಿ ಮಿಂಚುಳ್ಳಿ  ಸಂಸಾರ ನದಿ ತೀರವನ್ನು ಬಿಟ್ಟಿಲ್ಲ. ನಾವು ಮಾತ್ರ ಹಳ್ಳಿ ಬಿಟ್ಟು ನಗರಕ್ಕೆ ಬಂದು ಮಳೆಗಾಲದಲ್ಲಿ ಹಳ್ಳಿಯನ್ನು ನೆನಪಿಸುವಂತಾಗಿದೆ. 

ಅಡಿಕೆ ತೋಟದ ಭಾರೀ ಚಟುವಟಿಕೆಗಳಿಗಷ್ಟೇ ಸ್ವಲ್ಪ ದಿನ ವಿರಾಮ ಬಿಟ್ಟರೆ ಅಂದು ನಮ್ಮ ಆಟೋಟಗಳಿಗೆ ಮಳೆ ಅಡ್ಡಿಯಾ ಗಿದ್ದೇ ಇಲ್ಲ. ಜ್ವರ, ಸುರಿಯುತ್ತಿರುವ ಮೂಗಿಗೂ ಕ್ಯಾರೇ ಅನ್ನದೇ ಮಳೆಯಲ್ಲೇ ನೆನೆಯುತ್ತಾ, ಮಳೆಯಲ್ಲೇ ಆಡುತ್ತಾ ಮಳೆಗಾಲವನ್ನು ಅನುಭವಿಸುತ್ತಾ ಬದುಕುತ್ತಿದ್ದೆವು. 

ಆದರೆ ಅಲ್ಲೊಂದು ಮಳೆಗಾಲಕ್ಕೂ ಮುನ್ನ ಮಳೆಗಾಲವನ್ನು ಎದುರಿಸುವ ತಯಾರಿ ಭರ್ಜರಿಯಾಗಿ ನಡೆಯುತ್ತಿತ್ತು. ಹೆಂಚಿನ ಮನೆಯಾದರೆ ಸೋರುತ್ತಿರುವ ತುಂಡಾದ ಹೆಂಚು ತೆಗೆದು ಹೊಸ ಹೆಂಚು ಹೊದಿಸುವುದು. ಮನೆಯ ಸುತ್ತ ನೀರು ಸರಾಗವಾಗಿ ಹರಿದು ಹೋಗಲು ಮಣ್ಣು ತೆಗೆದು “ಕಣಿ’ ಎನ್ನಲಾಗುವ ಸಣ್ಣ ತೋಡಿನಂತಹುದನ್ನು ಮಾಡಿ ಅಲ್ಲಿಂದ ತೋಟಕ್ಕೋ ದೊಡ್ಡ ತೋಡಿಗೋ ಹೋಗಿ ಸೇರಲು ಅನುಕೂಲ ಮಾಡುತ್ತಿದ್ದರು. ಅಕ್ಕಿ ಬೇಳೆ ಮೊದಲೇ ತಂದಿಟ್ಟು ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ, ಕಾಡು ಮಾವು ಇವುಗಳಿಂದ ತರಕಾರಿಗಳಿಲ್ಲದೆ ಊಟ ತಯಾರಿ ಸುವ ವ್ಯವಸ್ಥೆಗೂ ಮುಂದಾಗುತ್ತಿದ್ದರು. ಅಡುಗೆ ಕೋಣೆಯ ಪಕ್ಕದಲ್ಲಿರುತ್ತಿದ್ದ ಕೊಟ್ಟಿಗೆಯಲ್ಲಿ ತೆಂಗಿನಗರಿಯ ತುಂಬ ಮಂಗಳೂರು ಸೌತೆಯನ್ನು ಕಟ್ಟಿ ತೂಗಿ ಬಿಡುವುದನ್ನು ಈಗ ಊಹಿಸುವುದೇ ಖುಷಿ. ಇದೆಲ್ಲವೂ ನಾವು ಮಳೆಗಾಲವನ್ನು ಕಳೆಯಲು ಮಾಡಿಕೊಳ್ಳುತ್ತಿದ್ದ ತಯಾರಿ. ಇದರ ನಡುವೆ ಬಿಡದೇ ಬರುವ ಮಳೆಗೆ ಒಮ್ಮೊಮ್ಮೆ ಹಿಡಿಶಾಪ ಹಾಕುತ್ತಾ, ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ “ದೇವರ ಎಂಜಲು’ ಎಂದು ಕರೆಸಿ ಕೊಳ್ಳುತ್ತಿದ್ದ ಕೆಂಪು ಹುಳವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುತ್ತ ಇರುವುದು ಹಳ್ಳಿಗಳಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆಯಾ ಗಿದೆ. ಸದಾ ಅಂಗಳದಲ್ಲಿ ಕಂಡು ಬರುತ್ತಿದ್ದ ಕೆಂಪು ಏಡಿ ವಿರಳವಾ ಗಿದೆ. ಕಂಡು ಬಂದರೆ ತಕ್ಷಣ ತಿಳಿಸಿ, ಅತ್ಯುತ್ತಮ ಫೋಟೋಗ್ರಫಿ ಮಾಡ ಬಹುದು ಎಂದು ಅಣ್ಣನಿಗೆ ಹೇಳುವಂತಾಗಿದೆ. ಆದರೆ ನಗರಕ್ಕೆ ಬಂದಾಗ ಮಳೆ ಮತ್ತದರ ಅನುಭವ ಬೇರೆಯೇ ರೀತಿ. ಬೆಂಗಳೂರಿನಲ್ಲಿ ಮಳೆ ಬಂದ ತಕ್ಷಣ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಕಂಗೊಳಿಸುತ್ತವೆ. ರಸ್ತೆಗಳಲ್ಲಿ ಧೂಳು ಮರೆಯಾಗುತ್ತದೆ. 

Advertisement

ಆದರೂ ಮಳೆ ಎಂದರೆ ನಗರದಲ್ಲಿ ಭಯ ಹುಟ್ಟಿಸುವ ಪರಿ ನಿಜಕ್ಕೂ ಅಚ್ಚರಿ. ಹಳ್ಳಿಯಿಂದ ಬಂದವರೇ ಆಗಿದ್ದರೂ ಹಳ್ಳಿಯಲ್ಲಿ ಮಳೆ ಅಭ್ಯಾಸವಾಗಿದ್ದರೂ ನಗರದ ಮಳೆಗೆ ಭಯ ಪಡುತ್ತಾರೆ. ಕಾರಣ ಅಸ್ತವ್ಯಸ್ತವಾಗುವ ರಸ್ತೆ ಸಂಚಾರ, ಟ್ರಾಫಿಕ್‌ ಜಾಮ…ಗೆ ನಗರದ ಜನ ಗುಡುಗು ಸಿಡಿಲಿಗಿಂತಲೂ ಹೆಚ್ಚು ಭಯ ಪಡುತ್ತಾರೆ. ಹೂಳು ತುಂಬಿಕೊಂಡಿರುವ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ರಸ್ತೆಗಳು ಕೆರೆಗಳಾದಾಗ ಆ ನೀರಲ್ಲಿ ಕಾಲಿಡಲು ಜನ ಹಿಂದೆಮುಂದೆ ನೋಡುತ್ತಾರೆ. ಎಲ್ಲೆಲ್ಲಿನ ಹೊಲಸು ನೀರು ರಸ್ತೆಗಳಿಗೆ ಕೊಚ್ಚಿ ಬಂದು ಆ ನೀರಲ್ಲಿ ನಡೆಯಲು ಹೇಸಿಗೆ ಆಗುತ್ತದೆ. ಆದರೆ ವಿಧಿಯಿಲ್ಲ. ಇವೆಲ್ಲಾ ಅನಿವಾರ್ಯವಾಗಿ ಅನುಭವಿಸ ಬೇಕಾದ ತೊಂದರೆಗಳು.  ಆಗಲೇ ಹೇಳಿದಂತೆ ನಮ್ಮ ಬಾಲ್ಯದಲ್ಲಿ ಇದಕ್ಕಿಂತ ಭಾರಿ ಮಳೆ ನೋಡಿದ್ದೇವೆ. ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದೇವೆ. ಭಾರೀ ಮಳೆ ಬರುವ ಸೂಚನೆಯಿದ್ದರೆ ಶಾಲೆ ಒಂದು ಗಂಟೆ ಮುಂಚೆಯೇ ಬಿಟ್ಟುಬಿಡುತ್ತಿದ್ದರು, ನಾವೆಲ್ಲಾ ಮಳೆಯಲ್ಲಿ ನೆನೆಯುತ್ತಾ ಕುಣಿಯುತ್ತಾ ಮನೆಗೆ ಬರುತ್ತಿದ್ದೆವು. ಮನೆಯಲ್ಲಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಒಂಚೂರು ಕಷಾಯ ಕುಡಿಸಿದರೆ ಆಯ್ತು ಎಂಥ ಶೀತವಾದರೂ ಓಡಿ ಹೋಗತ್ತೆ ಎಂದು ನಿರಾತಂಕ. ಆದರೆ ನಗರಗಳಲ್ಲಿ ಮಳೆ ಶುರುವಾದ ಕೂಡಲೇ ಮನೆಗಳಿಂದ ಫೋನುಗಳು ಬರಲು ಮೊದಲಾಗುತ್ತದೆ. ಎಲ್ಲಿದ್ದೀಯ? ಭಾರಿ ಮಳೆ ಬರೋಹಾಗಿದೆ ಕೊಡೆ ತಗೊಂಡು ಹೋಗಿದೀಯಾ? ಆಟೋದಲ್ಲಿ ಬಂದುಬಿಡು ಬಸ್ಸಿಗೆ ಕಾಯಬೇಡ ಹೀಗೆಲ್ಲ ಹಿತವಚನಗಳು. ಕಚೇರಿಯಿಂದ ಹೊರಡುವ ಸಮಯ ದಲ್ಲಿ ಮಳೆ ಮುತ್ತಿಕೊಂಡರೆ, “ಥೂ ಹಾಳು ಮಳೆ ಈಗಲೇ ಶುರು ವಾಗಬೇಕಾ?’ ಎನ್ನುತ್ತಾರೆ. ನಗರದ ಜನ ಮಳೆ ದ್ವೇಷಿಸುತ್ತಾರೆ ಎಂದರೆ ಅದು ಆಳದಿಂದ ಬಂದ ದ್ವೇಷವಲ್ಲ. ಮನೆ ತಲುಪುವ ತೊಂದರೆಗಳಿಂದ ಹುಟ್ಟಿಕೊಂಡ ಗಾಬರಿ ಅಷ್ಟೆ. ನಗರದ ಜನಕ್ಕೆ ತುಂತುರು ಮಳೆ ಬಹು ಇಷ್ಟ. ಕಂಡೂ 

ಕಾಣದ ಹಾಗೆ ಕೊಂಚವೇ ನೆಂದು ಜೋರು ಮಳೆ ಶುರುವಾಗುವ ಮುನ್ನ ಮನೆ ಸೇರಿ ಬಿಟ್ಟರೆ ಖುಷಿಯೋ ಖುಷಿ. ವರಾಂಡದಲ್ಲಿ ಅಥವಾ ಕಿಟಕಿಯ ಬಳಿ ಚೇರ್‌ ಹಾಕಿ ಬಿಸಿಬಿಸಿ ಕಾಫಿ ಹಿಡಿದು ಸುರಿಯುವ ಮಳೆಯನ್ನು ನೋಡುತ್ತ ಕುಳಿತರೆ ಬೇರೆ ಸ್ವರ್ಗವೇ ಬೇಡ. ಹೊರಗಿನ ಥಂಡಿ ಹವಾಕ್ಕೂ ಗಂಟಲಿನಲ್ಲಿ ತುಸು ತುಸುವೇ ಇಳಿಯುತ್ತಿರುವ ಹದವಾದ ಬಿಸಿಯ ಹಿತವಾದ ಪರಿಮಳದ ಕಾಫಿಗೂ ಅದೇನೋ ನಂಟು ಕಲ್ಪಿಸಿ ಸುಖೀಸುತ್ತಾರೆ. ಆ ಕಾಫಿಯ ಜೊತೆ ಒಂದಿಷ್ಟು ಮುರುಕು ತಿಂಡಿ ಅಥವಾ ಬಿಸಿಬಿಸಿ ಬೋಂಡಾ ಬಜ್ಜಿ ಇದ್ದರಂತೂ ಖುಷಿಯೇ ಬೇರೆ. ನಗರದ ಜನ ಮಳೆ ಅನುಭವಿ ಸುವುದೇ ಹೀಗೆ. ಇನ್ನೂ ಸಂಗೀತ ಪ್ರಿಯರು ಮಳೆ ಹಾಡು ಮೇಘ ಮಲ್ಹಾರ ರಾಗ ಕೇಳಿ ಸಂಭ್ರಮಿಸುತ್ತಾರೆ. ಎಫ್ಎಮ… ರೇಡಿ ಯೋದಲ್ಲಿ ಮಳೆಯನ್ನು ಹಬ್ಬದಂತೆ ಸಂಭ್ರಮಿಸಿ ಇಂಪಾದ ಹಾಡುಗಳೊಂದಿಗೆ ಕೇಳುಗರ ರಸಿಕತೆ ಎಲ್ಲೆ ಮೀರಿಸುತ್ತಾರೆ.

ಮಳೆಯನ್ನು ಆನಂದದಿಂದ ಅನುಭವಿಸುವ ಜನರಿದ್ದರೂ ಮಳೆಯಿಂದಾಗುವ ತೊಂದರೆಗಳು ಆ ಆನಂದವನ್ನು ಸಂಪೂರ್ಣ ವಾಗಿ ಅನುಭವಿಸಲು ಬಿಡುತ್ತಿಲ್ಲ. ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಮಳೆ ಬರೀ ಮಳೆಯಲ್ಲ ಗಾಬರಿ ಹುಟ್ಟಿಸುವ, ಹೆದರಿಕೆ ಮೂಡಿಸುವ ಹೊತ್ತೂ ಹೌದು. ಮಳೆಯೆಂದರೆ ಜೀವ ತೆಗೆಯುವ ಪ್ರಕೃತಿಯ ಅಟ್ಟಹಾಸ ಎನ್ನುವಂತಾಗಿದೆ. ಹಾಗಾದರೆ ನಮ್ಮ ಬೃಹತ್‌ ಮಹಾನಗರಪಾಲಿಕೆ ಮಳೆಗಾಲಕ್ಕೆ ಯಾವ ರೀತಿಯ ತಯಾರಿ ಮಾಡಿಕೊಂಡಿದೆ? ಪ್ರತಿವರ್ಷ ಮಳೆ, ಒಂದಷ್ಟು ಜೀವಗಳನ್ನೂ ಕೊಂಡೊಯ್ಯುತ್ತಿದೆ. ಮಳೆನೀರಿನ ಮೋರಿಗಳು, ದೊಡ್ಡ ಮೋರಿ ಗಳೂ ಕಟ್ಟಿಕೊಂಡು ರಸ್ತೆ  ಪೂರಾ ಅವಾಂತರ ಸೃಷ್ಟಿ ಮಾಡುವ ಸಂದರ್ಭಗಳಿಂದ ನಗರದಲ್ಲಿ ದೊಡ್ಡ ಮಳೆ ಆತಂಕ ಮೂಡಿಸುತ್ತದೆ. ಸುಗಮ ಸಂಚಾರಕ್ಕೆಂದು ನಿರ್ಮಿಸಲಾದ ಅಂಡರ್‌ಪಾಸುಗಳು ಸಾಮಾನ್ಯ ಮಳೆಗೇ ನೀರು ನಿಂತು ಕೆರೆಯಂತಾಗಿ ಬಿಡುತ್ತವೆ. ತಗ್ಗು ಪ್ರದೇಶದ ಮನೆಗಳಿಗೆ ಪ್ರತೀ ವರ್ಷ ಮಳೆ ನೀರು ನುಗ್ಗಿ ಮಾಡುವ ಹಾನಿಯಂತೂ ಅನುಭವಿಸಿದವರಿಗೇ ಗೊತ್ತು. ಭಾರೀ ಮಳೆಗೆ ರಸ್ತೆಗೆ ಉರುಳುವ ಮರಗಳು, ಕೋಡಿ ಹರಿಯುವ ಕೆರೆಗಳೂ ಜನಜೀವನಕ್ಕೆ ಆತಂಕವನ್ನು ಮೂಡಿಸುವುದು ಮಾಮೂಲಿಯಾಗಿದೆ. ಮಳೆಗೆ ನಗರದಲ್ಲಿ ಹಾವುಗಳೂ ಚೇಳುಗಳು ಕಾಣಿಸಿಕೊಂಡು ಮನೆಗೆ ನುಗ್ಗಿವೆ! 

ನಗರಗಳಲ್ಲಿ ಮಳೆಗಾಲದ ತಯಾರಿ ತ್ವರಿತಗತಿಯಲ್ಲಿ ಆರಂಭಿಸ ಬೇಕಾಗಿದೆ. ಹೂಳು, ಕಸ ತುಂಬಿಕೊಂಡಿರುವ ರಸ್ತೆಗಳು ಹಾಗೂ ಮುಖ್ಯವಾಗಿ ರಾಜಕಾಲುವೆಗಳನ್ನು ಮೋರಿಗಳನ್ನು ಹೂಳಿನಿಂದ ಮುಕ್ತಗೊಳಿಸಬೇಕು. ನೀರು ಸರಾಗವಾಗಿ ಹರಿದು ಹೋದರೆ ಸಹಜವಾಗಿ ರಸ್ತೆಗಳಲ್ಲಿ ನೀರು ನಿಲ್ಲದು. ಬೆಂಗಳೂರಿನಂತಹ ನಗರದ ದೊಡ್ಡ ಸಮಸ್ಯೆಯೇ ಹೂಳಿನಿಂದ ಕಟ್ಟಿಕೊಂಡಿರುವ ಚರಂಡಿ, ಮೋರಿಗಳು. ಕಳೆದ ವರ್ಷ ಬೆಂಗಳೂರಿನ ಮೈಸೂರು ರಸ್ತೆ ಅಕ್ಷರಶಃ ನದಿಯಂತಾಗಿ ಬೋಟ್‌ತಂದು ಸಿಕ್ಕಿ ಹಾಕಿಕೊಂಡಿದ್ದ ಜನರನ್ನು ಪಾರು ಮಾಡಿದ ದುರವಸ್ಥೆ ಇನ್ನೂ ನೆನಪಿಂದ ಮಾಸಿಲ್ಲ, ಅಷ್ಟರಲ್ಲೇ ಮತ್ತೂಂದು ಮಳೆಗಾಲ ಮುಂದೆ ಬಂದು ನಿಂತಿದೆ. 

ಹಳ್ಳಿ ಜನರಿಗೆ ವರವಾಗುವ ಮಳೆ ನಗರದ ಜನರಿಗೆ ಭಯಾನಕವಾಗಿ ಕಾಡುವುದೇ ಹೀಗೆ. ಮೊನ್ನೆಯಷ್ಟೇ ಮಂಗಳೂರು ಮಳೆ ಯಿಂದ ಪಡಬಾರದ ಪಾಡು ಪಟ್ಟಿದೆ. ಮುಂಬಯಿ ಸೇರಿದಂತೆ ಬಹುತೇಕ ಎಲ್ಲ ನಗರಗಳ ಅವಸ್ಥೆಯೂ ಇಷ್ಟೇ. ಸರಕಾರ ಆದಷ್ಟು ಬೇಗ ಗಮನ ಹರಿಸಬೇಕು. ಮನೆ ಮುಂದಿನ, ಪಾರ್ಕು ಗಳಲ್ಲಿರುವ ಅಪಾಯದಂತೆ ಕಾಣುವ ಮರಗಳ ಗೆಲ್ಲು ಕಡಿದು ಮುಂದಾಗುವ ಅಪಾಯದಿಂದ ಪಾರಾಗಬಹುದು. ಮಳೆ ಬಂತೆಂದರೆ ವೃದ್ಧರಿಗೆ ಮಕ್ಕಳಿಗೆ ಅನಾರೋಗ್ಯದ ಸಮಸ್ಯೆಗಳೂ ಆರಂಭವಾಗುತ್ತವೆ. ಮುಂಚಿತವಾಗಿ ಜನೆರಿಕ್‌ ಔಷಧಾಲಯಗಳಲ್ಲಿ ಸಾಮಾನ್ಯ ಜ್ವರ ಕೆಮ್ಮು ಶೀತದ ಔಷಧಿ ತ್ವರಿತ ಮತ್ತು ಸುಲಭವಾಗಿ ದೊರೆಯುವಂತೆ ಸರಕಾರ ಗಮನಿಸಬೇಕು.

ಮಳೆಗಾಲ ಪ್ರಕೃತಿಯ ಒಂದು ನಿಯಮಿತ ನಡೆ. ಕಾದ ಭೂಮಿ ಸಹಜವಾಗಿ ಮಳೆಗೆ ಕಾಯುತ್ತಿರುತ್ತದೆ. ಮುಂದಿನ ನಮ್ಮದೇ ಅಗತ್ಯಗಳ  ಪೂರೈಕೆಗೆ ನಾವು ಸಜ್ಜಾಗುತ್ತೇವೆ.  ನಿಸರ್ಗದ ನಡೆಗೆ ವಿರುದ್ಧವಾಗಿ ನಡೆಯುತ್ತಿರುವುದರಿಂದಲೇ ಸುತ್ತಮುತ್ತ  ಏರು ಪೇರುಗಳು ಕಾಣಿಸಿಕೊಂಡರೂ ನಾವು ಪಾಠ ಕಲಿತಂತಿಲ್ಲ. ಮರೆತು ನಡೆಯುವ ನಮ್ಮ ನಡೆಗೆ ನಾವು ಶುಲ್ಕ ತೆರಬೇಕಾಗುತ್ತದೆ. ಮಳೆ ಗಾಲದ ಸಮಸ್ಯೆಗಳೂ ಅಂಥಹುದೇ ಕೆಲವು ಶುಲ್ಕಗಳು. ಇಷ್ಟೆಲ್ಲ ವೈರುಧ್ಯಗಳಿದ್ದರೂ ಈ ಮಳೆಗಾಲ, ನಗರ ಪ್ರದೇಶದ ಹಾಗೂ ಹಳ್ಳಿಯ ಜನರೆಲ್ಲರಿಗೂ, ರೈತಾಪಿ ವರ್ಗದವರಿಗೂ ಸುರಕ್ಷಿತ ಭಾವದೊಂದಿಗೆ ಸಂತಸ ತರಲಿ. 

ಶಿವಸುಬ್ರಹ್ಮಣ್ಯ ಕೆ.

Advertisement

Udayavani is now on Telegram. Click here to join our channel and stay updated with the latest news.

Next