Advertisement

ನೂತನ ಮಂಡಳಿಯಿಂದ ಪಿಯು ಪರೀಕ್ಷೆಗೆ ಸಿದ್ಧತೆ

03:35 PM Dec 13, 2022 | Team Udayavani |

ದಾವಣಗೆರೆ: ಇದೇ ಮೊದಲ ಬಾರಿಗೆ ನೂತನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ಪದವಿ ಪೂರ್ವ ಶಿಕ್ಷಣ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಭರದ ಸಿದ್ಧತೆ ನಡೆಸಿದೆ.

Advertisement

ಪ್ರಸಕ್ತ ಸಾಲಿನ (2022-23ನೇ)ಸಾಲಿನ ಪದವಿ ಪೂರ್ವ ಪರೀಕ್ಷೆಗಳನ್ನು ನೂತನ ಮಂಡಳಿಯ ಮೂಲಕ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಪರೀಕ್ಷಾ ಕಾರ್ಯ ನಿರ್ವಹಣೆಯಲ್ಲಿ ಅನುಭವ ಇರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಪದವಿ ಪೂರ್ವ ಪರೀಕ್ಷಾ ಕಾರ್ಯ ಪೂರ್ಣಗೊಳ್ಳುವವರೆಗೆ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಥಮ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ಪದವಿ ಪೂರ್ವ ಶಿಕ್ಷಣ ಪರೀಕ್ಷೆ ನಡೆಸಲು ಬೇಕಾದ ಅಗತ್ಯ ಸಿದ್ಧತೆ ನಡೆಸಿರುವ ಸರ್ಕಾರ, ಪ್ರಥಮ ಹಂತವಾಗಿ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಮಂಡಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳನ್ನು ಪರೀಕ್ಷಾ ಕಾರ್ಯ ನಿರ್ವಹಣೆಗಾಗಿ ನಿಯೋಜಿಸಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಲೀನಗೊಳಿಸಿರುವ ರಾಜ್ಯ ಸರ್ಕಾರ, ಇತೀ¤ಚೆಗಷ್ಟೇ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಮರು ನಾಮಕರಣ ಮಾಡಿತ್ತು. ಹೊಸದಾಗಿ ರಚನೆಗೊಂಡ ಈ ಮಂಡಳಿಯ ಮೂಲಕವೇ ಪ್ರಸಕ್ತ ವರ್ಷದ ಪದವಿ ಪೂರ್ವ ಶಿಕ್ಷಣ ಪರೀಕ್ಷೆಗಳು ಪ್ರಥಮ ಬಾರಿಗೆ ನಡೆಯಲಿವೆ.

ಈ ಮೊದಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಇತರೆ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಪದವಿ ಪೂರ್ವ ಶಿಕ್ಷಣ ಪರೀಕ್ಷೆಗಳನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುತ್ತಿತ್ತು. ಈ ಬಾರಿ ಒಂದೇ ಮಂಡಳಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಎರಡೂ ಪರೀಕ್ಷೆಗಳನ್ನು ನಡೆಸುತ್ತಿರುವುದು ವಿಶೇಷ.

Advertisement

ಬಹು ಆಯ್ಕೆ ಪ್ರಶ್ನೆಗಳು

ಹೊಸ ಪರೀಕ್ಷಾ ಮಂಡಳಿ ನಡೆಸುವ ಪದವಿ ಪೂರ್ವ ಶಿಕ್ಷಣ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಈ ಬಾರಿ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳಿವೆ. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಇರಲಿದ್ದು, ವಿದ್ಯಾರ್ಥಿಗಳು ಸುಲಭವಾಗಿ ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಿ 20 ಅಂಕ ಗಳಿಸಲು ಸಹಕಾರಿಯಾಗಲಿದೆ. ಈ ಮೊದಲು ನಡೆಯುತ್ತಿದ್ದ ಪರೀಕ್ಷೆಗಳಲ್ಲಿ ಬಹು ಆಯ್ಕೆ ಪ್ರಶ್ನೆಗಳು ಇರುತ್ತಿರಲಿಲ್ಲ. ಇದರಿಂದ ಪಿಯು ಪರೀಕ್ಷೆಯಲ್ಲಿ ಉತೀ¤ರ್ಣರಾಗುವವರ ಸಂಖ್ಯೆಯೂ ಹೆಚ್ಚಾಗಲಿದೆ ಎಂಬುದು ಇಲಾಖೆಯ ನಿರೀಕ್ಷೆ.

ಮಂಡಳಿ ವಿಲೀನಕ್ಕೆ ಪರ-ವಿರೋಧ

ಎಸ್ಸೆಸ್ಸೆಲ್ಸಿ ಮಂಡಳಿ ಹಾಗೂ ಪಿಯು ಇಲಾಖೆ ವಿಲೀನ ಪ್ರಕ್ರಿಯೆಗೆ ಪಪೂ ಇಲಾಖೆಯೊಳಗೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಿಲೀನದಿಂದ ಮಂಡಳಿ ವ್ಯಾಪ್ತಿಯಲ್ಲಿ ಬರುವ ಒಂಭತ್ತು, ಹತ್ತನೇ ತರಗತಿಗಳಿಗೆ ಹಿರಿಯ ಉಪನ್ಯಾಸಕರು ಪಾಠ ಮಾಡಲು ಹೋಗಬೇಕಾಗಬಹುದು. ಇದು ಅವರಿಗೆ ಹಿಂಬಡ್ತಿ ಎನ್ನಿಸಬಹುದು. ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ ಬಹು ಆಯ್ಕೆ ಪ್ರಶ್ನೆಯಿಂದ ಪಾಸಾಗುವರ ಸಂಖ್ಯೆ ಹೆಚ್ಚಾಗಬಹುದು. ಆದರೆ ಶಿಕ್ಷಣದ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂಬುದು ವಿಲೀನ ವಿರೋಧಿಸುವವರ ವಾದವಾಗಿದೆ. ಮಂಡಳಿ ವಿಲೀನದಿಂದ ಪಪೂ ವಿಭಾಗಕ್ಕೂ ಪ್ರತ್ಯೇಕ ಆಡಳಿತ, ಶಿಕ್ಷಣಕ್ಕೆ ನಿರ್ವಹಣಾ ವಿಭಾಗ ದೊರೆತು ಸಿಬ್ಬಂದಿ ಹೆಚ್ಚಳವಾಗಲಿದೆ. ಪ್ರೌಢಶಾಲಾ ಶಿಕ್ಷಕರ ಜತೆಗೆ ಪಿಯು ಅಧಿಕಾರಿ, ಸಿಬ್ಬಂದಿಗೂ ಮುಂಬಡ್ತಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಪಿಯು ಮೂಲ ಸೌಲಭ್ಯ ಹೆಚ್ಚಾಗಲಿದೆ. 9-10ನೇ ತರಗತಿಗಳಿಗೂ ಉಪನ್ಯಾಸಕರು ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳ ಮುಂದಿನ ಪದವಿ ಶಿಕ್ಷಣಕ್ಕೂ ಇದು ಅನುಕೂಲವಾಗಲಿದೆ ಎಂಬುದು ವಿಲೀನದ ಪರ ಇರುವವರ ಸಮರ್ಥನೆ.

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next