Advertisement

ಒಲಿಂಪಿಕ್ಸ್‌ಗೆ ತಯಾರಿ: ಸರಕಾರದ ನಡೆ ಸ್ವಾಗತಾರ್ಹ

02:11 AM Aug 21, 2021 | Team Udayavani |

ಟೋಕಿಯೊ ಒಲಿಂಪಿಕ್ಸ್‌ ಮುಗಿಯುತ್ತಿದ್ದಂತೆ ರಾಜ್ಯ ಸರಕಾರ ಸಮರೋಪಾದಿಯಲ್ಲಿ ಮುಂದಿನ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಈಗಲೇ ತಯಾರಿ ಶುರು ಮಾಡಿರುವ ರಾಜ್ಯದ ಕ್ರೀಡಾ ಇಲಾಖೆ, ಈಗಿನಿಂದಲೇ ಕ್ರೀಡಾಳುಗಳ ತಯಾರಿ ಮತ್ತು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನೂ ಆರಂಭಿಸಿದೆ.

Advertisement

ಭಾರತೀಯರೇಕೆ ಹೆಚ್ಚು ಒಲಿಂಪಿಕ್ಸ್‌ ಪದಕ ಗೆಲ್ಲಲ್ಲ ಎಂಬುದು ಬಹು ಹಿಂದಿನಿಂದಲೂ ಇರುವ ಪ್ರಶ್ನೆ. ಇದಕ್ಕೆ ಉತ್ತರ ನಮ್ಮಲ್ಲಿ ಕ್ರೀಡೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು. ಹೌದು, ಇಡೀ ದೇಶಕ್ಕೆ ಅನ್ವಯಿಸಿ ಹೇಳುವುದಾದರೆ ಈ ಮಾತು ಒಪ್ಪುವಂಥದ್ದೇ. ಆದರೆ 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಬಂದ ಮೇಲೆ ಒಲಿಂಪಿಕ್ಸ್‌ ಮೇಲೆ ಹೆಚ್ಚಿನ ಗಮನ ನೀಡಲಾಗಿತ್ತು. ಒಂದು ಒಲಿಂಪಿಕ್ಸ್‌ ಮುಗಿಯುತ್ತಿದ್ದಂತೆಯೇ ಮುಂದಿನ ಒಲಿಂಪಿಕ್ಸ್‌ ಗಾಗಿ ಮೊದಲೇ ತಯಾರಿ ಮತ್ತು ಶ್ರೇಷ್ಠ ಕ್ರೀಡಾಳುಗಳನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವುದು ಕೇಂದ್ರ ಸರಕಾರದ ಯೋಜನೆಯಲ್ಲಿ ಸೇರಿತ್ತು.

ಹಾಗೆಯೇ ಒಡಿಶಾ ಸರಕಾರ ಕೂಡ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉತ್ತಮ ಕೆಲಸವನ್ನೇ ಮಾಡಿದೆ. ಮಹಿಳಾ ಮತ್ತು ಪುರುಷರ ಹಾಕಿ ತಂಡಗಳಿಗೆ ಪ್ರಾಯೋಜಕತ್ವ ಕೊಟ್ಟ ಒಡಿಶಾ ಸರಕಾರ, ಇವರ ಬೆಳವಣಿಗೆಗಾಗಿ 100 ಕೋಟಿ ರೂ.ಗಳನ್ನೂ ವೆಚ್ಚ ಮಾಡಿತ್ತು. ಹೀಗಾಗಿಯೇ ಪುರುಷರ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಹಾಗೂ ಮಹಿಳಾ ತಂಡ ವಿರೋಚಿತ ಪ್ರದರ್ಶನ ನೀಡಲು ಕಾರಣವಾಯಿತು ಎಂಬ ಮಾತುಗಳು ಎಲ್ಲ ಕಡೆಯಿಂದಲೂ ಕೇಳಿಬರುತ್ತಿವೆ.

ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಇತ್ತೀಚಿನ ಕ್ರಮಗಳೂ ಅಷ್ಟೇ ಆಶಾದಾಯಕವಾಗಿವೆ. ಮೊದಲಿಗೆ ಪೊಲೀಸ್‌ ಇಲಾಖೆಯ ನೇಮಕಾತಿ ವೇಳೆಯಲ್ಲಿ ಶೇ.2ರಷ್ಟು ಕ್ರೀಡಾ ಮೀಸಲಾತಿ ಕೊಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಒಂದು ರೀತಿಯಲ್ಲಿ ಇದೂ ಉತ್ತಮವಾದ ಪ್ರೋತ್ಸಾಹಕ ಕ್ರಮವೇ. ಏಕೆಂದರೆ ಪೊಲೀಸ್‌ ಇಲಾಖೆಯಲ್ಲಿ ಸೇರುವ ದೃಷ್ಟಿಯಿಂದಾದರೂ ಕೆಲವರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬಹುದು. ಎಲ್ಲೋ ತೆರೆಮರೆಯಲ್ಲೇ ನಶಿಸಿ ಹೋಗುವಂಥ ಪ್ರತಿಭೆಗಳೂ ಅರಳಬಹುದು. ಇದರ ಜತೆಗೆ ಕಾಲೇಜುಗಳಲ್ಲಿ ಉತ್ತಮ ಕ್ರೀಡಾ ಸಾಧನೆ ಮಾಡಿದವರಿಗೆ 10 ಸಾವಿರ ವಿದ್ಯಾರ್ಥಿ ವೇತನದಂಥ ಕ್ರಮಗಳನ್ನು ತರಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಇದರ ಆಶಯವೂ ಕ್ರೀಡೆಯಲ್ಲಿ ಹೆಚ್ಚೆಚ್ಚು ಮಂದಿ ಪಾಲ್ಗೊಳ್ಳಬೇಕು ಎಂಬುದಷ್ಟೇ ಆಗಿದೆ.

ಈಗ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಕ್ರೀಡಾ ಸಚಿವರಾದ ಡಾ| ನಾರಾಯಣ ಗೌಡ ನೇತೃತ್ವದಲ್ಲಿ ಉತ್ತಮವಾದ ಕ್ರೀಡಾ ಪಟುಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ಅವರಿಗೆ ಉತ್ತಮ ತರಬೇತಿ ಕೊಡಲು ರಾಜ್ಯ ಸರಕಾರ ಮುಂದಾಗಿದೆ. ತರಬೇತಿ ಶಿಬಿರಗಳು, ಕ್ರೀಡಾ ಕೂಟಗಳ ಮೂಲಕ ಅವರ ಕ್ರೀಡಾ ಸಾಮರ್ಥ್ಯ ಗುರುತಿಸಲಾಗುತ್ತದೆ. ಇದಕ್ಕಾಗಿ ಕ್ರೀಡಾ ಸಚಿವರ ನೇತೃತ್ವದಲ್ಲಿ ಉನ್ನತ ಅಧಿಕಾರ ಸಮಿತಿ ರಚಿಸಲಾಗಿದೆ. ಅಲ್ಲದೆ ಇಲಾಖೆಯ ಅಧಿಕಾರಿಗಳು, ಕ್ರೀಡಾ ಸಾಧಕರು ಈ ಸಮಿತಿಯಲ್ಲಿ ಇದ್ದಾರೆ. ಏನೇ ಆಗಲಿ, ಸರಕಾರ ಕ್ರೀಡೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವುದು ಉತ್ತಮ ಸಂಗತಿಯೇ. ನಿಜವಾಗಿಯೂ ಕ್ರೀಡಾಪಟುಗಳನ್ನು ಹುಡುಕಿ ಅವರಿಗೆ ಉತ್ತಮ ತರಬೇತಿ ನೀಡಿದರೆ ನಿಜಕ್ಕೂ ಒಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಇನ್ನಷ್ಟು ಪದಕ ತಂದು ಕೊಟ್ಟೇ ಕೊಡುತ್ತಾರೆ. ಈ ನಿಟ್ಟಿನಲ್ಲಿ ಸರಕಾರದ ಶ್ರಮ ಸಫ‌ಲವಾಗಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next