ಗದಗ: ನವರಾತ್ರಿ ಹಿನ್ನೆಲೆಯಲ್ಲಿ ಶಕ್ತಿದೇವತೆಗಳ ಆರಾಧನೆಗಾಗಿ ಅವಳಿನಗರದ ಪ್ರಮುಖ ದೇಗುಲಗಳಲ್ಲಿ ಪೂರ್ವಸಿದ್ಧತೆಗಳು ಭರದಿಂದ ಸಾಗಿದ್ದು, ಕೆಲ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಕಳೆದೆರಡು ವರ್ಷದಿಂದ ಕೋವಿಡ್ ಆವರಿಸಿದ್ದರಿಂದ ದಸರಾ ಸೇರಿದಂತೆ ಬಹುತೇಕ ಎಲ್ಲ ಹಬ್ಬಗಳು ಸರಳ ಹಾಗೂ ಸಂಕ್ಷಿಪ್ತವಾಗಿ ಆಚರಿಸುವಂತಾಗಿತ್ತು. ಪುರಾಣ ಪ್ರವಚನ, ಪಾರಾಯಣ, ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಗಳಿಗೂ ಅವಕಾಶವಿಲ್ಲದಂತಾಗಿತ್ತು. ಆದರೆ, ಇತ್ತೀಚೆಗೆ ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಈ ಬಾರಿ ದಸರಾ ಅದ್ಧೂರಿ ಆಚರಣೆಗೆ ಜನ ಉತ್ಸುಕರಾಗಿದ್ದಾರೆ.
ಅವಳಿನಗರದ ಸರಾಫ್ ಬಜಾರ್‌ನಲ್ಲಿರುವ ಅಂಬಾಭವಾನಿ ದೇವಸ್ಥಾನ, ಮುಳಗುಂದ ರಸ್ತೆಯ ನಿಸರ್ಗ ಬಸ್ ನಿಲ್ದಾಣ ಸಮೀಪದ ಅಂಬಾಭವಾನಿ ಸನ್ನಿಧಾನ, ಬೆಟಗೇರಿಯ ಅಂಬಾಭವಾನಿ ದೇಗುಲ, ಐತಿಹಾಸಿಕ ಬನಶಂಕರಿ ದೇವಸ್ಥಾನ, ಉಡಚಮ್ಮ ದೇವಿ, ಬನ್ನಿ ಮಹಾಂಕಾಳಿ, ಕನ್ನಿಕಾಪರಮೇಶ್ವರಿ, ದುರ್ಗಾದೇವಿ, ಹುಲಿಗೆಮ್ಮ, ಮಹಾಲಕ್ಷ್ಮೀ, ಅಂಬಾಭವಾನಿ, ಬನಶಂಕರಿ, ತುಳಜಾಭವಾನಿ. ಕರೆಮ್ಮ ದೇವಿ, ರಾಜೀವಗಾಂ ಧಿ ನಗರದ ಶ್ರೀದೇವಿ, ಹರ್ಲಾಪು ರದ ದಾನಮ್ಮದೇವಿ, ಬೆಟಗೇರಿಯ ಹಳೇ ಬನಶಂಕರಿ, ಡೋಹರ ಗಲ್ಲಿಯ ಶ್ರೀದೇವಿ, ಅಮರೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಅಡವೀಂದ್ರ ಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರ ಹಾಗೂ ಅಕ್ಕನ ಬಳಗ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಸುಣ್ಣ-ಬಣ್ಣ ಹಾಗೂ ಸ್ವತ್ಛತಾ ಕಾರ್ಯಗಳು ಬರದಿಂದ ಸಾಗಿವೆ.
ನವರಾತ್ರಿ ನಿಮಿತ್ತ ವಿಶೇಷ ಪೂಜೆ: ಅವಳಿನಗರ ಸೇರಿದಂತೆ ಬಹುತೇಕ ಶಕ್ತಿ ದೇವತೆಗಳ ಸನ್ನಿಧಾನಗಳಲ್ಲಿ ಅ.7ರಂದು ಸಂಜೆ ದೇವಿಗೆ ಅಲಂಕಾರ ಸೇವೆ ಹಾಗೂ ಘಟಸ್ಥಾಪನೆ, ಅ.10ರಂದು ಲಲಿತ ಪಂಚಮಿ ಆಚರಣೆ, ಅ.13ರಂದು ದುರ್ಗಾಷ್ಟಮಿ, ಅ.14ರಂದು ಮಹಾನವಮಿ ನಿಮಿತ್ತ ಆಯುಧ ಪೂಜೆ ನೆರವೇರಿಸಲಾಗುತ್ತದೆ. ಅ.15ರಂದು ವಿಜಯದಶಮಿ ನಿಮಿತ್ತ ಜಗನ್ಮಾತೆಗೆ ವಿಶೇಷ ಪೂಜೆ ಹಾಗೂ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿಸಲಾಗುತ್ತದೆ.
ಝಗಮಗಿಸುವ ದೀಪಾಲಂಕಾರ: ಇಲ್ಲಿನ ಗಂಗಾಪುರ ಸರ್ಕಲ್‌ನಲ್ಲಿರುವ ದುರ್ಗಾ ದೇವಿ ಸನ್ನಿಧಾನ ಮತ್ತು ಶತಮಾನ ಕಂಡಿರುವ ಬೆಟಗೇರಿಯ ಅಂಬಾಭವಾನಿ ಸನ್ನಿಧಾನ ನವರಾತ್ರಿ ಸ್ವಾಗತಕ್ಕೆ ಸಿದ್ಧಗೊಂಡಿವೆ. ಅಮಾವಾಸ್ಯೆಗೂ ಎರಡು ದಿನಗಳ ಮುನ್ನವೇ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ.
ಅಂಬಾರಿ ಮೆರವಣಿಗೆಗೆ ಚಿಂತನೆ: ನವರಾತ್ರಿ ಕೊನೆ ದಿನ ವಿಜಯದಶಮಿ ನಿಮಿತ್ತ ಸರಾಫ್ ಬಜಾರ್‌ನಲ್ಲಿರುವ ಅಂಬಾ ಭವಾನಿ ದೇಗುಲದಿಂದ ಬೆಳ್ಳಿ ಅಂಬಾರಿ ಅದ್ಧೂರಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಕೋವಿಡ್‌ನಿಂದ ಮೆರವಣಿಗೆ ಕೈಬಿಡಲಾಗಿತ್ತು. ಆದರೆ, ಈ ಬಾರಿ ಸೋಂಕಿನಲ್ಲಿ ಇಳಿಕೆಯಾಗಿದ್ದು, ಮೆರವಣಿಗೆಗೆ ಎಸ್ ಎಸ್‌ಕೆ ಸಮಾಜದ ಪ್ರಮುಖರು ಚಿಂತಿಸುತ್ತಿರುವುದಾಗಿ ಪ್ರಮುಖ ಶ್ರೀಕಾಂತ ಕಟವಟೆ ತಿಳಿಸಿದರು.