Advertisement

ಹೋಳಿ ಹುಣ್ಣಿಮೆ ಸಂಭ್ರಮಕ್ಕೆ ಸಜ್ಜಾದ ಜನತೆ

03:48 PM Mar 16, 2022 | Team Udayavani |

ಹಾವೇರಿ: ರಂಗಿನಾಟದ ಹೋಳಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಯುವಕರು, ಮಕ್ಕಳು ಸೇರಿದಂತೆ ಮಹಿಳೆಯರು ಸಜ್ಜಾಗಿದ್ದು, ನಗರದ ಪ್ರತಿಯೊಂದು ಓಣಿ, ಬೀದಿಗಳಲ್ಲಿ ಹಲಗೆಯ ಸದ್ದು ಜೋರಾಗಿ ಕೇಳಿ ಬರುತ್ತಿದೆ.

Advertisement

ಕಳೆದ ವಾರದಿಂದ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಯುವಕರು ಹಲಗಿ ಬಾರಿಸಿ ಖುಷಿ ಪಡುತ್ತಿದ್ದಾರೆ. ಆಧುನಿಕತೆ ಪರಿಣಾಮದಿಂದ ಚರ್ಮದ ಹಲಗಿ ಕಣ್ಮೆರೆಯಾಗುತ್ತಿದ್ದು, ಅದರ ಜಾಗದಲ್ಲಿ ಫೈಬರ್‌, ಪ್ಲಾಸ್ಟಿಕ್‌ ತಮಟೆ ಸದ್ದು ಮಾಡುತ್ತಿವೆ. ಕೆಲ ಯುವಕರು ಹಲಗಿಯಲ್ಲಿ ಬಗೆಬಗೆಯ ಸ್ವರ ನುಡಿಸುವ ಮೂಲಕ ಸಂತಸಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಯುವಕರು ಗುಂಪು ಕಟ್ಟಿಕೊಂಡು ಲಯಬದ್ಧವಾಗಿ ಹಲಗೆ ನುಡಿಸಿದರೆ, ಚಿಕ್ಕಮಕ್ಕಳು ಹತ್ತಾರು ಬಗೆಯಲ್ಲಿ ಬಾರಿಸಿ ಖುಷಿ ಪಡುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.

ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ: ಹೋಳಿ ಆಚರಣೆಯ ವಿವಿಧ ಬಗೆಯ ಬಣ್ಣ, ಸಾಮಗ್ರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೊಸ ವಿನ್ಯಾಸ, ಗಾತ್ರದ ಹಲಗೆಗಳು, ವಿವಿಧ ಬಗೆಯ ಮುಖವಾಡಗಳು ಸಹ ಗಮನ ಸೆಳೆಯುತ್ತಿವೆ. ಹಾವೇರಿಯ ಏಲಕ್ಕಿ ಓಣಿ, ದೇಸಾಯಿ ಗಲ್ಲಿ, ಅಕ್ಕಿಪೇಟಿ, ಮುಷ್ಠೆàರ ಓಣಿ, ಶಿವಾಜಿ ನಗರ, ನಾಗೇಂದ್ರನಮಟ್ಟಿ, ಪುರದ ಓಣಿ ಸೇರಿದಂತೆ ನಗರದ ವಿವಿಧ ಬಡಾವಣೆ, ಗಲ್ಲಿ-ಗಲ್ಲಿಗಳ ವಿವಿಧೆಡೆ ಈಗಾಗಲೇ ರತಿ-ಕಾಮಣ್ಣರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಚಾವಡಿ ವೃತ್ತದಲ್ಲಿ ಹುಣ್ಣಿಮೆ ದಿನ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ವಯಸ್ಸಿನ ಹಂಗಿಲ್ಲದೆ ಎಲ್ಲರೂ ಕೂಡಿ ಬಣ್ಣದ ಲೋಕದಲ್ಲಿ ತೇಲಾಡಲು ಜನತೆ ಕಾತುರರಾಗಿದ್ದಾರೆ.

ವಿವಿಧ ಮನರಂಜನಾ ಕಾರ್ಯಕ್ರಮ: ಹೋಳಿ ಹಬ್ಬದ ನಿಮಿತ್ತ ಮಂಗಳವಾರ ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಭಗವಾ ಧ್ವಜದೊಂದಿಗೆ ಬೈಕ್‌ ರ್ಯಾಲಿ ನಡೆಸಲಾಗಿದೆ. ಮಾ.16ರಂದು ಸಂಜೆ 7ಕ್ಕೆ ಪುರದ ಓಣಿಯಲ್ಲಿ ವಿದೇಶಿ ಮುತ್ತೈದೆಯರಿಂದ ಗಂಡು ಮುತ್ತೈದೆಯರಿಗೆ ಕಂಕಣ ಕಟ್ಟುವ ಕಾರ್ಯಕ್ರಮ, ವಿದೇಶಿ ಮುತ್ತೈದೆಯರಿಂದ ಗಂಡು ಮುತ್ತೈದೆಯರಿಗೆ ಉಡಿ ತುಂಬುವ ಮತ್ತು ಆರತಿ ಬೆಳಗುವ ಕಾರ್ಯಕ್ರಮ, ವಿದೇಶಿ ಮುತ್ತೈದೆಯರಿಂದ ನೃತ್ಯ ನಡೆಯಲಿದೆ. ಬಳಿಕ ಪುರದ ಓಣಿಯಲ್ಲಿ ಜೀವಂತ ಕಾಮ-ರತಿ ನಗಿಸುವ ಸ್ಪರ್ಧೆ ನಡೆಯಲಿದೆ. ಮಾ.17ರಂದು ರಾತ್ರಿ 8ಗಂಟೆಗೆ ಹಾನಗಲ್ಲ ರಸ್ತೆಯ ಹೊಸ ಕಾಳು-ಕಡಿ ಮಾರುಕಟ್ಟೆ ಪ್ರಾಂಗಣದಲ್ಲಿ “ಚದ್ದರದಲ್ಲಿ ಚಂದಮಾಮ’ ಎಂಬ ಕಾಮನ ಹಾಸ್ಯದ ಹೊನಲು ಆಯೋಜಿಸಲಾಗಿದೆ. ಮಾ.18ರಂದು ಸಂಜೆ 5ಕ್ಕೆ ಅಡ್ಡ ಸೋಗಿನ ಸ್ಪರ್ಧೆ ಜರುಗಲಿದೆ. ಮಾ.19ರಂದು ರಂಗು-ರಂಗಿನ ಹೋಳಿ ಹಬ್ಬ ಆಚರಣೆ, ಕಾಮ ದಹನ ನಡೆಯಲಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಹೋಳಿ ಹಬ್ಬ ಈ ವರ್ಷ ಹೊಸ ರಂಗು ಪಡೆದಿದೆ. ಹಾವೇರಿ ನಗರದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಮಾ.15ರಿಂದ ಮಾ.18ರವರೆಗೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾ.19ರಂದು ರಂಗು-ರಂಗಿನ ಹೋಳಿ ಹಬ್ಬ ಆಚರಣೆ, ಕಾಮ ದಹನ ನಡೆಯಲಿದೆ.

Advertisement

-ಗಿರೀಶ ಗುಮಕಾರ, ಅಧ್ಯಕ್ಷರು,ಹಾವೇರಿ ಹೋಳಿ ಹಬ್ಬ

ಸಮಿತಿ ಹಾವೇರಿ ಸೌಹಾರ್ದದ ನಾಡು. ಹಬ್ಬಗಳನ್ನು ಎಲ್ಲರೂ ಸೇರಿಕೊಂಡು ಬಹಳ ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬದಲ್ಲಿ ಸೋನೇರಿ, ಕೀಲುಎಣ್ಣೆ ಸೇರಿದಂತೆ ರಾಸಾಯನಿಕ ಬಣ್ಣಗಳನ್ನು ಬಳಸದೇ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ಯಾವುದೇ ಸಣ್ಣ ಗಲಾಟೆಗೂ ಆಸ್ಪದ ನೀಡದಂತೆ ಸಂಭ್ರಮದಿಂದ ಹೋಳಿ ಆಚರಿಸೋಣ.

ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next